For the best experience, open
https://m.samyuktakarnataka.in
on your mobile browser.

14 ವರ್ಷಗಳ ಬಳಿಕ ಬಳ್ಳಾರಿ ಪ್ರವೇಶ: ನವರಾತ್ರಿಗೆ ಭೇಟಿ ಎಂದ ರೆಡ್ಡಿ

05:15 PM Sep 30, 2024 IST | Samyukta Karnataka
14 ವರ್ಷಗಳ ಬಳಿಕ ಬಳ್ಳಾರಿ ಪ್ರವೇಶ  ನವರಾತ್ರಿಗೆ ಭೇಟಿ ಎಂದ ರೆಡ್ಡಿ

ಶ್ರೀರಾಮಚಂದ್ರನಿಗೇ ಕಷ್ಟ ತಪ್ಪಿಲ್ಲ, ಇನ್ನು ಸಾಮಾನ್ಯ ಜನ ನಾವು ಯಾವ ಲೆಕ್ಕ

ಬೆಂಗಳೂರು: ಜನ್ಮ ಸ್ಥಳ ಪ್ರತಿಯೊಬ್ಬನಿಗೂ ಮುಖ್ಯವಾಗುತ್ತದೆ. ಯಾವುದೇ ಊರಿಗಿಂತ ನಮ್ಮ ಹುಟ್ಟೂರು ನಮಗೆ ಮೇಲು ಎಂದು ಶಾಸಕ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಗರದ ಬಿಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ 14 ವರ್ಷಗಳ ನಂತರ ಬಳ್ಳಾರಿಗೆ ತೆರಳಲು ಅನುಮತಿ ನೀಡಿ ಸುಪ್ರೀಂಕೋರ್ಟ್ ಆದೇಶ ಬಂದಿದೆ. ಬಳ್ಳಾರಿಯಲ್ಲಿ ವಿವಿಧ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇನೆ. ಬಳ್ಳಾರಿಗೆ ಅನೇಕ ಒಳ್ಳೆಯ ಕೆಲಸ ಮಾಡಿದ್ದು, ಅದು ಜನರಿಗೂ ಗೊತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ದೊಡ್ಡ ಪ್ರಮಾಣದ ಅಭಿವೃದ್ಧಿ ಕೆಲಸಗಳು ಆಗಿದ್ದವು. ಬಳ್ಳಾರಿಯ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಕನಸುಗಳಿವೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಜನರ ಕನಸುಗಳನ್ನು ಈಡೇರಿಸಲು ಶ್ರಮಿಸುವೆ, ಕೊನೆಯ ಉಸಿರು ಇರುವವರೆಗೂ ಬಳ್ಳಾರಿಯಲ್ಲಿ ಇರುತ್ತೇನೆ, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಮುಂದೆ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಅದರಂತೆ ನಡೆದುಕೊಳ್ಳುವೆ. ನಾವು ಏನೇ ಮಾಡಿದರೂ ಕೂಡ ವಿಧಿ ಮತ್ತು ದೇವರ ಆಟದಲ್ಲಿ ಮನುಷ್ಯರಾಗಿ ಬದುಕಬೇಕಾಗುತ್ತದೆ. ನನ್ನ ವಿಧಿಯಲ್ಲಿ ಹುಟ್ಟೂರಿನಿಂದ 14 ವರ್ಷ ದೂರ ಇರಬೇಕು ಅಂತಾ ಭಗವಂತ ಬರೆದಿದ್ದ. ಶ್ರೀರಾಮಚಂದ್ರನಿಗೇ ಕಷ್ಟ ತಪ್ಪಿಲ್ಲ, ಇನ್ನು ಸಾಮಾನ್ಯ ಜನ ನಾವು ಯಾವ ಲೆಕ್ಕ. ಬಳ್ಳಾರಿಗೆ ಅನುಮತಿ ಸಿಕ್ಕಿರುವುದು ಭಗವಂತನ ಕೃಪೆ. ನನ್ನೂರಿನಲ್ಲಿ ನೆಮ್ಮದಿಯಿಂದ ಬದುಕುತ್ತೇನೆ ಎನ್ನುವುದೆ ಖುಷಿ ಎಂದಿದ್ದಾರೆ. ನವರಾತ್ರಿ ಅ.3ರಂದು ಆರಂಭವಾಗಲಿದೆ. ಇದೇ ಗುರುವಾರ ಬೆಳಿಗ್ಗೆ ಬಳ್ಳಾರಿಗೆ ಭೇಟಿ ಕೊಡಲಿದ್ದೇನೆ . ಬಳ್ಳಾರಿಯಲ್ಲಿ ವಿವಿಧ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.

Tags :