For the best experience, open
https://m.samyuktakarnataka.in
on your mobile browser.

10 ತಿಂಗಳಿಂದ ಕುಲಪತಿಗಳ ವೇತನ ಪಾವತಿ ಮಾಡಿಲ್ಲ

01:55 PM Jan 30, 2024 IST | Samyukta Karnataka
10 ತಿಂಗಳಿಂದ ಕುಲಪತಿಗಳ ವೇತನ ಪಾವತಿ ಮಾಡಿಲ್ಲ

ಬೆಂಗಳೂರು: ರಾಜ್ಯದ ಶಿಕ್ಷಣ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಕಾಂಗ್ರೆಸ್ ಸರ್ಕಾರ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿ ಹುದ್ದೆ ಖಾಲಿ ಇದ್ದರೂ ಅವನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳಿತಿದೆ, 10 ತಿಂಗಳಿಂದ ಕುಲಪತಿಗಳ ವೇತನವನ್ನು ಪಾವತಿ ಮಾಡಿಲ್ಲ ಎಂದು ಮಾಜಿ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮತನಾಡಿರುವ ಅವರು "ಮಂಗಳೂರು ವಿವಿ, ರಾಣಿ ಚೆನ್ನಮ್ಮ ವಿವಿ, ವಿಕೆಎಸ್‌ ವಿವಿ, ಬಳ್ಳಾರಿ, ಕುವೆಂಪು ವಿವಿ, ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ದಿಶೆಯಲ್ಲಿ ಸರ್ಚ್‌ ಕಮಿಟಿ ಸಭೆ ನಡೆದು, ಸರ್ಕಾರದ ಗಮನಕ್ಕೆ ತಂದಿದ್ದರೂ ಸರ್ಕಾರ ಪೂರ್ವಾನುಮೋದನೆ ನೀಡದೇ, ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ವಿವಿಗಳ ಉಪಕುಲಪತಿ ಹುದ್ದೆ ಭರ್ತಿ ಮಾಡುವ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರದೇ ಇರುವುದಕ್ಕೆ ಕಾರಣವೇನೆಂದು ಸ್ಪಷ್ಟೀಕರಣ ನೀಡಬೇಕು.
ಕಳೆದ ಬಾರಿ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 7 ಹೊಸ ವಿವಿಗಳನ್ನ ಸ್ಥಾಪನೆ ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಉಪಕುಲಪತಿಗಳನ್ನ ನೇಮಕ ಮಾಡಲಾಗಿದೆ. ಆದರೆ, ಉಪಕುಲಪತಿಗಳ ನೇಮಕ ಮಾಡುವ ಸಂದರ್ಭದಲ್ಲಿ, ಹೊಸ ಕಟ್ಟಡ ನಿರ್ಮಾಣ, ಹುದ್ದೆಗಳ ನೇಮಕ ಮಾಡಿಕೊಳ್ಳುವಂತಿಲ್ಲ ಎನ್ನುವ ಷರತ್ತು ಹಾಕಿ ನೇಮಕ ಮಾಡಲಾಗಿದೆ. ಚಾಮರಾಜನಗರ, ಬೀದರ್, ಹಾವೇರಿ, ಕೊಪ್ಪಳ, ಬಾಗಲಕೋಟೆ, ಬೀದರ್ ಹಾಗೂ ಕೊಡಗು ವಿಶ್ವವಿದ್ಯಾಲಯ ಕುಲಪತಿಗಳಿಗೆ ಕಳೆದ 10 ತಿಂಗಳಿನಿಂದ ಸಂಬಳ ಆಗಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನೂತನವಾಗಿ ಸ್ಥಾಪಿಸಿರುವ 7 ವಿಶ್ವವಿದ್ಯಾಲಯಗಳಿಗೆ ಪೂರಕವಾಗಿ ಕಳೆದ ಬಾರಿಯ ಬಜೆಟ್‌ನಲ್ಲಿ ತಲಾ 2 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು ಅದನ್ನೂ ಸಹ ಕಾಂಗ್ರೆಸ್‌ ಸರ್ಕಾರ ಬಿಡುಗಡೆ ಮಾಡಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ 2023-24ರ ಬಜೆಟ್‌ನಲ್ಲಿ ₹72 ಕೋಟಿ ಬೇಡಿಕೆ ಇದ್ದರೂ ಮೀಸಲಿಟ್ಟಿದ್ದು ಮಾತ್ರ ₹1.5 ಕೋಟಿ ಎಂದಿದ್ದಾರೆ.

ತಾಜಾ ಸುದ್ದಿಗಾಗಿ, ಸಂಯುಕ್ತ ಕರ್ನಾಟಕ ಆ್ಯಪ್ ಬಳಸಿ: https://play.google.com/store/apps/details?id=com.samyuktakarnataka.app