೨೩ ಐಎಎಸ್ ಅಧಿಕಾರಿಗಳ ವರ್ಗಾವಣೆ : ಏಳು ಜಿಲ್ಲಾಧಿಕಾರಿಗಳ ನೇಮಕ
ಬೆಂಗಳೂರು: 7 ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳ ನೇಮಕ ಸೇರಿದಂತೆ ಒಟ್ಟು 23 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಹಾವೇರಿ, ಗದಗ, ದಾವಣಗೆರೆ, ಮೈಸೂರು, ರಾಯಚೂರು, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಿಗೆ ಹೊಸ ಡಿಸಿ ನೇಮಿಸಲಾಗಿದೆ.
ಗದಗ ಜಿಲ್ಲಾಧಿಕಾರಿಯಾಗಿ ಗೋವಿಂದ ರೆಡ್ಡಿ: ಗದಗ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಗೋವಿಂದ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಗದಗ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿರುವ ಗೋವಿಂದ ರೆಡ್ಡಿ ಅವರು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ಕಾರ್ಯ ನಿರ್ವಹಿಸುತ್ತಿದ್ದರು.
ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ ರೆಡ್ಡಿ: ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ ರೆಡ್ಡಿ ಅವರನ್ನ ನೇಮಕ ಮಾಡಲಾಗಿದೆ. ಲಕ್ಷ್ಮೀಕಾಂತ್ ರೆಡ್ಡಿ ಅವರು ಈ ಹಿಂದೆ ಮೈಸೂರು ಪಾಲಿಕೆಯ ಆಯುಕ್ತರಾಗಿದ್ದರು. ಈ ಮುಂಚೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕೆ.ವಿ ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಬೀದರ್ ಜಿಲ್ಲಾಧಿಕಾರಿಯಾಗಿ ಶಿಲ್ಪಾ ಶರ್ಮಾ: ಬೀದರ್ ನೂತನ ಜಿಲ್ಲಾಧಿಕಾರಿಯಾಗಿ ಶಿಲ್ಪಾ ಶರ್ಮಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೀದರ್ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿರುವ ಶಿಲ್ಪಾ ಶರ್ಮಾ ಅವರು ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದರು. ಈ ಮುಂಚೆ ಜಿಲ್ಲಾಧಿಕಾರಿಯಾಗಿದ್ದ ಗೋವಿಂದ ರೆಡ್ಡಿ ಅವರನ್ನು ಬೀದರ್ ಜಿಲ್ಲೆಯಿಂದ ಗದಗ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಿದೆ.
ಹಾವೇರಿ ಜಿಲ್ಲಾಧಿಕಾರಿಯಾಗಿ ವಿಜಯಮಹಾಂತೇಶ: ಹಾವೇರಿಯ ಜಿಲ್ಲಾಧಿಕಾರಿಯಾಗಿ ವಿಜಯಮಹಾಂತೇಶ ದಾನಮ್ಮನವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇವರು ಈ ಹಿಂದೆ ವಿಜಯಪುರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಈ ಮುಂಚೆ ಜಿಲ್ಲಾಧಿಕಾರಿಯಾಗಿದ್ದ ರಘುನಂದನಮೂರ್ತಿ ಅವರನ್ನು ಬೆಂಗಳೂರು ಖಜಾನೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್: ಬೆಳಗಾವಿಗೆ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೊಹಮ್ಮದ್ ರೋಷನ್ ಹೆಸ್ಕಾಂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಯಚೂರು ಜಿಲ್ಲಾಧಿಕಾರಿಯಾಗಿ ನಿತೀಶ ಕೆ: ರಾಯಚೂರು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ನಿತೀಶ ಕೆ. ಅವರನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರದ ಹಣಕಾಸು ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದರು, ಈ ಮುಂಚೆ ಜಿಲ್ಲಾಧಿಕಾರಿಯಾಗಿದ್ದ ಚಂದ್ರಶೇಖರ ಎಲ್. ನಾಯಕ ಅವರನ್ನು ಸರ್ಕಾರದ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಅಯುಕ್ತ ಹುದ್ದೆಗೆ ನಿಯೋಜಿಸಲಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿಯಾಗಿ ಡಾ.ಜಿ.ಎಂ.ಗಂಗಾಧರಸ್ವಾಮಿ : ದಾವಣಗೆರೆ ಜಿಲ್ಲಾಧಿಕಾರಿಯಾಗಿ ಡಾ.ಜಿ.ಎಂ.ಗಂಗಾಧರಸ್ವಾಮಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇವರು ಈ ಹಿಂದೆ ಕೃಷಿ ಇಲಾಖೆಯ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿದ್ದರು. ಈ ಮುಂಚೆ ಜಿಲ್ಲಾಧಿಕಾರಿಯಾಗಿದ್ದ ಎಂ.ವಿ.ವೆಂಕಟೇಶ್ ಅವರನ್ನು ವರ್ಗಾವಣೆಯಾಗಿದ್ದು, ಸ್ಥಳ ನಿಯೋಜನೆ ಮಾಡಿಲ್ಲ.