For the best experience, open
https://m.samyuktakarnataka.in
on your mobile browser.

೫ ಕಡೆ ರಾಹುಲ್ ರ‍್ಯಾಲಿ

12:45 AM Mar 21, 2024 IST | Samyukta Karnataka
೫ ಕಡೆ ರಾಹುಲ್ ರ‍್ಯಾಲಿ

ಬೆಂಗಳೂರು: ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ವ್ಯವಸ್ಥಿತ ಪ್ರಚಾರ ತಂತ್ರ ಮತ್ತು ಅಹಿಂದ ಮತಬ್ಯಾಂಕ್ ಕ್ರೋಡೀಕರಣಕ್ಕೆ ಆದ್ಯತೆ ನೀಡಿದಂತೆಯೇ ಲೋಕಸಭಾ ಚುನಾವಣೆಯಲ್ಲೂ ಅದೇ ತಂತ್ರಕ್ಕೆ ಮೊರೆಹೋಗಲು ನಿರ್ಧರಿಸಿದೆ. ಜೊತೆಗೆ ಪ್ರಧಾನಿ ಮೋದಿ ರ‍್ಯಾಲಿಗಳಿಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರಿಂದಲೇ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಡಿಸಲು ರೂಪು-ರೇಷೆ ಸಿದ್ಧವಾಗುತ್ತಿದೆ.
ಬೀದರ್ ಜಿಲ್ಲೆ ಬಸವಕಲ್ಯಾಣದಿಂದ ಮೊದಲ ರ‍್ಯಾಲಿಗೆ ಕಾಂಗ್ರೆಸ್ ಯೋಜಿಸಿದೆ. ಉತ್ತರ ಕರ್ನಾಟಕದಲ್ಲಿ ಮೂರು ಹಾಗೂ ದಕ್ಷಿಣದಲ್ಲಿ ಎರಡು ರ‍್ಯಾಲಿಗಳಿಗೆ ಸಿದ್ಧತೆ ನಡೆಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಂಚಗ್ಯಾರಂಟಿಗಳ ಮೂಲಕ ಮತಬ್ಯಾಂಕ್ ಗೆದ್ದಂತೆಯೇ ಇದೀಗ ಲೋಕಸಭೆಗೂ ಪಂಚನ್ಯಾಯಗಳ ಜೊತೆಗೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮತಯಾಚನೆಗೆ ಕಾಂಗ್ರೆಸ್ ಮುಂದಾಗಿದೆ.
ಅಹಿಂದ ಮತಗಳನ್ನು ಒಗ್ಗೂಡಿಸಲು ಸಿಎಂ ಸಿದ್ದರಾಮಯ್ಯ ಸಾರಥ್ಯದಲ್ಲಿ ಕನಿಷ್ಟ ೧೫ ರ‍್ಯಾಲಿ ಆಯೋಜಿಸಲಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಚಾರದ ಮುಂದಾಳತ್ವ ವಹಿಸಲಿದ್ದು ಸೋದರ ಡಿ.ಕೆ.ಸುರೇಶ್ ಕಣದಲ್ಲಿರುವ ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಮತ್ತು ಮೈಸೂರು ಕ್ಷೇತ್ರಗಳತ್ತ ಪ್ರಚಾರ ಕೇಂದ್ರೀಕರಿಸಲಿದ್ದಾರೆ. ಉಳಿದಂತೆ ಎಐಸಿಸಿ ಅಧ್ಯಕ್ಷರಿಂದ ಕಲಬುರಗಿ ಸೇರಿದಂತೆ ಮೂರು ಪ್ರಮುಖಮೀಸಲು ಕ್ಷೇತ್ರಗಳನ್ನು ಗುರಿಯಾಗಿಸಿ ಪ್ರಚಾರದಲ್ಲಿ ತೊಡಗಲು ಮನವಿ ಮಾಡಲಾಗಿದೆ.
ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಈಗಾಗಲೇ ಕೆಪಿಸಿಸಿ ಸ್ಪಷ್ಟ ನಿರ್ದೇಶನ ನೀಡಿದ್ದು ಪ್ರತಿ ಬೂತ್‌ಮಟ್ಟದಲ್ಲಿ ಮನೆಮನೆಗೆ ೫ ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ನೀಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಿದ್ದಂತೆಯೇ ಈ ಬಾರಿಯೂ ಹೆಚ್ಚಿನ ಕಾರ್ಯಕರ್ತರನ್ನು ನಿಯೋಜಿಸಲು ಪಕ್ಷ ತಂತ್ರಗಾರಿಕೆ ರೂಪಿಸಿದೆ.
ಎಲ್ಲ ೨೮ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆ ಬಳಿಕ ಭುಗಿಲೇಳುವ ಅತೃಪ್ತಿಯನ್ನು ತಣಿಸಲೆಂದೇ ಕಾಂಗ್ರೆಸ್ ಮುಖಂಡರ ತಂಡ ರಚಿಸಿದೆ. ಬಂಡಾಯ ಸ್ಪರ್ಧೆಗೆ ಅವಕಾಶ ವಾಗಬಾರದು ಅನ್ಯಪಕ್ಷಗಳ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದಲ್ಲಿ ಸ್ಥಳೀಯ ಮಟ್ಟದಲ್ಲಿಯೇ ಸೇರಿಸಿಕೊಳ್ಳುವಂತೆಯೂ ಕೆಪಿಸಿಸಿ ಸೂಚನೆ ರವಾನಿಸಿದೆ.