For the best experience, open
https://m.samyuktakarnataka.in
on your mobile browser.

೮೯ನೇ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ ಅಜ್ಜ

01:25 AM Sep 25, 2024 IST | Samyukta Karnataka
೮೯ನೇ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ ಅಜ್ಜ

ಧಾರವಾಡ: ಬರೋಬ್ಬರಿ ೧೮ ವರ್ಷ ಸಂಶೋಧನೆ ಮಾಡಿದ ೮೯ರ ಹರೆಯದ ಮಾರ್ಕಂಡೇಯ ದೊಡ್ಡಮನಿ ಪಿಎಚ್‌ಡಿ ಪಡೆದಿದ್ದಾರೆ. ಇದು ಕರ್ನಾಟಕ ವಿಶ್ವವಿದ್ಯಾಲಯದ ೭೪ನೇ ಘಟಿಕೋತ್ಸವದ ವಿಶೇಷ.
ಕನ್ನಡ ಅಧ್ಯಯನ ಪೀಠದಲ್ಲಿ ಡಾ. ನಿಂಗಪ್ಪ ಮುದೇನೂರ ಮಾರ್ಗದರ್ಶನದಲ್ಲಿ ಅವರು `ಶಿವಶರಣ ಡೋಹರ ಕಕ್ಕಯ್ಯ ಒಂದು ಅಧ್ಯಯನ' ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದುಕೊಂಡರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಮ್ಮ ಭಾಷಣದಲ್ಲಿ ಮಾರ್ಕಂಡೇಯ ದೊಡ್ಡಮನಿ ಅವರ ಸಾಧನೆಯನ್ನು ಕೊಂಡಾಡಿದರು. ನನ್ನ ತಂದೆಗಿಂತ ೨ ವರ್ಷ ಹಿರಿಯರಾದ ವ್ಯಕ್ತಿಯೊಬ್ಬರು ಪಿಎಚ್‌ಡಿ ಪಡೆದಿರುವುದು ಎಲ್ಲರಿಗೂ ಸ್ಫೂರ್ತಿ ನೀಡುವ ಸಂಗತಿ. ಅವರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು ಎಂದು ಹಿರಿಯಜ್ಜನ ಸಾಧನೆಯನ್ನು ಪ್ರಶಂಸಿಸಿದರು.
ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಮಾರ್ಕಂಡೇಯ ದೊಡ್ಡಮನಿ, ೧೮ ವರ್ಷಗಳಿಂದ ಸಂಶೋಧನೆ ಮಾಡುತ್ತಿರುವ ಸಂದರ್ಭದಲ್ಲಿ ಬಹಳ ಅಡತಡೆಗಳು ಬಂದವು. ಆದರೆ ನಾನು ಎದೆಗುಂದದೇ ಸಂಶೋಧನೆ ಮಾಡಿದೆ. ಹಿಡಿದ ಕೆಲಸವನ್ನು ಮುಗಿಸಿಯೇ ಬಿಡಬೇಕು ಎಂಬ ಹಠದೊಂದಿಗೆ ಸಂಶೋಧನಾ ಕಾರ್ಯ ಮಾಡಿದೆ. ಈ ಜನ್ಮದಲ್ಲಿ ನಿಮಗೆ ಪಿಎಚ್‌ಡಿ ಸಿಗುವುದಿಲ್ಲ ಎಂದು ಕೆಲವರು ಮೂದಲಿಸಿದರು. ಗೌರವ ಡಾಕ್ಟರೇಟ್ ಕೊಡಿಸೋಣ ನಿಮ್ಮ ಸಂಶೋಧನೆ ಬಿಟ್ಟುಬಿಡಿ ಎಂದು ಕೆಲವರು ಸಲಹೆ ನೀಡಿದರು. ಆದರೆ ನನ್ನ ಗುರಿ ಅಚಲವಾಗಿತ್ತು. ಪಿಎಚ್‌ಡಿ ಪಡೆದುಕೊಳ್ಳುವುದು ವಿಳಂಬವಾಗಿರಬಹುದು, ಆದರೆ ಗುರಿ ಮುಟ್ಟಿದ್ದೇನೆ. ಊರೂರು ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದೇನೆ. ಪಟ್ಟು ಹಿಡಿದು ಓದಿದ್ದೇನೆ. ವಯಸ್ಸಾಗಿದೆ ಎಂದುಕೊಂಡು ಯಾವುದೇ ಸಬೂಬು ಹೇಳದೇ ಇತರ ಸಂಶೋಧನಾ ವಿದ್ಯಾರ್ಥಿಗಳಷ್ಟೇ ಶ್ರಮ ಹಾಕಿದ್ದೇನೆ. ಸಾಧನೆಗೆ ವಯಸ್ಸು ಮುಖ್ಯವಲ್ಲ.
ಛಲ ಇದ್ದರೆ ಸಾಕು. ೯೦ಕ್ಕೆ ಪದಾರ್ಪಣೆ ಮಾಡುತ್ತಿರುವ ಹಂತದ ನನ್ನ ಸಾಧನೆಯಿಂದ ಯುವಜನರು ಸ್ಫೂರ್ತಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

Tags :