For the best experience, open
https://m.samyuktakarnataka.in
on your mobile browser.

೨೧ನೇ ಶತಮಾನದಲ್ಲಿ ನೆಟ್ವರ್ಕ್ ಕೇಂದ್ರಿತ ಯುದ್ಧತಂತ್ರ

02:06 AM Mar 09, 2024 IST | Samyukta Karnataka
೨೧ನೇ ಶತಮಾನದಲ್ಲಿ ನೆಟ್ವರ್ಕ್ ಕೇಂದ್ರಿತ ಯುದ್ಧತಂತ್ರ

ರೆವಲ್ಯೂಷನ್ ಇನ್ ಮಿಲಿಟರಿ ಅಫೇರ್ಸ್ (ಆರ್‌ಎಂಎ)' ಎಂಬ ಪದ ಈಗ ಜಗತ್ತಿನಾದ್ಯಂತ ಸೇನೆಗಳಿಗೆ ಚಿರಪರಿಚಿತವಾಗಿದೆ. ಮಿಲಿಟರಿಯಲ್ಲಿ ಪ್ರತಿಯೊಂದು ತಲೆಮಾರೂ ಒಂದು ಅನುಭವವನ್ನು ಪಡೆದುಕೊಂಡು, ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತದೆ. ಇಂತಹ ತಂತ್ರಜ್ಞಾನಗಳು, ಬದಲಾಗುತ್ತಿರುವ ಸೇನಾ ಯೋಜನೆಗಳು, ಕಾರ್ಯತಂತ್ರಗಳು, ಹೋರಾಡುವ ರೀತಿಗಳೊಡನೆ ಮಿಳಿತಗೊಂಡು, ಯುದ್ಧ ನಡೆಯುವ ರೀತಿಯನ್ನೇ ಬದಲಾಯಿಸುತ್ತವೆ. ೨೦ನೇ ಶತಮಾನದಲ್ಲಿ ನಡೆದ ಪ್ರತಿಯೊಂದು ದೊಡ್ಡದಾದ ಯುದ್ಧದಲ್ಲೂ ಹೊಸ ತಂತ್ರಜ್ಞಾನಗಳ ಕಾರಣದಿಂದ ಮಿಲಿಟರಿ ಕಾರ್ಯತಂತ್ರದಲ್ಲಿ ಬದಲಾವಣೆಗಳು ಕಂಡುಬಂದಿವೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಅನ್ವೇಷಣೆಗೊಂಡಿದ್ದ ಮೆಷಿನ್‌ಗನ್‌ಗಳು ಕಂದಕ ಯುದ್ಧದ (ಟ್ರೆಂಚ್ ವಾರ್‌ಫೇರ್) ಚಿತ್ರಣವನ್ನೇ ಬದಲಾಯಿಸಿದ್ದವು. ಎರಡನೇ ಮಹಾಯುದ್ಧದ ವೇಳೆ, ವೇಗವಾಗಿ ಚಲಿಸುತ್ತಿದ್ದ ಟ್ಯಾಂಕ್‌ಗಳು ಮತ್ತು ಬ್ಲಿಟ್ಜ್ಕ್ರಿಗ್ ಎಂಬ ಹೊಸ ಯುದ್ಧ ತಂತ್ರ ಯುದ್ಧದ ಗತಿಯನ್ನೇ ಬದಲಾಯಿಸಿದ್ದವು. ಮೊದಲನೇ ಗಲ್ಫ್ ಯುದ್ಧದ ವೇಳೆ, ಅಮೆರಿಕಾ ಟಾಮ್‌ಹಾಕ್ ಕ್ರೂಸ್ ಕ್ಷಿಪಣಿಗಳು, ವಿಮಾನ ವಾಹಕ ನೌಕೆಗಳಿಂದ ಯುದ್ಧ ವಿಮಾನಗಳನ್ನು ಬಳಸುವಂತಹ ಬದಲಾವಣೆಗಳನ್ನು ಪರಿಚಯಿಸಿ, ಸದ್ದಾಂ ಹುಸೇನ್ ಸೇನೆಯನ್ನು ಸುಲಭವಾಗಿ ಮಣಿಸಿತು. ಬ್ಲಿಟ್ಜ್ಕ್ರಿಗ್ (ಅಂದರೆ ಜರ್ಮನ್ ಭಾಷೆಯಲ್ಲಿಮಿಂಚಿನ ಯುದ್ಧ' ಎಂದರ್ಥ) ಎನ್ನುವುದು ಒಂದು ಕ್ಷಿಪ್ರವಾದ, ಮತ್ತು ಸಂಘಟಿತವಾದ ಮಿಲಿಟರಿ ದಾಳಿಯಾಗಿದ್ದು, ಇದು ಸೈನಿಕರು, ಮತ್ತು ವಾಯುಪಡೆಯನ್ನು ಬಳಸಿಕೊಂಡು, ಶತ್ರುವನ್ನು ವೇಗವಾಗಿ ಮಣಿಸುವ ಕಾರ್ಯತಂತ್ರವಾಗಿದೆ.
ಇಂದಿನ ಯುದ್ಧಗಳು ನೆಟ್‌ವರ್ಕ್ ಕೇಂದ್ರಿತವಾಗಿರುತ್ತವೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್-ಎಐ), ಬಾಹ್ಯಾಕಾಶ, ಮತ್ತು ಸೈಬರ್ ತಂತ್ರಜ್ಞಾನಗಳ ಜೊತೆಗೆ, ಸೆನ್ಸರ್‌ಗಳು, ಡ್ರೋನ್‌ಗಳು ಮತ್ತು ದೀರ್ಘ ವ್ಯಾಪ್ತಿಯ ಆಯುಧಗಳು ಯುದ್ಧರಂಗದಲ್ಲಿ ಬಳಕೆಯಾಗುತ್ತಿವೆ. ಈ ಸಂಯೋಜನೆ ಗುರಿಯನ್ನು ಕ್ಷಿಪ್ರವಾಗಿ ಗುರುತಿಸಿ, ಕ್ರಮ ಕೈಗೊಳ್ಳಲು ಪೂರಕವಾಗಿದೆ.
ಯುದ್ಧಗಳಲ್ಲಿ ಇಂದು ಸಂಬಂಧಿಸಿದ ವ್ಯಾಜ್ಯಗಳೂ ಹೆಚ್ಚಿದ್ದು, ಇದಕ್ಕೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್, ರಷ್ಯಾ ಮತ್ತು ಉಕ್ರೇನ್ ಹಾಗೂ ಇತ್ತೀಚಿನ ಇಸ್ರೇಲ್ ಮತ್ತು ಹಮಾಸ್ ನಡುವಿನ ಗಾಜಾ ಯುದ್ಧಗಳು ಸಾಕ್ಷಿಯಾಗಿವೆ.
ಅರ್ಮೇನಿಯಾ-ಅಜೆರ್ಬೈಜಾನ್ ಯುದ್ಧದ ಪಾಠವೆಂದರೆ, ಯುದ್ಧಗಳಲ್ಲಿ ಡ್ರೋನ್‌ಗಳು ಹೊಂದಿರುವ ಮಹತ್ವದ ಅರಿವು. ಅರ್ಮೇನಿಯಾದ ಅತ್ಯಂತ ಹಳೆಯದಾದ, ಅಸಮರ್ಥ ವಾಯು ರಕ್ಷಣಾ ವ್ಯವಸ್ಥೆಗಳು ಅಜೆರ್ಬೈಜಾನ್ ಹೊಂದಿದ್ದ ಆಧುನಿಕ, ಟರ್ಕಿ ನಿರ್ಮಾಣದ ಬೇರಕ್ತರ್ ಟಿಬಿ೨ ಡ್ರೋನ್‌ಗಳು ಮತ್ತು ಇಸ್ರೇಲಿನ ಕ್ಯಾಮಿಕೇಜ್ ಡ್ರೋನ್‌ಗಳ ದಾಳಿಯಿಂದ ಸೈನಿಕರನ್ನು ಮತ್ತು ಟ್ಯಾಂಕ್‌ಗಳನ್ನು ರಕ್ಷಿಸಲು ವಿಫಲವಾದವು. ಅಜೆರ್ಬೈಜಾನ್ ಡ್ರೋನ್‌ಗಳು ಇಲೆಕ್ಟಾçನಿಕ್ ಯುದ್ಧ ಸಾಮರ್ಥ್ಯ ಹೊಂದಿರದ ಅರ್ಮೇನಿಯಾದ ರಕ್ಷಣಾ ಘಟಕಗಳನ್ನು ಅಪಾರ ಸಂಖ್ಯೆಯಲ್ಲಿ ಯಶಸ್ವಿಯಾಗಿ ನಾಶಪಡಿಸಿದವು.
ಡ್ರೋನ್‌ಗಳು ಕಡಿಮೆ ವೆಚ್ಚದಾಯಕವಾಗಿದ್ದು, ಬಳಸಲೂ ಸುಲಭವಾಗಿವೆ. ಸಣ್ಣ ಡ್ರೋನ್‌ಗಳನ್ನು ಯೋಧರೂ ಬಳಸಲು ಸಾಧ್ಯವಿದೆ. ಗಮನಾರ್ಹವಾಗಿ ಉಕ್ರೇನ್ ಯುದ್ಧ ಸೇರಿದಂತೆ, ಆಧುನಿಕ ಯುದ್ಧಗಳಲ್ಲಿ ಡ್ರೋನ್‌ಗಳು ಪ್ರಮುಖ ಅಂಶಗಳಾಗಿವೆ. ಉಕ್ರೇನಿನ ಬೇರಾಕ್ತರ್ ಟಿಬಿ೨ ಡ್ರೋನ್ ಬಳಕೆ ರಷ್ಯಾ ವಿರುದ್ಧ ಆರಂಭಿಕ ಮೇಲುಗೈ ಒದಗಿಸಿತ್ತು. ಆದರೆ ಬಳಿಕ ರಷ್ಯಾ ಡ್ರೋನ್‌ಗಳನ್ನು ಎದುರಿಸಲು ತನ್ನ ರಕ್ಷಣಾ ವ್ಯವಸ್ಥೆಗಳನ್ನು ಸುಧಾರಿಸಿತು.
ಉಕ್ರೇನಿನ ರೀತಿಯಲ್ಲೇ, ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧವೂ ಆಶ್ಚರ್ಯಕರ ಯುದ್ಧರಂಗದ ಒಳನೋಟಗಳನ್ನು ಒದಗಿಸಿದೆ. ಹಮಾಸ್ ಕೈಗೆಟುಕುವ ಆಯುಧಗಳಾದ ರಾಕೆಟ್‌ಗಳು, ಸಣ್ಣ ಪ್ರಮಾಣದ ಡ್ರೋನ್‌ಗಳು, ಪ್ಯಾರಾಗ್ಲೆಡರ್‌ಗಳು, ಬುಲ್ಡೋಜರ್‌ಗಳು, ಟ್ರಕ್‌ಗಳು, ಹಾಗೂ ಮೋಟರ್ ಸೈಕಲ್‌ಗಳನ್ನು ಒಳಗೊಂಡ ಸಂಘಟಿತ ಆಕ್ರಮಣಗಳನ್ನು ನಡೆಸಿತು. ಇದರ ಪರಿಣಾಮವಾಗಿ, ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ, ಅಫೆಕ್-೧೩ ಉಪಗ್ರಹ ಆಧರಿತ ಅತ್ಯಾಧುನಿಕ ಎಸ್‌ಎಆರ್ (ಸಿಂಥೆಟಿಕ್ ಅಪರ್ಚರ್ ರೇಡಾರ್), ಹಾಗೂ ವಿವಿಧ ಸೆನ್ಸರ್‌ಗಳು, ರೇಡಾರ್‌ಗಳು ಮತ್ತು ವಾಯು ರಕ್ಷಣಾ ಯಾಂತ್ರಿಕ ವ್ಯವಸ್ಥೆಗಳು ಸೇರಿದಂತೆ, ಇಸ್ರೇಲಿನ ಆಧುನಿಕ ರಕ್ಷಣಾ ವ್ಯವಸ್ಥೆಗಳು ಅಪರಿಮಿತವಾದ ರಾಕೆಟ್ ದಾಳಿಗಳ ಮುಂದೆ ಕೈಚೆಲ್ಲುತ್ತವೆ ಎಂಬುದನ್ನೂ ಸೂಚಿಸಿತ್ತು. ಹಮಾಸ್ ಸಂಘಟನೆಯೂ ತನ್ನ ಕಾರ್ಯತಂತ್ರದಲ್ಲಿ ಇಸ್ರೇಲಿ ರಕ್ಷಣಾ ಅಡೆತಡೆಗಳನ್ನು ಭೇದಿಸಲು ವಿವಿಧ ಸರಳ ತಂತ್ರಜ್ಞಾನಗಳನ್ನು ಬಳಸಿಕೊಂಡಿತು. ಈ ಕದನದಿಂದ ಕಲಿತ ಪ್ರಮುಖ ಪಾಠವೆಂದರೆ, ಪತ್ತೆಯಾಗುವುದನ್ನು ತಪ್ಪಿಸುವಲ್ಲಿ, ಆಯುಧಗಳನ್ನು ಸಂಗ್ರಹಿಸಿಡುವಲ್ಲಿ, ಮತ್ತು ಪ್ರತಿದಾಳಿಗಾಗಿ ಆಯುಧಗಳನ್ನು ಉಡಾವಣೆಗೊಳಿಸುವಲ್ಲಿ ಭೂಗರ್ಭ ಸುರಂಗ ಜಾಲದ ಮಹತ್ವದ ಪಾತ್ರವೂ ಮುಖ್ಯವಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಚಕಮಕಿ ಸೈಬರ್ ದಾಳಿಗಳಿಗೂ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳು ಮತ್ತು ಡೀಪ್ ಫೇಕ್ ತಂತ್ರಜ್ಞಾನ ಸಾರ್ವಜನಿಕ ಅಭಿಪ್ರಾಯಗಳನ್ನು ಬದಲಿಸುವುದನ್ನು ಸುಲಭವಾಗಿಸಿವೆ. ಇದಕ್ಕೆ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೆದುರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಶರಣಾಗುವಂತೆ ತೋರಿಸಿದ, ಕೃತಕ ಬುದ್ಧಿಮತ್ತೆಯನ್ನು ಬಳಸಿ ನಿರ್ಮಿಸಿದ ಡೀಪ್ ಫೇಕ್ ವೀಡಿಯೊ ಒಂದು ಉದಾಹರಣೆಯಾಗಿದೆ. ಈ ವೀಡಿಯೋ ನಕಲಿ ಎಂದು ಉಕ್ರೇನಿಯನ್ ಅಧಿಕಾರಿಗಳು ಮತ್ತು ಮಾಧ್ಯಮಗಳು ಸ್ಪಷ್ಟನೆ ನೀಡಿದವಾದರೂ, ಈ ಬೆಳವಣಿಗೆ ಕೃತಕ ಬುದ್ಧಿಮತ್ತೆ ಆಧುನಿಕ ದಿನಗಳಲ್ಲಿ ಡೀಪ್ ಫೇಕ್ ತಂತ್ರಜ್ಞಾನದ ಸಂಭಾವ್ಯ ಅಪಾಯಗಳೆಡೆಗೆ ಬೆಳಕು ಚೆಲ್ಲಿದೆ.
ಆಧುನಿಕ ಯುದ್ಧಗಳಲ್ಲಿ ಗಮನಿಸಬಹುದಾದ ಇನ್ನೊಂದು ಆಸಕ್ತಿಕರ ವಿಚಾರವೆಂದರೆ, ಸೇನಾಪಡೆಗಳ ಚಲನೆ ಮತ್ತು ಮಿಲಿಟರಿ ನಿರ್ಮಾಣ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಜೊತೆಗೆ, ಖಾಸಗಿ ಅಂತರ್ಜಾಲ ವ್ಯವಸ್ಥೆಗಳು ಮತ್ತು ವಾಣಿಜ್ಯಿಕವಾಗಿ ಪಡೆಯಬಹುದಾದ ಉಪಗ್ರಹ ಚಿತ್ರಗಳನ್ನು ಸಂಯೋಜಿಸಿ ಹೇಗೆ ಬಳಸಬಹುದು ಎನ್ನುವುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಮೊದಲ ಬಾರಿಗೆ, ಇಲಾನ್ ಮಸ್ಕ್ ಅವರಂತಹ ಪ್ರಮುಖ ತಂತ್ರಜ್ಞಾನ ಪೂರೈಕೆದಾರರು ಕೇವಲ ಅವಶ್ಯಕ ಸಂವಹನ ವ್ಯವಸ್ಥೆಗಳನ್ನು ಮಾತ್ರ ಪೂರೈಸುವುದಲ್ಲದೆ, ಬಳಕೆದಾರರಿಗೆ ಯುದ್ಧ ಸಂಬಂಧಿ ಕಾರ್ಯತಂತ್ರಗಳ ಸಲಹೆಗಳನ್ನೂ ನೀಡುತ್ತಿದ್ದಾರೆ. ವಾಣಿಜ್ಯಿಕ ಸೇವಾ ಪೂರೈಕೆದಾರರು ತಮ್ಮ ಸೇವೆಗಳನ್ನು ಒದಗಿಸುವುದನ್ನು ನಿರಾಕರಿಸಿದರೆ, ಅದು ಯುದ್ಧದ ಫಲಿತಾಂಶದ ಮೇಲೂ ಪರಿಣಾಮ ಬೀರಬಲ್ಲದು. ಮಸ್ಕ್ ಅವರು ಕ್ರಿಮಿಯಾದಲ್ಲಿನ ರಷ್ಯನ್ ಸೇನೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಲು ಉಕ್ರೇನ್‌ಗೆ ಸ್ಟಾರ್ ಲಿಂಕ್ ಜಾಲದ ಸೇವೆ ಪಡೆಯಲು ನಿರಾಕರಿಸಿದ್ದರು.
ಯುದ್ಧದಲ್ಲಿ, ಉಕ್ರೇನ್ ಅಮೆರಿಕಾ ನಿರ್ಮಿತ ಜಾವೆಲಿನ್ ಎಂಬ ಆ್ಯಂಟಿ ಟ್ಯಾಂಕ್ ಆಯುಧವನ್ನು ಬಳಸಿದ್ದು ಮಹತ್ವದ ಬೆಳವಣಿಗೆಯಾಗಿತ್ತು. ಉಕ್ರೇನ್ ಸೇನೆ ಕೈಯಲ್ಲಿ ಹಿಡಿಯಬಲ್ಲ ಎಫ್‌ಜಿಎಂ-೧೪೮ ಆ್ಯಂಟಿ ಟ್ಯಾಂಕ್ ವ್ಯವಸ್ಥೆಗಳನ್ನು ಬಳಸಿ, ರಷ್ಯನ್ ಟ್ಯಾಂಕ್‌ಗಳ ಮೇಲೆ ಮಾರಕ ದಾಳಿ ನಡೆಸಿತ್ತು. ಈ ಘಟನೆ ಟ್ಯಾಂಕ್‌ಗಳ ಬಳಕೆ ಹಳತಾಗುವ ಸಂಭವನೀಯತೆಯನ್ನು ಕುರಿತ ಚರ್ಚೆಗೂ ಹಾದಿ ಮಾಡಿಕೊಟ್ಟಿದೆ. ಯುದ್ಧದಲ್ಲಿ ಬಳಸುವ ಪ್ರತಿಯೊಂದು ತಂತ್ರಜ್ಞಾನವೂ ಸಹ ಅದಕ್ಕೆ ಪ್ರತಿತಂತ್ರದ ಅಭಿವೃದ್ಧಿಗೆ ಚಾಲನೆ ನೀಡುತ್ತದೆ. ಇದರ ಪರಿಣಾಮವಾಗಿ, ಶತ್ರುವಿನ ಮೇಲುಗೈಗೆ ಸವಾಲೆಸೆಯುವಂತೆ ಹೊಸ ತಂತ್ರಜ್ಞಾನಗಳು ಮೂಡಿಬಂದು, ಇದೊಂದು ಶತ್ರುತ್ವದ ಮುಗಿಯದ ಸರಣಿಯಂತಾಗುತ್ತದೆ. ಇನ್ನು ಅಮೆರಿಕಾ ನಿರ್ಮಿತ ಜಾವೆಲಿನ್ ಕ್ಷಿಪಣಿ ಬಹಳಷ್ಟು ವೆಚ್ಚದಾಯಕ ಮಾತ್ರವಲ್ಲದೆ, ಅದರ ಪೂರೈಕೆಗೂ ಅಪಾರ ಸಮಯ ಬೇಕಾಗುತ್ತಿದೆ. ಉಕ್ರೇನ್ ತನ್ನ ಬಳಿ ಇರುವ ಪರಿಮಿತ ಜಾವೆಲಿನ್ ಕ್ಷಿಪಣಿಗಳಿಂದ ಎದುರಿಸಲು ಸಾಧ್ಯವಿಲ್ಲದಷ್ಟು ಅಪಾರ ಸಂಖ್ಯೆಯ ಟ್ಯಾಂಕ್‌ಗಳು ರಷ್ಯಾ ಬಳಿ ಇವೆ.
ಉಕ್ರೇನಿನ ಯುದ್ಧ ಹೊಸ ಹೊಸ ತಂತ್ರಜ್ಞಾನಗಳಿಗೆ ಚಾಲನೆ ನೀಡುತ್ತಿದ್ದು, ಇದರಲ್ಲಿ ಯುದ್ಧ ರಂಗದಲ್ಲಿ ಇಮೇಜಿಂಗ್ ಮತ್ತು ಫೇಶಿಯಲ್ ರೆಕಗ್ನಿಷನ್‌ಗಾಗಿ (ಮುಖಗುರುತು ಪತ್ತೆ) ಕೃತಕ ಬುದ್ಧಿಮತ್ತೆಯ ಸಾಫ್ಟ್ವೇರ್‌ಗಳ ಬಳಕೆಯೂ ಸೇರಿದೆ. ೨೦೨೧ರಲ್ಲಿ, ಯುಮಾ ಪ್ರೂವಿಂಗ್ ಗ್ರೌಂಡ್ಸ್ನಲ್ಲಿ ನಡೆದ ಪ್ರಾಜೆಕ್ಟ್ ಕನ್ವರ್ಜೆನ್ಸ್ ೨೧ನಲ್ಲಿ ಅಮೆರಿಕಾ ಅರೆ ಸ್ವಾಯತ್ತ ವ್ಯವಸ್ಥೆಗಳನ್ನು ಹೊಂದಿದ್ದ ಟ್ಯಾಂಕ್‌ಗಳ ಹಾಳಾದ ಬಿಡಿಭಾಗಗಳನ್ನು ೩ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಸಿದ್ಧಪಡಿಸಿ ಪೂರೈಸುವುದನ್ನು ಪ್ರದರ್ಶಿಸಿರುವುದು ಸಹ ಭವಿಷ್ಯದ ಯುದ್ಧಗಳಲ್ಲಿ ಪ್ರಮುಖ ಅಂಶವಾಗಿರಲಿದೆ.
ತಂತ್ರಜ್ಞಾನ ಆಧಾರಿತ ಯುದ್ಧದ ಯುಗದಲ್ಲಿ, ಸಂವಹನ, ಎನ್‌ಕ್ರಿಪ್ಟಿಂಗ್ ಮತ್ತು ಡಿಕ್ರಿಪ್ಟಿಂಗ್ ಸಂದೇಶಗಳು ಮಹತ್ವದ ಪಾತ್ರ ನಿರ್ವಹಿಸಲಿವೆ. ಉಕ್ರೇನ್ ತಾನು ಗ್ರಹಿಸಿದ ರಷ್ಯನ್ ಸಂವಹನಗಳ ಧ್ವನಿ ನಕಲು ಮತ್ತು ಅನುವಾದ ನಡೆಸಲು ಎಐ ಆಧಾರಿತ ವಾಣಿಜ್ಯಿಕ ಸೇವೆಗಳನ್ನು ಬಳಸುತ್ತಿದೆ.
ಭವಿಷ್ಯದಲ್ಲಿ, ಪ್ರತಿಯೊಬ್ಬ ಸೈನಿಕರೂ ಸಾಮಾನ್ಯವಾಗಿ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (ಎನ್‌ಎಲ್‌ಪಿ) ಅನುವಾದಕಗಳನ್ನು ಬಳಸುವ ಸಾಧ್ಯತೆಗಳಿವೆ. ಈ ಉಪಕರಣಗಳು ಯೋಧರ ಬೆಂಬಲ ವ್ಯವಸ್ಥೆಯ ಭಾಗವಾಗಿ, ಅವರ ನೇರ ಸಂವಹನ ಒದಗಿಸಿ, ಯುದ್ಧ ಭೂಮಿಯಲ್ಲಿ ಶತ್ರುವಿನ ಮೇಲೆ ಒತ್ತಡ ಹೆಚ್ಚಿಸಲು ನೆರವಾಗಲಿದೆ.
ಸಮಕಾಲೀನ ಸಮರಗಳಲ್ಲಿ, ಯಾರಿಗಾದರೂ ಸ್ಪಷ್ಟ ಗೆಲುವು ಲಭಿಸುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಸಮಾನ ಮತ್ತು ನವೀನ ಕಾರ್ಯತಂತ್ರಗಳ ಬಳಕೆ, ಮತ್ತು ಸರ್ಕಾರೇತರ ಗುಂಪುಗಳ ನೆರವು ಅತ್ಯಂತ ಆಧುನಿಕ ತಂತ್ರಜ್ಞಾನಗಳನ್ನೂ ಬಹಳಷ್ಟು ಬಾರಿ ಮಣಿಸಬಲ್ಲದು. ಅದರೊಡನೆ, ಅತ್ಯಂತ ದೀರ್ಘಕಾಲೀನ ಯುದ್ಧಗಳನ್ನು ನಡೆಸುವುದು ಬಹಳಷ್ಟು ವೆಚ್ಚದಾಯಕವಾಗುತ್ತದೆ. ಪಾಶ್ಚಾತ್ಯ ಸೇನೆಗಳಂತೂ ತಮ್ಮ ೧೫೫ ಎಂಎಂ ಆರ್ಟಿಲರಿ ಮದ್ದುಗುಂಡುಗಳ ಸಂಗ್ರಹದಲ್ಲಿ ಭಾರೀ ಇಳಿಕೆ ಎದುರಿಸುತ್ತಿವೆ. ಉಕ್ರೇನ್ ಆಯುಧಗಳನ್ನು ಕಳೆದುಕೊಳ್ಳುತ್ತಿರುವ ವೇಗದಲ್ಲಿ ಅವುಗಳನ್ನು ಪೂರೈಸಲಾಗುತ್ತಿಲ್ಲ.
ಪ್ರಮುಖರನ್ನೊಳಗೊಂಡ ಯುದ್ಧಗಳಲ್ಲಿ ಉಂಟಾಗುತ್ತಿರುವ ಆಯುಧಗಳ ಅಭಾವಗಳು ಹೊಸ ರಕ್ಷಣಾ ಪೂರೈಕೆದಾರರನ್ನು ಸೃಷ್ಟಿಸಿದೆ. ಪಾಶ್ಚಾತ್ಯ ರಾಷ್ಟ್ರಗಳಿಗೆ ರಿಪಬ್ಲಿಕ್ ಆಫ್ ಕೊರಿಯಾ (ಆರ್‌ಒಕೆ) ಆರ್ಟಿಲರಿ ಶೆಲ್‌ಗಳ ಪ್ರಮುಖ ಪೂರೈಕೆದಾರನಾಗಿದ್ದು, ರಷ್ಯಾ ಶಹೀದ್-೧೩೬ ಡ್ರೋನ್‌ಗಳಿಗಾಗಿ ಇರಾನ್ ಮತ್ತು ಆರ್ಟಿಲರಿ ಶೆಲ್‌ಗಳಿಗಾಗಿ ಉತ್ತರ ಕೊರಿಯಾದ ಕದ ತಟ್ಟುತ್ತಿದೆ.
ರಷ್ಯಾದ ವಾಯುಪಡೆಗೆ ಹೋಲಿಸುವ ವಾಯುಪಡೆ ಉಕ್ರೇನ್ ಬಳಿಯಲ್ಲಿ ಇಲ್ಲ. ಆದ್ದರಿಂದ ರಷ್ಯಾ ತನ್ನ ಸಂಪೂರ್ಣ ವಾಯು ಸಾಮರ್ಥ್ಯವನ್ನು ಇನ್ನೂ ಬಳಕೆಗೆ ತಂದಿಲ್ಲ. ಎರಡರಲ್ಲಿ ಯಾವುದಾದರೂ ಒಂದು ರಾಷ್ಟç ವಾಯುಪಡೆಯನ್ನು ವ್ಯಾಪಕವಾಗಿ ಬಳಸಿದರೆ, ಆಗ ಯುದ್ಧದ ದಿಕ್ಕು ಬದಲಾಗಬಹುದು. ಆದರೆ ಅದರಿಂದ ನ್ಯಾಟೋದ ಮಧ್ಯಪ್ರವೇಶವೂ ಹೆಚ್ಚಾಗಬಹುದು. ಆದ್ದರಿಂದಲೇ ಅತ್ಯಂತ ಮಹತ್ವದ ಸಂದರ್ಭಗಳಲ್ಲೂ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತೆರಳದಂತೆ ರಷ್ಯಾ ಜಾಗರೂಕವಾಗಿ ವಾಯುಪಡೆಯನ್ನು ಬಳಸುತ್ತಿದೆ.
ಇತ್ತೀಚೆಗೆ, ಬಾಹ್ಯಾಕಾಶ, ಸೈಬರ್, ಮತ್ತು ಎಐನಂತಹ ಆಧುನಿಕ ತಂತ್ರಜ್ಞಾನಗಳು ಹಿಂದಿನ ಕಾಲದಲ್ಲಿ ಬಳಕೆಯಾಗುತ್ತಿದ್ದಂತಹ ಯುದ್ಧ ತಂತ್ರಗಳ ಜೊತೆಗೆ ಬಳಸಲ್ಪಡುತ್ತಿವೆ. ಇವೆರಡರ ನಡುವೆ ಇರುವ ಅತಿದೊಡ್ಡ ವ್ಯತ್ಯಾಸವೆಂದರೆ, ಯುದ್ಧರಂಗದಲ್ಲಿರುವ ಯೋಧ ಇಂದು ನೆಟ್‌ವರ್ಕ್ ಕೇಂದ್ರಿತ ಯುದ್ಧದ ಭಾಗವಾಗಿದ್ದಾನೆ.