For the best experience, open
https://m.samyuktakarnataka.in
on your mobile browser.

೩೦ ಲಕ್ಷ ರೂ. ಮೌಲ್ಯದ ಸಸಿಗಳ ಖರೀದಿಗೆ ಹೆಸರು ನೋಂದಣಿ

09:58 PM Aug 20, 2024 IST | Samyukta Karnataka
೩೦ ಲಕ್ಷ ರೂ  ಮೌಲ್ಯದ ಸಸಿಗಳ ಖರೀದಿಗೆ ಹೆಸರು ನೋಂದಣಿ

ಸಸ್ಯಸಂತೆ, ತೋಟಗಾರಿಕೆ ಅಭಿಯಾನಕ್ಕೆ ಜನಸ್ಪಂದನೆ

ಕೊಪ್ಪಳ: 6 ದಿನಗಳ ಕಾಲ ನಡೆದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನಕ್ಕೆ ಉತ್ತಮ ಜನಸ್ಪಂದನೆ ದೊರೆತಿದ್ದು, ೧೦ ಲಕ್ಷ ರೂ. ಮೌಲ್ಯದ ವಿದೇಶಿ ಸಸಿಗಳು ಹಾಗೂ ೨೦ ಲಕ್ಷ ರೂ. ಮೌಲ್ಯದ ದೇಶಿ ಸಸಿಗಳ ಖರೀದಿಗೆ ಹೆಸರು ನೋಂದಾಯಿಸಿರುವುದು ಗಮನಾರ್ಹ.

ಆಗಷ್ಟ್ 15ರಿಂದ 20ರ ವರೆಗೆ 6 ದಿನಗಳ ಕಾಲ ತೋಟಗಾರಿಕಾ ಇಲಾಖೆಯಿಂದ ಸ್ವಾತಂತ್ರ್ಯೋತ್ಸವ ಮತ್ತು ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್.ಮರೀಗೌಡ ಜನ್ಮದಿನಾಚರಣೆ ನಿಮಿತ್ತ ನಡೆದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವು ಅತಿಹೆಚ್ಚು ರೈತರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ಯಶಸ್ವಿಯಾಗಿದೆ.

64ಕ್ಕೂ ಹೆಚ್ಚಿನ ವಿದೇಶಿ ಹಣ್ಣಿನ ಸಸಿಗಳನ್ನು ಪರಿಚಯಿಸಿದ್ದು, ಈ ಪೈಕಿ ವಿದೇಶಿ ಸಸಿಗಳಾದ ಮಿಯಾಜಾಕಿ ಮಾವಿನ ಸಸಿಗೆ ಮತ್ತು ಅವಕಾಡೋ ಹಣ್ಣಿನ ಸಸಿಗೆ ರೈತರು ಹೆಚ್ಚು ಆಸಕ್ತಿ ತೋರಿದರು. ೪ ಸಾವಿರ ಮಿಯಾಜಾಕಿ ಮಾವಿನ ಸಸಿಗೆ, ೨ ಸಾವಿರ ಅವಕಾಡೋ ಹಣ್ಣಿನ ಸಸಿಗೆ ಹಾಗೂ ಮೆಕಡೋಮಿಯಾ, ಮ್ಯಾಂಗೋಸ್ಟಿನ್, ಲಿಚ್ಚಿ, ವಿದೇಶಿ ಹಲಸು, ಚರ್ರಿ ಮುಂತಾದ ವಿದೇಶಿ ಹಣ್ಣಿನ ತಳಿಗಳ ಸಸಿಗಳು ಸೇರಿ 10 ಸಾವಿರಕ್ಕೂ ಹೆಚ್ಚಿನ ವಿದೇಶಿ ಹಣ್ಣಿನ ಸಸಿಗೆ ೧೦ ಲಕ್ಷ ಮೌಲ್ಯದ ಸಸಿಗಳ ಖರೀದಿಗೆ ರೈತರು ಹೆಸರು ನೋಂದಾಯಿಸಿರುವುದು ವಿಶೇಷ.

ಸಸ್ಯಗಾರದಲ್ಲಿ ಬೆಳೆದ ದೇಶಿ ಸಸಿಗಳಾದ ಮಾವು(ಕೇಸರ್) ೧೫ ಸಾವಿರ, ಲಿಂಬೆ ೪ ಸಾವಿರ, ತೆಂಗು ೫ ಸಾವಿರ, ಪೇರಲ (ಎಲ್-೪೯) ೩ ಸಾವಿರ, ತೈವಾನ್ ಪಿಂಕ್ ೧ ಸಾವಿರ, ತರಕಾರಿ ಸಸಿಗಳಾದ ಮೆಣಸಿನಕಾಯಿ, ಟೊಮ್ಯಾಟೋ, ಬದನೆ ಕ್ಯಾಪ್ಟಿಕಮ್, ಹೂ ಕೋಸು ಎಲೆಕೋಸು ಸೇರಿ ೮ ಸಾವಿರ, ನುಗ್ಗೆ ೯ ಸಾವಿರ, ಕರಿಬೇವು ೧ ಸಾವಿರ, ಡಾಗ್ ರಿಡ್ಜ್ ೨ ಸಾವಿರ ಮತ್ತು  ಜೌಷಧೀಯ ಸಸಿಗಳು ಸೇರಿ ಒಟ್ಟು ೪.೫೦ ಲಕ್ಷ ಸಸಿಗಳಿಗೆ ಮುಂಗಡವಾಗಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ರೈತರಿಂದ ಬೇಡಿಕೆ ಬಂದಿರುವುದು ಸಸ್ಯಸಂತೆ ಸಾಧನೆಗಿಡಿದ ಕೈಗನ್ನಡಿಯಾಗಿದೆ.