೩೬ ಲಕ್ಷ ರೈತರಿಗೆ ೨೭,೦೦೦ ಕೋಟಿ ರೂ. ಸಾಲ
ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ವಲಯವನ್ನು ಬಲಪಡಿಸಲು ರಾಜ್ಯದ ೩೬ ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ೨೭,೦೦೦ ಕೋಟಿ ರೂ.ಗಳಷ್ಟು ದಾಖಲೆಯ ಸಾಲಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಸಹಕಾರಿ ಬ್ಯಾಂಕುಗಳ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಡಿಸಿಸಿ ಬ್ಯಾಂಕುಗಳಿಗೆ ಬಾಕಿ ಇರುವ ೧೩೨ ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕುಗಳ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದ್ದು, ಇದರಿಂದ ಸುಮಾರು ೫೭,೦೦೦ ರೈತರಿಗೆ ಅನುಕೂಲವಾಗಲಿದೆ. ಪರಿಣಾಮವಾಗಿ ಡಿಸಿಸಿ, ಪಿಕಾರ್ಡ್ ಬ್ಯಾಂಕುಗಳಿಗೆ ೪೯೬ ಕೋಟಿ ರೂ.ಗಳಷ್ಟು ಸಾಲ ಮರುಪಾವತಿಯಾಗುವ ನಿರೀಕ್ಷೆಯಿರುವುದರಿಂದ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಉದ್ದೇಶಕ್ಕಾಗಿ ೪೫೦ ಕೋಟಿ ರೂ. ಅನುದಾನ ಒದಗಿಸಲಾಗುವುದು.
ಎಪಿಎಂಸಿಗಳ ಅಭಿವೃದ್ಧಿಗೆ ಶ್ರೀಕಾರ
ಕೃಷಿ ಮಾರಾಟ ಇಲಾಖೆಯ ಮೂಲಕ ಯಲಬುರ್ಗಾ, ಬಸವನಬಾಗೇವಾಡಿ, ರಾಣೆಬೆನ್ನೂರು, ಬಳ್ಳಾರಿ ಹಾಗೂ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಒಟ್ಟು ೫೦ ಕೋಟಿ ರೂ. ವೆಚ್ಚದಲ್ಲಿ ಹಾಗೂ ರಾಯಚೂರು ಮತ್ತು ಮೈಸೂರಿನಲ್ಲಿ ತಲಾ ೪೦ ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹಗಳನ್ನು ನಿರ್ಮಾಣ. ರಾಯಚೂರಿನಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ೨೫ ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ. ರಾಣೆಬೆನ್ನೂರಿನಲ್ಲಿ ೧೧೨ ಕೋಟಿ ರೂ. ವೆಚ್ಚದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭ. ಮಂಗಳೂರಿನಲ್ಲಿ ೩೫ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ. ಎಪಿಎಂಸಿಗಳ ಚಟುವಟಿಕೆಗಳನ್ನು ೧೦ ಕೋಟಿ ರೂ. ವೆಚ್ಚದಲ್ಲಿ ಡಿಜಿಟೈಜ್ ಮಾಡಲಾಗುವುದು.