ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

20ರಂದು ರಾಜ್ಯಮಟ್ಟದ ಬೃಹತ್ ಸಭೆ

03:24 PM Oct 07, 2024 IST | Samyukta Karnataka

ಹುಬ್ಬಳ್ಳಿ: ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ (ಆರ್‌ಸಿಬಿ) ಬ್ರಿಗೆಡ್‌ಗೆ ಸಂಬಂಧಿಸಿದಂತೆ ಅ. ೨೦ರಂದು ಬೆಳಗ್ಗೆ ೧೧ ಗಂಟೆಗೆ ಬಾಗಲಕೋಟೆಯ ಚರಂತಿಮಠ ಸಮಯದಾಯ ಭವನದಲ್ಲಿ ರಾಜ್ಯಮಟ್ಟದ ಬೃಹತ್ ಸಭೆ ಆಯೋಜಿಸಲಾಗಿದೆ. ೩೫-೪೦ ಮಠಾಧೀಶರು ಭಾಗಿಯಾಗಲಿದ್ದು, ಅಂದೇ ಸಂಘಟನೆಯ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ (ಆರ್‌ಸಿಬಿ) ಬ್ರಿಗೆಡ್ ಸ್ಥಾಪನೆಯ ಸಂಬಂಧ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಉತ್ತರ ಕರ್ನಾಟಕದ ಭಾಗದ ವಿವಿಧ ಸಮುದಾಯಗಳ ಮುಖಂಡರ ಸಭೆಯ ಬಳಿಕ ಅವರು ಮಾತನಾಡಿದರು.
ಸಮಾಜದಲ್ಲಿ ನೊಂದವರ, ಶೋಷಿತರ, ಬಡವರ ಹಾಗೂ ಹಿಂದುಳಿದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಆರ್‌ಸಿಬಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ನಾಡಿನ ವಿವಿಧ ಮಠಾಧೀಶರು ಬೆನ್ನೆಲುಬಾಗಿ ನಿಂತಿದ್ದಾರೆ. ಜಾತ್ಯಾತೀತ, ಪಕ್ಷಾತೀತ ಮತ್ತು ರಾಜಕಿಯೇತರವಾಗಿ ಬ್ರಿಗೆಡ್ ಕೆಲಸ ಮಾಡಲಿದ್ದು, ಸಮಾಜ ವಿರೋಧಿ, ರಾಷ್ಟ್ರ ವಿರೋಧಿಗಳ ವಿರುದ್ಧ ಕಾರ್ಯ ನಿರ್ವಹಿಸಲಿದೆ. ಅ.೨೦ರ ಸಭೆಯಲ್ಲಿ ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾದಲಿಂಗ ಮಹಾರಾಜರು, ಮಹಾಲಿಂಗರಾಯ ಸ್ವಾಮೀಜಿ ಸೇರಿದಂತೆ ೩೫ಕ್ಕೂ ಅಧಿಕ ಮಠಾಧೀಶರು ಭಾಗವಹಿಸಲಿದ್ದಾರೆ. ನಾಡಿನ ಮೂಲೆ ಮೂಲೆಯಿಂದ ೧೫೦೦ಕ್ಕೂ ಹೆಚ್ಚು ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಲಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಸಂಘಟನಾತ್ಮಕ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಈ ಹಿಂದೆಯೂ ರಾಯಣ್ಣ ಬ್ರಿಗೇಡ್ ಸ್ಥಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಅಮಿತ್ ಶಾ ಮೂಲಕ ಸಂಘಟನೆಯನ್ನು ಕೈಬಿಡುವಂತೆ ನನಗೆ ಸೂಚನೆ ಕೊಡಿಸಿದ್ದರು. ಆದರೆ, ಅಂದು ಸಂಘಟನೆಯನ್ನು ಕೈಬಿಟ್ಟು ತಪ್ಪು ಮಾಡಿದೆ ಎಂದು ಈಗ ಎನ್ನಿಸುತ್ತಿದೆ. ಹೀಗಾಗಿ ರಾಣಿ ಚನ್ನಮ್ಮ, ರಾಯಣ್ಣ ಬ್ರಿಗೆಡ್ ಕಾರ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಅನ್ಯಾಯ, ಅಪ್ಪ-ಮಕ್ಕಳ ಸರ್ವಾಧಿಕಾರಿ ಧೋರಣೆ ಹಾಗೂ ಸ್ವಜನ ಪಕ್ಷಪಾತದಿಂದ ಬಿಜೆಪಿಯನ್ನು ಕಾಪಾಡಲು ಸ್ವಾತಂತ್ರö್ಯವಾಗಿ ಚುನಾವಣೆ ಎದುರಿಸಿದ್ದೆ. ಬಿಜೆಪಿ ಶುದ್ಧೀಕರಣ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಈಗ ಯಾರ ಮಾತನ್ನೂ ಕೇಳುವ ಪ್ರಶ್ನೆಯೇ ಇಲ್ಲ. ನಾಡಿನ ಹಿತ ಬಯಸುವ ಸಾಧು-ಸಂತರ ಮಾರ್ಗದರ್ಶನದಲ್ಲಿ ಬ್ರಿಗೆಡ್ ಆರಂಭಿಸುತ್ತೇವೆ. ರಾಜಕೀಯವಾಗಿ ನನಗೆ ಆದ ಮೋಸವನ್ನು ನಾಡಿನ ಜನ ಗಮನಿಸಿದ್ದಾರೆ. ಸರಿಯಾದ ಸಮಯಕ್ಕೆ ಉತ್ತರ ನೀಡಲಿದ್ದಾರೆ ಎಂದರು.
ಮಾಜಿ ಸಂಸದ ಕೆ. ವೀರುಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ರಘುಪತಿ ಭಟ್ಟ, ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಅಹಿಂದ ನಾಯಕ ಮುಕುಡಪ್ಪ, ಮಾಜಿ ಮೇಯರ್ ಶಿವಾನಂದ ಮುತ್ತಣ್ಣವರ, ಹಸಿರೇ ಉಸಿರು ಸಂಘಟನೆಯ ಅಧ್ಯಕ್ಷ ವಿನೋದ ಇಳಕಲ್ಲ, ಸಿದ್ದಣ್ಣ ತೇಜಿ ಸೇರಿದಂತೆ ಅನೇಕರಿದ್ದರು.

ದಾರಿ ತಪ್ಪಿಸುವ ಕೆಲಸ...
ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಜಾತಿ ಜನಗಣತಿ ವಿಚಾರವನ್ನು ಅಡ್ಡ ತಂದಿದ್ದಾರೆ. ಕಳೆದ ೮ ವರ್ಷಗಳ ಹಿಂದೆ ಜಾತಿ ಗಣತಿ ವಿಚಾರದಲ್ಲಿ ಅಧಿವೇಶನದಲ್ಲಿಯೇ ನಾವು ಪಕ್ಷಾತೀತವಾಗಿ ನಿಳುವಳಿ ಸೂಚನೆ ಮಾಡಿದ್ದೆವು. ನಿಲುವಳಿ ಮಂಡನೆ ಮಾಡೇ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ೮ ಮೌನವಾಗಿದ್ದರು. ಬಳಿಕ ವರದಿ ಕಳೆದಿದೆ ಎಂದು ನೆಪ ಹೇಳಿದ್ದರು. ಆದರೆ, ಈಗ ಮುಡಾ ಹಗರಣವನ್ನು ಮರೆ ಮಾಚಲು ಮತ್ತೆ ಜಾತಿ ಗಣತಿ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಬೇಕಾ ಬಿಟ್ಟಿ ಹೇಳಿಕೆ ಬಿಟ್ಟು ವಿಧಾನ ಮಂಡಲದಲ್ಲಿ ಜಾತಿ ಗಣತಿ ವಿಚಾರವನ್ನು ಮಂಡಿಸಿ. ಜಾತಿ ಜನಗಣತಿ ಅಡ್ಡ ಇಟ್ಟುಕೊಂಡು ಸಿಎಂ ಹುದ್ದೆ ಉಳಿಸಿಕೊಳ್ಳಲು ಹೋಗಬೇಡಿ ಎಂದು ಆಗ್ರಹಿಸಿದರು.

ವಿಜಯೇಂದ್ರ ಇನ್ನೂ ಎಳಸು...
ಬಿಜೆಪಿ ಶುದ್ಧಿಕರಣದ ಬಗ್ಗೆ ಮಾತನಾಡುವ ಈಶ್ವರಪ್ಪ, ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಯಿಸಿದ ಕೆ.ಎಸ್.ಈಶ್ವರಪ್ಪ, ನಾವೆಲ್ಲ ಬಿಜೆಪಿಯನ್ನು ಕಟ್ಟಿ ಬೆಳೆಸುತ್ತಿದ್ದಾಗ ವಿಜಯೇಂದ್ರ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಪಕ್ಷ ಮತ್ತು ಅದರ ಶುದ್ಧೀಕರಣದ ಬಗ್ಗೆ ಮಾತನಾಡಲು ವಿಜಯೇಂದ್ರ ಇನ್ನೂ ಎಳಸು. ಹಗಲು ರಾತ್ರಿ ಪಕ್ಷ ಕಟ್ಟಿ ಬೆಳೆಸಿದವರ ವಿರುದ್ಧ ಮಾತನಾಡುವುದನ್ನು ಬಿಟ್ಟು ವರಿಷ್ಠರು ನೀಡಿದ ಜವಾಬ್ದಾರಿಯನ್ನು ನಿಭಾಯಿಸಲಿ. ವರಿಷ್ಠರ ಕಣ್ಣಿಗೆ ಮಣ್ಣೆರಚಿ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಂಡಿರುವ ವಿಜಯೇಂದ್ರ, ನಾವು ಕಟ್ಟಿ ಬೆಳೆಸಿದ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Next Article