೨೦ ಗುಂಟೆ ಜಮೀನು ವಿವಾದ: ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ
ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಯಳ್ಳೂರು ಗ್ರಾಮದಲ್ಲಿರುವ ೨೦ ಗುಂಟೆ ಜಾಗದ ವಿಚಾರವಾಗಿ ನಡೆದ ಗಲಾಟೆಯಲ್ಲಿ ೧೫ ಮಂದಿಯ ಗುಂಪು ತಲವಾರ್ ಸೇರಿದಂತೆ ಮಾರಕಾಸ್ತ್ರದಿಂದ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ನಿನ್ನೆ ತಾತ್ರಿ ನಡೆದಿದೆ.
ಗಾಯಗೊಂಡವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಅರವಿಂದ ಪಾಟೀಲ, ಮಹೇಶ ಬಸ್ತವಾಡ್ಕರ್, ಸುಭಾಷ ಕಂಗ್ರಾಳ್ಕರ್, ಸಂದೀಪ ಜಾಧವ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ:
ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿರುವ ೨೦ ಗುಂಟೆ ಜಾಗದ ವಿಚಾರವಾಗಿ ನಿನ್ನೆ ಸಂಜೆ ಈ ಗಲಾಟೆ ನಡೆದಿದೆ. ಮನೆ ಮುಂದೆ ಕುಳಿತಿದ್ದ ಅರವಿಂದ ಜೊತೆಗೆ ಕೆಲ ಯುವಕರಿಂದ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಏಕಾಏಕಿ ೧೫ ಜನರ ಗುಂಪು ಮಾರಕಾಸ್ತ್ರ ಸಮೇತ ಆಗಮಿಸಿ ಹಲ್ಲೆ ನಡೆಸಿದ್ದಾರೆ.
ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿರುವ ೨೦ ಗುಂಟೆ ಜಾಗದ ವಿಚಾರವಾಗಿ ಕೆಲ ದಿನಗಳ ಹಿಂದಷ್ಟೇ ಅರವಿಂದ ಪಾಟೀಲ ಪರ ಡಿಸಿ, ಎಸಿ ಹಾಗೂ ಕೋರ್ಟ್ ಆದೇಶ ನೀಡಿತ್ತು. ಇದಕ್ಕೆ ತಡೆ ಕೋರಿ ಇನ್ನೊಂದು ಗುಂಪು ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಗದಿದ್ದಾಗ ಅರವಿಂದ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.