10 ಕೋಟಿ ಜನರಿಂದ ಪವಿತ್ರ ಸ್ನಾನ
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ದೇಶದ ನಾನಾ ಭಾಗ, ಹಾಗೂ ಜಗತ್ತಿನ ವಿವಿಧೆಡೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ೧೦ ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ. ಮಹಾಕುಂಭ ಆರಂಭವಾದಾಗಿನಿಂದ ಇಲ್ಲಿಯವರೆಗೆ ೧೧ ದಿನಗಳಲ್ಲಿ, ೯೭.೩ ಮಿಲಿಯನ್‌ಗಿಂತಲೂ(೯,೭೩,೦೦,೦೦೦) ಹೆಚ್ಚು ಭಕ್ತರು ಮತ್ತು ವಿವಿಧ ಮಠಾಧೀಶರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಮೇಳದ ೧೧ನೇ ದಿನದ ಅಂತ್ಯದ ವೇಳೆಗೆ ಈ ಸಂಖ್ಯೆ ೧೦೦ ಮಿಲಿಯನ್ ಗಡಿಯನ್ನು ದಾಟಿದೆ. ಉತ್ತರ ಪ್ರದೇಶ ಸರ್ಕಾರದ ಮಾಹಿತಿಯ ಪ್ರಕಾರ, ಗುರುವಾರ ಒಂದೇ ದಿನ ೧೬.೯೮ ಲಕ್ಷಕ್ಕೂ ಹೆಚ್ಚು ಜನರು ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರು. ಈ ಬಾರಿ ಮಹಾಕುಂಭದಲ್ಲಿ ೪೫ ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ.
ಜ.27ರಂದು ಧರ್ಮ ಸಂಸತ್
ಕುಂಭಮೇಳದಲ್ಲಿ ಜನವರಿ ೨೭ರಂದು ಧರ್ಮಸಂಸತ್ ನಡೆಯಲಿದೆ. ದೇಶದ ಎಲ್ಲ ಸಾಧು ಸಂತರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಸನಾತನ ಮಂಡಳಿಯನ್ನು ರಚಿಸುವ ಕುರಿತು ಪ್ರಸ್ತಾವನೆಯನ್ನು ಮಂಡಿಸಿ ಅಂಗೀಕರಿಸಲಾಗುತ್ತದೆ. ಅದೇ ರೀತಿ ವಕ್ಫ್ ಮಂಡಳಿಯ ಶೇಕಡ ೮೦ರಷ್ಟು ಆಸ್ತಿಯನ್ನು ಸನಾತನ ಮಂಡಳಿಗೆ ಹಸ್ತಾಂತರಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ ಎಂದು ಅಖಾಡಾ ಪರಿಷತ್ ಅಧ್ಯಕ್ಷ ಮಹಂತ ರವೀಂದ್ರ ಪುರಿ ಮತ್ತು ಕತೆಗಾರ ದೇವಕಿನಂದನ ಠಾಕೂರ್ ಅವರು ಪ್ರಕಟಿಸಿದರು.