೨೫ ಬಾರಿ ರಕ್ತದಾನ ಮಾಡಿದ ಯಾಕೂಬ್
ಬಾಗಲಕೋಟೆ(ಇಳಕಲ್): ೩೮ ವರ್ಷದ ಯುವಕನೊಬ್ಬ ತನ್ನ ಅತೀ ಚಿಕ್ಕ ವಯಸ್ಸಿನ ಈ ಸಮಯದಲ್ಲಿ ಇಪ್ಪತ್ತೈದು ಬಾರಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಎಬಿ ರಕ್ತದ ಮಾದರಿ ಹೊಂದಿದ ಯಾಕೂಬ್ ಯಲಿಗಾರ ಮೊಟ್ಟೆ, ಬಿಸ್ಕತ್ತು ಮತ್ತು ಪಾನಬೀಡಾ ಎಲೆಗಳ ವ್ಯಾಪಾರ ಮಾಡುತ್ತಾ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ.
ಜಿಮ್ ಮಾಡಿ ದೇಹವನ್ನು ಉತ್ತಮವಾಗಿ ಬೆಳೆಸಿರುವ ಯಾಕೂಬ್‌ಗೆ ಆಗಾಗ ರಕ್ತದಾನ ಮಾಡಬೇಕು ಎಂಬ ಮಾತು ಮನದಲ್ಲಿ ಅಚ್ಚೊತ್ತಿದಾಗ ರಕ್ತ ಕೊಡಲು ಶುರು ಮಾಡುತ್ತಾರೆ. ಕಳೆದ ೧೪ ವರ್ಷಗಳ ಅವಧಿಯಲ್ಲಿ ಎಬಿ ಮಾದರಿಯ ರಕ್ತವನ್ನು ಎಲ್ಲಿ ಯಾರಿಗೆ ಅವಶ್ಯವೋ ಅವರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಹ ಹೋಗಿ ಕೊಟ್ಟು ಬಂದಿದ್ದಾರೆ. ಗರ್ಭಿಣಿ ಮಹಿಳೆಗೆ ಹೆರಿಗೆಯಾದಾಗ ರಕ್ತದ ಅವಶ್ಯಕತೆ ಬಿದ್ದಾಗ ಶುಕ್ರವಾರದಂದು ಯಾಕೂಬ್ ಯಲಿಗಾರ ಮತ್ತು ಮಹೇಶ್ವರಿ ಅಕಾಡೆಮಿ ಸಂಚಾಲಕ ಗೋಪಾಲದಾಸ ಕರವಾ ಇಬ್ಬರೂ ಸೇರಿ ರಕ್ತಕೊಟ್ಟು ಆ ಮಹಿಳೆಗೆ ಜೀವ ಕೊಟ್ಟಿದ್ದಾರೆ. ರಕ್ತದಾನದಂತಹ ಕಾರ್ಯದಲ್ಲಿ ಇಲ್ಲಿನ ಇಳಕಲ್ ಮಂದಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಮುತ್ತುರಾಜ ಅಕ್ಕಿ ರಕ್ತದಾನಿಗಳೊಂದಿಗೆ ಕೈಜೋಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.