For the best experience, open
https://m.samyuktakarnataka.in
on your mobile browser.

24ರಂದು ನಿಮಿಷಾಂಬ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ

07:11 PM Feb 22, 2024 IST | Samyukta Karnataka
24ರಂದು ನಿಮಿಷಾಂಬ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ

ಶ್ರೀರಂಗಪಟ್ಟಣ: ಗಂಜಾಂನ ಪ್ರಸಿದ್ಧ ಅದಿ ದೇವತೆ ಶ್ರೀನಿಮಿಷಾಂಬ ದೇವಾಲಯದಲ್ಲಿ ಫೆ. 24ರ ಶನಿವಾರ ಮಾಘ ಶುದ್ಧ ಪೌರ್ಣಮೆಯ ಅಂಗವಾಗಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಒಂದು ಲಕ್ಷ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ದೇವಾಲಯದ ಇಒ ಸಿ.ಜಿ ಕೃಷ್ಣ ತಿಳಿಸಿದ್ದಾರೆ.
ಫೆ. 23ರ ಶುಕ್ರವಾರ ಮಧ್ಯರಾತ್ರಿಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಇಲ್ಲಿನ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ನಿಮಿಷಾಂಬಾ ದೇವಿಯ ದರ್ಶನ ಪಡೆಯಲಿದ್ದಾರೆ.
ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ. ಬಗೆ ಬಗೆಯ ಹೂವಿನಿಂದ ಅಲಂಕಾರಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ದೇವಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ, ಗಣ ಹೋಮ, ನಕ್ಷತ್ರ ಹೋಮ, ಪೂರ್ಣಹೋಮ ಮಾಡಿ ಹಾಲಿನ ಅಭಿಷೇಕ ಸೇರಿದಂತೆ ಇತ್ಯಾದಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು. ಶ್ರೀ ನಿಮಿಷಾಂಬಾ ದೇವಿ ಸೇರಿದಂತೆ ಶ್ರೀ ಮೌಕ್ತಿಕೇಶ್ವರಸ್ವಾಮಿ, ಶ್ರೀಲಕ್ಷ್ಮಿನಾರಾಯಣ, ಶ್ರೀಮೂಲ ಗಣಪತಿ, ಸೂರ್ಯದೇವ ಹಾಗೂ ಆಂಜನೇಯ ದೇವತೆಗಳಿಗೆ ಮಹಾ ಮಂಗಳಾರತಿ ನೆರವೇರಿಸಿ, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸುಮಾರು 80 ಸಾವಿರದಿಂದ 1 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇರುವುದಾಗಿ ಅವರು ತಿಳಿಸಿದ್ದಾರೆ.
ಮಾಘ ಪೌರ್ಣಿಮೆಯ ಅಂಗವಾಗಿ ಬರುವ ಭಕ್ತರಿಗಾಗಿ ವಿಶೇಷವಾಗಿ ಸುಮಾರು ಒಂದು ಲಕ್ಣ ಲಾಡುಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಲೋಕ ಕಲ್ಯಾಣಾರ್ಥ ದೇವಾಲಯದಲ್ಲಿ ಸತ್ಯನಾರಾಯಣ ಪೂಜಾ, ಗಣಪತಿ ಹೋಮ, ನಕ್ಷತ್ರ ಹೋಮ, ದುರ್ಘಾ ಹೋಮ, ಪಂಚಾಮೃತ ಅಭಿಷೇಕ‌ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳ ಜರುಗಲಿವೆ. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದು, ದರ್ಶನ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ‌ ಮೂಲಭೂತ ಸೌಲಭ್ಯಗಳನ್ನು ಹಮ್ಮಿಕೊಂಡಿರುವುದಾಗಿ ಇಓ ಕೃಷ್ಣ ತಿಳಿಸಿದ್ದಾರೆ.