108 ಆಂಬ್ಯುಲೆನ್ಸ್: ವಿರೋಧ ಪಕ್ಷದ ನಾಯಕರಿಂದ ಅರೆಬೆಂದ ಮಾಹಿತಿ
ಬೆಂಗಳೂರು: ವಿರೋಧ ಪಕ್ಷದ ನಾಯಕರಾಗಿ ತಮ್ಮ ಜವಾಬ್ದಾರಿ ಏನು ಎಂದು ಇನ್ನು ಅಶೋಕ್ ಅವರಿಗೆ ತಿಳಿದಿಲ್ಲ. ಒಂದು ವಿಷಯದ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಅರೆಬೆಂದ ಮಾಹಿತಿಯನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ ಜನರನ್ನು ದಿಕ್ಕು ತಪ್ಪಿಸುವಲ್ಲಿ ಪರಿಣಿತರು ಇವರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು 108 ಆಂಬ್ಯುಲೆನ್ಸ್ ಚಾಲಕರ ವೇತನದ ವಿಷಯದಲ್ಲಿಯೂ ಇದನ್ನೇ ಮುಂದುವರೆಸುತ್ತಿದ್ದಾರೆ. ಸರ್ಕಾರದಿಂದ ಈಗಾಗಲೇ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸಂಸ್ಥೆಗೆ ಸೆಪ್ಟೆಂಬರ್ ತಿಂಗಳವರೆಗೆ ಅನುದಾನ ಬಿಡುಗಡೆಯಾಗಿದೆ. ಮೂರನೇ ತ್ರೈಮಾಸಿಕದ ಅನುದಾನ ನವೆಂಬರ್ ತಿಂಗಳಿನಲ್ಲಿ ನೀಡಬೇಕಾಗಿದ್ದು, ಶೀಘ್ರದಲ್ಲೇ ಸೇವಾದಾರರ ಖಾತೆಗೆ ಜಮೆಯಾಗಲಿದೆ. ಗುತ್ತಿಗೆದಾರರು ನಿಯಮಾನುಸಾರ ವೇತನ ಪಾವತಿ ಮಾಡದೆ ಚಾಲಕರನ್ನು ಮುಷ್ಕರಕ್ಕೆ ನೂಕುತ್ತಿದ್ದಾರೆ. ಮಾನ್ಯ ಅಶೋಕ್ ಅವರೇ ಮಾಹಿತಿಯ ಕೊರತೆಯಿದ್ದರೆ ಇಲಾಖೆಗಳ ಬಳಿ ಕೇಳಿ ಪಡೆಯಿರಿ. ಸುಖಾಸುಮ್ಮನೆ ಸುಳ್ಳು ಹರಡುವುದು ನಿಲ್ಲಿಸಿ. ನಮ್ಮ ಸರ್ಕಾರ ಜನಹಿತಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಮೇಲೆ ಕಣ್ಣಿಟ್ಟಿರುವ ಈ ಬಿಜೆಪಿ ನಾಯಕರಿಗೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಕಪೋಕಲ್ಪಿತ ಸುಳ್ಳನ್ನು ಜನರ ಮನಸಲ್ಲಿ ಬೇರೂರಿಸುವುದೇ ಆಗಿದೆ. ಆದರೆ, ಇಂತಹ ನೀಚತನಕ್ಕೆ ಕನ್ನಡಿಗರು ಬೆಲೆ ನೀಡಲಾರರು ಎಂಬುದು ನಿಮಗೆ ನೆನಪಿರಲಿ ಎಂದಿದ್ದಾರೆ.