For the best experience, open
https://m.samyuktakarnataka.in
on your mobile browser.

೫, ೬ರಂದು ಗೋವಾಕ್ಕೆ ಮಹದಾಯಿ ಪ್ರಾಧಿಕಾರ ಅಧಿಕಾರಿಗಳ ಭೇಟಿ

05:58 PM Jun 30, 2024 IST | Samyukta Karnataka
೫  ೬ರಂದು ಗೋವಾಕ್ಕೆ ಮಹದಾಯಿ ಪ್ರಾಧಿಕಾರ ಅಧಿಕಾರಿಗಳ ಭೇಟಿ

ಪಣಜಿ: ಮಹದಾನಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೇಮಿಸಿರುವ ಮಹದಾಯಿ ನದಿ ಹರಿವು ಪ್ರಾಧಿಕಾರದ ಅಧಿಕಾರಿಗಳು ಜುಲೈ ೫ ಮತ್ತು ೬ ರಂದು ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಮಹದಾಯಿ ಜಲಾನಯನ ಪ್ರದೇಶದಲ್ಲಿ ಮಾನ್ಸೂನ್ ನೀರಿನ ಹರಿವು ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೋವಾ ರಾಜ್ಯ ಜಲಸಂಪನ್ಮೂಲ ಸಚಿವ ಸುಭಾಷ ಶಿರೋಡಕರ್ ಮಾಹಿತಿ ನೀಡಿದರು.
ಪಣಜಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ೪ರಂದು ಈ ಅಧಿಕಾರಿಗಳ ತಂಡವು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದು, ಜುಲೈ ೭ರಂದು ಕರ್ನಾಟಕದ ಕಳಸಾ ಭಂಡೂರಿ ಯೋಜನೆ ಸ್ಥಳಕ್ಕೆ ಭೇಟಿ ನೀಡಲಿದೆ. ಮೂರು ರಾಜ್ಯಗಳ ಮಹದಾಯಿ ನದಿ ನೀರಿನ ಹರಿವನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಮಳೆಗಾಲದಲ್ಲಿ ನೀರಿನ ಹರಿವನ್ನು ಪರಿಶೀಲಿಸುವುದು ಮುಖ್ಯ. ಏಕೆಂದರೆ ಗೋವಾದ ನೀರನ್ನು ಕರ್ನಾಟಕವು ಬೇರೆಡೆಗೆ ತಿರುಗಿಸಿರುವುದು ಸ್ಪಷ್ಟವಾಗುತ್ತದೆ ಎಂದು ಸಚಿವ ಸುಭಾಷ ಶಿರೋಡಕರ್ ಹೇಳಿದರು.
ಕರ್ನಾಟಕವು ಮಹದಾಯಿ ನದಿ ನೀರಿನ ಮೇಲೆ ನೀರಾವರಿ ಯೋಜನೆಯನ್ನು ನಿರ್ಮಿಸಲು ಪ್ರಾರಂಭಿಸಿ ನೀರನ್ನು ತಿರುಗಿಸಿದ್ದರಿಂದ ಗೋವಾ ಮತ್ತು ಕರ್ನಾಟಕದ ನಡುವೆ ಜಲವಿವಾದ ಉಧ್ಭವಿಸಿದೆ. ಈ ಹಿನ್ನೆಲೆಯಲ್ಲಿ ಹರಿವು ಪ್ರಾಧಿಕಾರ ಸ್ಥಾಪನೆಯಾಗಿದೆ. ಪ್ರಾಧಿಕಾರದ ಕಛೇರಿ ಗೋವಾದಲ್ಲಿದೆ. ಮಹದಾಯಿ ನೀರು ಪ್ರಕರಣದ ಮಧ್ಯಸ್ಥಿಕೆದಾರರು ಹಾಗೂ ಸುಪ್ರಿಂ ಕೋರ್ಟ ನೀಡಿರುವ ಆದೇಶವನ್ನು ಸರಿಯಾಗಿ ಜಾರಿಗೊಳಿಸಲಾಗಿದೆಯೇ ಎಂದು ನೋಡಲು ಈ ಪ್ರಾಧಿಕಾರವನ್ನು ನೇಮಿಸಲಾಗಿದೆ.
ಈ ಅಧಿಕಾರಿಗಳ ತಂಡವು ಜುಲೈ ೭ ರಂದೇ ಬೆಳಗಾವಿಗೆ ತೆರಳಲಿದ್ದು, ಕಣಕುಂಬಿ, ಕಳಸಾ-ಬಂಡೂರಿ, ಮಹದಾಯಿ ನದಿಯಲ್ಲಿ ಕರ್ನಾಟಕ ಕೈಗೊಂಡಿರುವ ಕಾಮಗಾರಿಯನ್ನು ಪರಿಶೀಲಿಸಲಿದೆ. ಈ ಪರಿಶೀಲನೆಯ ಬಳಿಕ ಜುಲೈ ೮ರಂದು ಬೆಂಗಳೂರಿನಲ್ಲಿ ನದಿ ಪ್ರವಾಹ ಪ್ರಾಧಿಕಾರದ ಎರಡನೇ ಸಭೆ ನಡೆಯಲಿದೆ ಎಂದು ಸಚಿವ ಶಿರೋಡಕರ್ ಮಾಹಿತಿ ನೀಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಸುಭಾಷಚಂದ್ರ, ಮುಖ್ಯ ಎಂಜಿನೀಯರ್ ಪ್ರಮೋದ ಬಾದಾಮಿ ಉಪಸ್ಥಿತರಿದ್ದರು.