18ರಿಂದ ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ಸಂಚಾರ ಆರಂಭ
ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಪುಣೆಗೆ ಸೆ. ೧೮ರಿಂದ ವಂದೇ ಭಾರತ ರೈಲು ಪ್ರಾರಂಭವಾಗಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ದಿ. ೧೬ರಂದು ವಂದೇ ಭಾರತ್ ರೈಲಿನ ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಹ್ಮದಾಬಾದ್‌ನಿಂದ ವರ್ಚುವಲ್ ಸಮಾರಂಭದ ಮೂಲಕ ಉದ್ಘಾಟಿಸಿಲಿದ್ದಾರೆ.
ಹುಬ್ಬಳ್ಳಿಯಿಂದ ಸೆಪ್ಟೆಂಬರ್ ೧೮ರಿಂದ ನಿರಂತರವಾಗಿ ಆರಂಭವಾಗಲಿದ್ದು, ವಾರದಲ್ಲಿ ಮೂರು ಬಾರಿ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಹುಬ್ಬಳ್ಳಿಯಿಂದ ಮತ್ತು ಗುರುವಾರ, ಶನಿವಾರ ಮತ್ತು ಸೋಮವಾರದಂದು ಪುಣೆಯಿಂದ ಹುಬ್ಬಳ್ಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲಿದೆ.
ಇದು ಹುಬ್ಬಳ್ಳಿ-ಪುಣೆ ನಡುವೆ ನೇರವಾಗಿ ಸಂಚರಿಸಲಿದ್ದು, ಕೊಲ್ಹಾಪುರ ಮುಖಾಂತರ ಸಂಚರಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಈ ರೈಲನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಜೋಶಿಯವರು ಜುಲೈನಲ್ಲಿ ಪತ್ರದ ಮುಖಾಂತರ ವಿನಂತಿಸಿಕೊಂಡಿದ್ದರ ಫಲವಾಗಿ ಈ ರೈಲು ಸೇವೆಗೆ ಅಸ್ತು ಎಂದಿದ್ದಾರೆ. ಹುಬ್ಬಳ್ಳಿ ಪುಣೆ ಸಂಪರ್ಕದಿಂದ ಈ ಭಾಗದ ವಾಣಿಜ್ಯೋದ್ಯಮಕ್ಕೆ, ಕೈಗಾರಿಕಾ ವಸಾಹತುಗಳಿಗೆ ತುಂಬಾ ಅನುಕೂಲವಾಗಲಿದ್ದು, ನಮ್ಮ ಮನವಿಗೆ ಸ್ಪಂದಿಸಿ ರೈಲು ಸೇವೆಯನ್ನು ಆರಂಭಿಸುತ್ತಿರುವುದು ಸಂತೋಷದ ವಿಷಯ ಎಂದು ಜೋಶಿ ಹೇಳಿದ್ದಾರೆ.