ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

೨೪ ವರ್ಷ ಸಾಧನೆ ದಿವಾಳಿಯತ್ತ ಎಸ್ಕಾಂ

03:30 AM Sep 13, 2024 IST | Samyukta Karnataka

ರಾಜ್ಯದಲ್ಲಿ ೨೦೦೦ಕ್ಕೆ ಮೊದಲು ಕೆಇಬಿ ಮಾತ್ರ ಇತ್ತು. ಅದನ್ನು ಕೆಪಿಟಿಸಿಎಲ್, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಸೆಸ್ಕ್ ಹಾಗೂ ಪಿಸಿಕೆಎಲ್ ಎಂದು ವಿಭಜಿಸಲಾಯಿತು. ಕೆಪಿಸಿ ಮೊದಲಿನಿಂದಲೂ ಉಳಿದುಕೊಂಡು ಬಂದಿದೆ. ೨೪ ವರ್ಷಗಳಲ್ಲಿ ಆಗಿದ್ದೇನು ಎಂದು ನೋಡಿದರೆ ಎಲ್ಲ ವಿತರಣ ಕಂಪನಿಗಳು ದಿವಾಳಿಯತ್ತ ಸಾಗಿದೆ. ಹಾಕಿದ ಬಂಡವಾಳವೆಲ್ಲಾ ಕರಗಿಹೋಗಿದೆ. ಈಗ ವಿತರಣ ಕಂಪನಿಗಳು ನೀಡಬೇಕಿರುವ ಬಾಕಿ ೨೯,೭೮೪ ಕೋಟಿ ರೂ. ೨೦೦೦ರಲ್ಲಿ ಗ್ರಾಹಕರು ಪ್ರತಿ ಯೂನಿಟ್‌ಗೆ ೧ ರೂ. ವಿದ್ಯುತ್ ಶುಲ್ಕ ನೀಡುತ್ತಿದ್ದರು. ಈಗ ೫.೯೦ ರೂ. ಆಗಿದೆ. ಗ್ರಾಹಕರು ಎಷ್ಟೇ ನೀಡಿದರೂ ವಿತರಣ ಕಂಪನಿಗಳು ಉದ್ಧಾರವಾಗುವ ಲಕ್ಷಣ ಕಂಡು ಬರುತ್ತಿಲ್ಲ.
೨೦೦೦ ರಲ್ಲಿ ಒಟ್ಟು ವಿದ್ಯುತ್ ನಷ್ಟ ಶೇ. ೩೦ ಇತ್ತು. ಈಗ ವಿದ್ಯುತ್ ನಷ್ಟ ಶೇ. ೧೫ಕ್ಕೆ ಬಂದಿದೆ. ಅಂದರೆ ಶೇಕಡ ೧೫ ರಷ್ಟು ವಿದ್ಯುತ್ ನಷ್ಟ ಕಡಿಮೆಯಾದರೂ ವಿತರಣ ಕಂಪನಿಗಳ ಆದಾಯ ಅಧಿಕಗೊಂಡಿಲ್ಲ. ಸರ್ಕಾರ ಈಗಲೂ ಪ್ರತಿವರ್ಷ ೧೨ ಸಾವಿರ ಕೋಟಿ ರೂ. ಸಹಾಯಧನ ನೀಡುತ್ತಿದೆ. ಅಂದರೆ ವಿತರಣ ಕಂಪನಿಗಳು ನೀಡುತ್ತಿರುವ ಅಂಕಿಅಂಶಗಳೆಲ್ಲವೂ ಬೋಗಸ್ ಎಂಬುದು ಸ್ಪಷ್ಟ. ಒಟ್ಟು ಬಂಡವಾಳ ಹೂಡಿಕೆ ಆಗಿರುವುದು ೮೭೦೦ ಕೋಟಿ ರೂ. ಮಾತ್ರ. ಉಳಿದದ್ದು ಎಲ್ಲಿ ಹೋಯಿತು ಎಂಬುದು ತಿಳಿಯದು.

ತಣ್ಣೀರು ಬಾವಿ
ಜೆಎಚ್ ಪಟೇಲ್ ಕಾಲದಲ್ಲಿ ಮಂಗಳೂರು ಸಮೀಪ ತಣ್ಣೀರು ಬಾವಿಯಲ್ಲಿ ಮೊದಲ ನಾಫ್ತಾ ಆಧರಿತ ವಿದ್ಯುತ್ ಉತ್ಪಾದನೆ ಕೇಂದ್ರ ಸ್ಥಾಪಿಸಲಾಯಿತು. ಇಲ್ಲಿ ಉತ್ಪಾದಿತ ಒಂದು ಯೂನಿಟ್‌ಗೆ ಆಗಿನ ಕಾಲದಲ್ಲಿ ೧೩ ರೂ. ನೀಡಲಾಯಿತು. ಇದಕ್ಕೆ ಜನ ಅನಗತ್ಯವಾಗಿ ಹೆಚ್ಚುವರಿ ದರ ನೀಡಬೇಕಾಯಿತು. ಇದು ಸರ್ಕಾರ ಮಾಡಿದ ಮೊದಲ ಅಪರಾಧ. ಕೊನೆಗೆ ಈ ಕೇಂದ್ರ ಆಂಧ್ರಕ್ಕೆ ವರ್ಗಾವಣೆ ಗೊಂಡಿತು. ಅಂದು ಆರಂಭವಾದ ದುಬಾರಿ ವಿದ್ಯುತ್ ಖರೀದಿ ಈಗಲೂ ನಿಂತಿಲ್ಲ. ವಿದ್ಯುತ್ ಖರೀದಿಗಾಗಿ ಪಿಸಿಕೆಎಲ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಕಾರ್ಯವಿಧಾನ ಯಾರಿಗೂ ತಿಳಿಯುವುದಿಲ್ಲ. ಕೆಇಆರ್‌ಸಿಗೆ ಕೂಡ ಇದು ಯಾವುದೇ ವರದಿ ಸಲ್ಲಿಸುವುದಿಲ್ಲ. ಎಲ್ಲ ವಿತರಣ ಕಂಪನಿಗಳಿಗೆ ಬೇಕಾದ ವಿದ್ಯುತ್ ಖರೀದಿ ಮಾಡುವುದು ಈ ಸಂಸ್ಥೆ.

ನಿರಂತರ ಜ್ಯೋತಿ
ಬಿಜೆಪಿ ಸರ್ಕಾರ ಇದ್ದಾಗ ಇದು ಆರಂಭವಾಯಿತು. ಗುಜರಾತ್‌ನಲ್ಲಿ ಆಗ ಮೋದಿ ಮುಖ್ಯಮಂತ್ರಿ. ಅಲ್ಲಿ ನಿರಂತರಜ್ಯೋತಿ ಸಿಂಗಲ್ ಫೇಸ್ ವಿದ್ಯುತ್ ಮಾರ್ಗ ಯಶಸ್ಸು ಕಂಡಿತ್ತು. ಇದಕ್ಕಾಗಿ ಅವರು ಸಿಂಗಲ್ ಟ್ರಾನ್ಸ್ಫಾರ್ಮರ್ ತಾವೇ ತಯಾರಿಸಿಕೊಂಡಿದ್ದರು. ನಮ್ಮಲ್ಲೂ ನಿರಂತರ ಜ್ಯೋತಿ ಹಳ್ಳಿಹಳ್ಳಿಗೂ ವಿದ್ಯುತ್ ಕೊಡಲು ಕಾರಣವಾಯಿತು.
ಮೊದಲು ಸಿಂಗಲ್ ಫೇಸ್ ಇದ್ದದ್ದು ನಂತರ ಮೂರು ಫೇಸ್‌ವಿದ್ಯುತ್ ನೀಡಲು ಬಳಕೆಯಾಯಿತು. ಗುಜರಾತ್‌ನಿಂದ ಸಿಂಗಲ್ ಫೇಸ್ ಟ್ರಾನ್ಸ್ಫಾರ್ಮರ್ ಬರಲೇ ಇಲ್ಲ. ಗುಜರಾತ್‌ನಲ್ಲಿ ಮೋದಿ ಅಧಿಕಾರ ಮುಕ್ತಾಯಗೊಂಡಿತು. ನಮ್ಮವರು ಟಿಸಿಗೆ ಒತ್ತಾಯ ಮಾಡಲಿಲ್ಲ. ಕವಿಕಾದಲ್ಲೇ ತಯಾರಿಸುವ ಪ್ರಯತ್ನ ಕೂಡ ನಡೆಯಿತು. ಆದರೂ ಬೇಕಾದ ಟಿಸಿ ಬರಲೇ ಇಲ್ಲ.
ಈಗ ಸಿದ್ದರಾಮಯ್ಯ ಎಲ್ಲರಿಗೂ ೨೦೦ ಯೂನಿಟ್ ಉಚಿತ ಎಂದು ಮಾಡಿದ ಮೇಲೆ ನಿರಂತರ ಜ್ಯೋತಿ ತನ್ನ ಅರ್ಥವನ್ನು ಕಳೆದಕೊಂಡಿತು. ನಿರಂತರ ಜ್ಯೋತಿ ಕಂಬಗಳು ಎಲ್ಲ ಕಡೆ ನಿಂತಿವೆ. ಮೂರು ಫೇಸ್ ವಿದ್ಯುತ್ ಇರುವುದರಿಂದ ಸಿಂಗಲ್ ಫೇಸ್‌ಗೆ ಬೆಲೆ ಇಲ್ಲದಂತಾಗಿದೆ. ನಿರಂತರ ಜ್ಯೋತಿಯಿಂದ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಜಾಲ ಉತ್ತಮ ಗೊಂಡಿತೇ ಹೊರತು ಮತ್ತೇನೂ ಆಗಲಿಲ್ಲ. ಕೆಲವು ಎಂಜಿನಿಯರ್‌ಗಳ ಜೇಬು ದೊಡ್ಡದಾಯಿತು.

ಎಚ್‌ವಿಡಿಸಿ
೧೧ ಕೆವಿ ಮಾರ್ಗವನ್ನು ವಿಸ್ತರಿಸಿ ವಿದ್ಯುತ್ ನಷ್ಟ ಕಡಿಮೆ ಮಾಡುವುದಲ್ಲದೆ ರೈತರ ಪಂಪ್‌ಸೆಟ್‌ಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ನೀಡುವ ಎಚ್‌ವಿಡಿಸಿ ಯೋಜನೆ ಕೆಲವು ಕಡೆ ಜಾರಿಗೆ ಬಂದಿತು. ಇದು ಕೂಡ ಎಲ್ಲ ಕಡೆ ತಲೆ ಎತ್ತಲಿಲ್ಲ. ತಾಂತ್ರಿಕ ದೋಷ ಕಾರಣ ಎಂದರು.

೧೩೨ ಕೆವಿ ಮಾರ್ಗ
ನಮ್ಮಲ್ಲಿ ೨೨೦ ಕೆವಿ, ೬೬ ಕೆವಿ ಮಾರ್ಗಗಳಿವೆ. ೧೩೨ ಕೆವಿ ಮಾರ್ಗ ನಿರ್ಮಿಸಿಲ್ಲ. ಈಗ ಇದನ್ನು ನಿರ್ಮಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಇದು ದುಡ್ಡು ಹೊಡೆಯುವ ಕಾರ್ಯಕ್ರಮವಲ್ಲದೆ ಬೇರೆ ಏನೂ ಇಲ್ಲ. ಎಂಜಿನಿಯರ್‌ಗಳು ವಿರೋಧಿಸುವವರೂ ಕೇಳುವವರು ಇಲ್ಲ.

ಶರಾವತಿ ಪಂಪ್ಡ್ ಸ್ಟೋರೇಜ್
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಈಗ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಆರಂಭಿಸುವ ಯೋಜನೆ ಇದೆ. ಇದರಿಂದ ಉಪಯೋಗವೇನೂ ಆಗುವುದಿಲ್ಲ ಎಂದು ಎಂಜಿನಿಯರ್ ಹೇಳಿದರೂ ಸರ್ಕಾರ ಕೇಳುವ ಹಂತದಲ್ಲಿಲ್ಲ. ಟೆಂಡರ್ ಕರೆಯಬೇಕು, ದುಡ್ಡು ಹೊಡೆಯಬೇಕು. ೨೦೦೦ ಮೆಗಾವ್ಯಾಟ್ ಬರುವುದಿಲ್ಲ. ಅತಿ ಹೆಚ್ಚು ೫೦೦ ಮೆಗಾವ್ಯಾಟ್ ಬರಬಹುದು. ಈಗ ಬ್ಯಾಟರಿ ಮೂಲಕ ಎಲ್ಲಿ ಬೇಕಾದರೂ ವಿದ್ಯುತ್ ದಾಸ್ತಾನು ಮಾಡಿಕೊಳ್ಳಬಹುದು. ಅದರಿಂದ ಪರಿಸರ ನಾಶವೇನೂ ಆಗುವುದಿಲ್ಲ.

ಐಎಎಸ್ ಪಾರುಪತ್ಯ
೨೪ ವರ್ಷಗಳ ವಿದ್ಯುತ್ ರಂಗವನ್ನು ನೋಡಿದರೆ ಒಂದು ಅಂಶ ಸ್ಪಷ್ಟ: ಐಎಎಸ್ ಅಧಿಕಾರಿಗಳ ಪಾರಪತ್ಯ, ಐಎಎಸ್ ಅಧಿಕಾರಿಗಳಿಗೆ ತರಬೇತಿ ನೀಡುವಾಗ ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಎಲ್ಲ ಕಾರ್ಯವಿಧಾನವನ್ನು ಹೇಳಿಕೊಡಲಾಗುವುದು. ವಿದ್ಯುತ್ ರಂಗದ ಬಗ್ಗೆ ಅವರಿಗೆ ಯಾವ ತರಬೇತಿಯೂ ಕೊಟ್ಟಿರುವುದಿಲ್ಲ. ಆದರೂ ಅವರನ್ನು ನಾವು ವಿದ್ಯುತ್ ಕಂಪನಿಯ ಎಂ.ಡಿ. ಮಾಡಿಬಿಡುತ್ತೇವೆ. ಅವರಿಗೆ ವಿದ್ಯುತ್ ಸಮಸ್ಯೆ ಬಗ್ಗೆ ಯಾವ ಕಲ್ಪನೆಯೂ ಇರುವುದಿಲ್ಲ. ಅವರು ತಮಗೆ ಬೇಕಾದ ಎಂಜಿನಿಯರ್‌ಗಳನ್ನು ಹತ್ತಿರ ಸೇರಿಸಿಕೊಂಡು ದುಡ್ಡು ಹೊಡೆದು ಹೋಗುತ್ತಾರೆ. ಕೋಟ್ಯಂತರ ರೂ. ಅವ್ಯವಹಾರ ನಡೆದರೂ ಒಬ್ಬ ಐಎಎಸ್ ಅಧಿಕಾರಿಗೂ ಶಿಕ್ಷೆ ಆಗಿಲ್ಲ. ಕೆಇಆರ್‌ಸಿಯಲ್ಲೂ ಎಂಜಿನಿಯರ್‌ಗಳಿಲ್ಲ. ಅಲ್ಲೂ ಹಿರಿಯ ಐಎಎಸ್ ಅಧಿಕಾರಿಗಳ ಕಾರುಬಾರು. ಹೀಗಾಗಿ ವಿದ್ಯುತ್ ರಂಗದ ವೈಫಲ್ಯಗಳಿಗೆ ಐಎಎಸ್ ಅಧಿಕಾರಿಗಳ ಹೊಣೆಗಾರರು ಎಂದು ಹೇಳಲೇಬೇಕು.

ಕಾಲ ಮಿಂಚಿಲ್ಲ
ಈಗಲೂ ಕಾಲ ಮಿಂಚಿಲ್ಲ. ವಿದ್ಯುತ್ ಕಂಪನಿಗಳ ನಿರ್ವಹಣೆಗೆ ಐಎಎಸ್ ಬಾಬುಗಳನ್ನು ತೆಗೆದು ಎಂಜಿನಿಯರ್‌ಗಳನ್ನೇ ಮುಖ್ಯಸ್ಥರಾಗಿ ಮಾಡಬೇಕು. ಐಎಎಸ್ ಬೇಕೇ ಬೇಕು ಎಂದಾದರೆ ಯುವ ಐಎಎಸ್ ಅಧಿಕಾರಿಗಳನ್ನು ಎಇಇ ಹುದ್ದೆಯಲ್ಲಿ ಕೆಲಸ ಮಾಡಲು ಹೇಳಿ. ಅವರು ಕೆಲಸದ ಅನುಭವ ಪಡೆದ ಮೇಲೆ ಅವರಿಗೆ ಬಡ್ತಿ ನೀಡಬಹುದು.
ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಎಂಜಿನಿಯರ್‌ಗಳೇ ಮುಖ್ಯಸ್ಥರು. ಅಲ್ಲಿ ಐಎಎಸ್‌ಗೆ ಅವಕಾಶವಿಲ್ಲ. ಹೀಗಿರುವಾಗ ವಿದ್ಯುತ್ ಇಲಾಖೆಗೆ ಐಎಎಸ್ ಏಕೆ? ವಿದ್ಯುತ್ ಇಲಾಖೆ ಈಗ ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ಪ್ರತಿಯೊಂದು ವರ್ಗಾವಣೆಗೂ ಹಣ ಕೊಡಲೇಬೇಕು. ವರ್ಗಾವಣೆಯಂತೂ ಮನಸೋ ಇಚ್ಛೆಯಂತೆ ನಡೆಯುತ್ತದೆ. ಇದರಿಂದ ಕಾರ್ಯದಕ್ಷತೆ ಕಡಿಮೆಯಾಗಿದೆ. ಲೋಕಾಯುಕ್ತ ಬಲೆಗೆ ಅತಿ ಹೆಚ್ಚು ನೌಕರರು ಬೀಳುವವರು ವಿದ್ಯುತ್ ಇಲಾಖೆಯವರು ಎಂಬುದೇ ಇದಕ್ಕೆ ಸಾಕ್ಷಿ.

೫ ಕಂಪನಿಗಳ ನಷ್ಟ
ರಾಜ್ಯದಲ್ಲಿ ೫ ವಿತರಣ ಕಂಪನಿಗಳನ್ನು ಸರ್ಕಾರ ಆರಂಭಿಸಿದಾಗ ಎಲ್ಲ ಬಾಕಿಯನ್ನೂ ಮನ್ನಾ ಮಾಡಿತ್ತು. ಹೊಚ್ಚ ಹೊಸ ಲೆಕ್ಕದಲ್ಲಿ ಆರಂಭಗೊಂಡ ಕಂಪನಿಗಳು ಈಗ ಸಾಲದ ಸುಳಿಯಲ್ಲಿ ಸಿಲುಕಿವೆ. ಇನ್ನು ಸಾಲಕೂಡ ಹುಟ್ಟುವುದಿಲ್ಲ ಎಂಬ ಹಂತ ತಲುಪಿದೆ. ಎಲ್ಲ ವಿತರಣ ಕಂಪನಿಗಳು ಕೆಪಿಸಿಗೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿವೆ. ಎಲ್ಲ ಕಂಪನಿಗಳು ಈಗ ಸರ್ಕಾರದ ಮುಂದೆ ಭಿಕ್ಷೆ ಪಾತ್ರ ಹಿಡಿದುಕೊಂಡು ನಿಂತಿವೆ. ಪ್ರತಿ ಕಂಪನಿಗೂ ಸಾಲ ಮಾಡುವ ಸಾಮರ್ಥ್ಯ ನಿಗದಿಯಾಗಿದೆ. ಅದಕ್ಕೆ ಅನುಗುಣವಾಗಿ ಆಯಾ ಸಾಲ ಎತ್ತುವಳಿ ಮಾಡಬಹುದು. ಈಗ ಎಲ್ಲ ಕಂಪನಿಗಳು ಸಾಲದು ಸುಳಿಯಲ್ಲಿ ಮುಳುಗಿ ಹೋಗಿವೆ.

Next Article