For the best experience, open
https://m.samyuktakarnataka.in
on your mobile browser.

೨೮\೨೮: ೫೦ ವರ್ಷದ ಹಿಂದೆ

12:38 AM Apr 04, 2024 IST | Samyukta Karnataka
೨೮ ೨೮  ೫೦ ವರ್ಷದ ಹಿಂದೆ

ಕೆ.ವಿ.ಪರಮೇಶ್
ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಅದು ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟ್‌ವರೆಗೂ ಅನ್ವಯಿಸುತ್ತದೆ. ಅಷ್ಟಕ್ಕೂ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ೨೮ಕ್ಕೆ ಇಪ್ಪತ್ತೆಂಟೂ ಸ್ಥಾನಗಳನ್ನು ಗೆಲ್ಲಲಿದೆ ಎಂದು ನಾಯಕರು ಹೇಳಿಕೊಳ್ಳುವಷ್ಟು ಸಾಧನೆ ಸುಲಭವಲ್ಲ. ಇಂತಹ ಐತಿಹಾಸಿಕ ಫಲಿತಾಂಶ ರಾಜ್ಯದಲ್ಲಿ ದಾಖಲಾಗಿ ಐವತ್ತು ವರ್ಷಗಳೇ ಕಳೆದಿವೆ. ಮತ್ತೇನಾದರೂ ಅದು ಸಾಧ್ಯವಾದರೆ ಮತ್ತೊಂದು ದಾಖಲೆ ಖಚಿತ.
ಇದುವರೆಗೆ ಲೋಕಸಭೆಗೆ ನಡೆದಿರುವ ೧೬ ಚುನಾವಣೆಗಳಲ್ಲಿ ಒಮ್ಮೆ ಮಾತ್ರ ೧೯೭೧ರಲ್ಲಿ ಮೈಸೂರು ಸ್ಟೇಟ್ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಎಲ್ಲ ೨೮ ಕ್ಷೇತ್ರಗಳನ್ನೂ ಗೆದ್ದುಕೊಂಡಿದ್ದನ್ನು ಬಿಟ್ಟರೆ ನಂತರದಲ್ಲಿ ಇಂತಹ ಅಪರೂಪದ ಫಲಿತಾಂಶ ಬಂದಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅತಿಯಾದ ಆತ್ಮವಿಶ್ವಾಸದಲ್ಲಿದ್ದು, ಮೋದಿ ಅಲೆಯಲ್ಲಿ ೨೮ ಸ್ಥಾನಗಳನ್ನೂ ಗೆದ್ದುಕೊಂಡು ದಾಖಲೆ ಸ್ಥಾಪಿಸುವ ಇರಾದೆಯಲ್ಲಿದೆ. ಅತ್ತ ಕಾಂಗ್ರೆಸ್ ಕೂಡಾ ಗ್ಯಾರಂಟಿ ಬಲದ ಮೇಲೆ ದೊಡ್ಡ ಸಾಧನೆ ಮಾಡುವ ವಿಶ್ವಾಸದಲ್ಲಿದೆ. ಆದರೆ ವಾಸ್ತವವಾಗಿ ಕ್ಲೀನ್‌ಸ್ವೀಪ್ ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದೂ ಅಷ್ಟೇ ವಾಸ್ತವ ಸಂಗತಿ.
ಇಂದಿರಾಗಾಂಧಿ ಅವರ 'ಗರೀಬಿ ಹಟಾವೋ' ಘೋಷಣೆ ಆಧಾರದಲ್ಲಿ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಬಾರಿ ಸಾಧನೆ ಮಾಡುವ ನಿರೀಕ್ಷೆ ಇತ್ತಾದರೂ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿದ್ದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ೧೯೭೧ ಚುನಾವಣೆ ಕಾಂಗ್ರೆಸ್ ಕೈ ಹಿಡಿಯಲಿಲ್ಲ. ಆದರೆ ಕರ್ನಾಟಕದ ಎಲ್ಲ ೨೮ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆದ್ದುಕೊಂಡು ಇತಿಹಾಸ ಬರೆದಿತ್ತು. ಇದೀಗ ಎರಡೂ ರಾಷ್ಟ್ರೀಯ ರಾಜಕೀಯ ಪಕ್ಷಗಳಿಂದ ಅಂತಹದ್ದೇ ಕನವರಿಕೆ ಕೇಳಿಬರುತ್ತಿದೆ.