For the best experience, open
https://m.samyuktakarnataka.in
on your mobile browser.

೨೦೨೯ರ ವೇಳೆಗೆ ಮಹಿಳೆಯರಿಗೆ ಶೇ. ೩೩ ಮೀಸಲಾತಿ

12:50 AM Apr 09, 2024 IST | Samyukta Karnataka
೨೦೨೯ರ ವೇಳೆಗೆ ಮಹಿಳೆಯರಿಗೆ ಶೇ  ೩೩ ಮೀಸಲಾತಿ

ಬೆಂಗಳೂರು: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೩೩ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದು, ೨೦೨೯ರ ಲೋಕಸಭೆ ಚುನಾವಣೆ ವೇಳೆಗೆ ದೇಶಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ ಪ್ರಕಾರ, ಏಪ್ರಿಲ್ ೨೬ರಂದು ನಡೆಯುವ ಚುನಾವಣೆಯ ಅಭ್ಯರ್ಥಿಗಳ ನಾಮನಿರ್ದೇಶನಗಳಲ್ಲಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಇದು ಮಹಿಳಾ ಮೀಸಲಾತಿ ಬಗ್ಗೆ ಚಿಂತೆಯನ್ನು ಹುಟ್ಟುಹಾಕುತ್ತಿದೆ.
ಕೇವಲ ೨೫ ಮಹಿಳೆಯರು ಕಣದಲ್ಲಿ: ೧೪ ಕ್ಷೇತ್ರಗಳಿಗೆ (ಮಾರ್ಚ್ ೨೮ ರಿಂದ ಏಪ್ರಿಲ್ ೪ ರವರೆಗೆ) ನಾಮಪತ್ರ ಸಲ್ಲಿಸಿದ ಒಟ್ಟು ೩೩೮ ಅಭ್ಯರ್ಥಿಗಳ ಪೈಕಿ ಕೇವಲ ೨೫ ಮಹಿಳೆಯರಿದ್ದಾರೆ. ನಾಮಪತ್ರದ ಸಲ್ಲಿಕೆಯ ಶೇಕಡಾ ೮ಕ್ಕಿಂತ ಕಡಿಮೆ ಪ್ರತಿನಿಧಿಸುತ್ತಿದ್ದಾರೆ. ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳಾ ಪ್ರತಿನಿಧಿಗಳ ಭಾಗವಹಿಸುವಿಕೆಯ ಉದ್ದೇಶಿತ ಗುರಿ ಮತ್ತು ಪ್ರಸ್ತುತ ವಾಸ್ತವತೆಯ ನಡುವಿನ ಈ ವ್ಯತ್ಯಾಸವು ಚುನಾವಣಾ ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಬೆಳೆಸುವಲ್ಲಿ ವ್ಯವಸ್ಥಿತ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
ಜಾಗೃತಿ ಅತ್ಯಗತ್ಯ: ಈ ಬಗ್ಗೆ ಮಾತನಾಡಿದ ಕಾರ್ಯಕರ್ತೆ ಸ್ವಾತಿ, ಮಹಿಳಾ ನಾಯಕತ್ವದಲ್ಲಿ ಹೆಚ್ಚೆಚ್ಚು ಮಂದಿ ತೊಡಗಿಸಿಕೊಳ್ಳುವುದು ಬಲವಾದ ಮತ್ತು ಹೆಚ್ಚು ವೈವಿಧ್ಯಮಯ ರಾಷ್ಟçವಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ. ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಅವರ ಕುಂದುಕೊರತೆಗಳನ್ನು ಪರಿಹರಿಸಲು ಸಾಧ ಎಂದು ಪ್ರತಿಪಾದಿಸಿದ್ದು, ರಾಜಕೀಯ ಪ್ರಾತಿನಿಧ್ಯದಲ್ಲಿ ಲಿಂಗ ಅಂತರವನ್ನು ಕಡಿಮೆ ಮಾಡಲು ಜಾಗೃತಿ ಅಭಿಯಾನ, ತರಬೇತಿ, ಸಮಾನ ಸಂಪನ್ಮೂಲ ವಿತರಣೆ ಮತ್ತು ನೀತಿ ಅನುಷ್ಠಾನದಂತಹ ಸಮಗ್ರ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ ಎಂದಿದ್ದಾರೆ.