For the best experience, open
https://m.samyuktakarnataka.in
on your mobile browser.

3 ಯುದ್ಧ ನೌಕೆಗಳ ಲೋಕಾರ್ಪಣೆ

11:07 PM Jan 15, 2025 IST | Samyukta Karnataka
3 ಯುದ್ಧ ನೌಕೆಗಳ ಲೋಕಾರ್ಪಣೆ

ನವದೆಹಲಿ: ಭಾರತೀಯ ನೌಕಾಪಡೆಯ ಮೂರು ಸುಧಾರಿತ ಯುದ್ಧನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಹಾಗೂ ಐಎನ್‌ಎಸ್ ವಾಘಶೀರ್ ನೌಕೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಲೋಕಾರ್ಪಣೆ ಮಾಡಿದರು. ದೇಶದ ಕಡಲತೀರಗಳ ಭದ್ರತೆ ಹಾಗೂ ರಕ್ಷಣಾ ಉತ್ಪಾದನೆ ಹೆಚ್ಚಿಸುವುದು ಈ ಸಮರನೌಕೆಗಳ ನಿರ್ಮಾಣದ ಉದ್ದೇಶವಾಗಿದೆ.
ಮುಂಬೈಯ ನೌಕಾನೆಲೆಯಲ್ಲಿ ಈ ಮೂರು ಯುದ್ಧನೌಕೆಗಳನ್ನು ದೇಶಕ್ಕೆ ಸಮರ್ಪಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ ಎಂದರು.
ಸಮುದ್ರ ಪ್ರದೇಶಗಳ ಮೂಲಕ ಮಾದಕದ್ರವ್ಯ, ಶಸ್ತ್ರಾಸ್ತ್ರ ಸಾಗಾಟ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಗ್ರಹಿಸಿ ಜಲಪ್ರದೇಶವನ್ನು ಸುರಕ್ಷಿತ ಹಾಗೂ ಸಮೃದ್ಧ ವಲಯವಾಗಿ ಮಾಡುವ ದಿಸೆಯಲ್ಲಿ ನಾವು ಜಾಗತಿಕ ಪಾಲುದಾರ ದೇಶಗಳೊಂದಿಗೆ ಜೊತೆಗೂಡಬೇಕೆಂದರು.
ಪಿಐ೫ಬಿ ನಿರ್ದೇಶಿತ ಕ್ಷಿಪಣಿ ನಾಶಕ ಯೋಜನೆಯ ಅಂತಿಮ ಹಡಗಾಗಿರುವ ಐಎನ್‌ಎಸ್ ಸೂರತ್ ಅನ್ನು ಶೇ.೭೫ರಷ್ಟು ದೇಶೀಯ ಸಾಮಗ್ರಿಗಳನ್ನೇ ಬಳಸಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಯುದ್ಧ ನೌಕೆಯಿಂದಾಗಿ ಜಾಗತಿಕ ಮಟ್ಟದ ನೌಕಾವಲಯದಲ್ಲಿ ಭಾರತದ ಸ್ಥಾನಮಾನ ಮತ್ತಷ್ಟು ಹೆಚ್ಚುತ್ತಿದೆ.
೧೭ಎ ಸ್ಟಿಲ್ತ್ ಯುದ್ಧನೌಕೆಗಳ ಸರಣಿಯಲ್ಲಿ ಮೊದಲನೇಯದಾಗಿರುವ ಐಎನ್‌ಎಸ್ ನೀಲಗಿರಿ, ಭಾರತದ ಹೆಚ್ಚುತ್ತಿರುವ ನೌಕಾಪಡೆ ಸಾಮರ್ಥ್ಯಕ್ಕೆ ಇನ್ನಷ್ಟು ಕೊಡುಗೆ ನೀಡುತ್ತದೆ. ಇದೇ ವೇಳೆ ಪಿ ೭೫ ಸ್ಕ್ರಾಪಿಯನ್ ಯೋಜನೆಯ ಕೊನೆಯ ಹಾಗೂ ಅಂತಿಮ ಜಲಂತರ್ಗಾಮಿಯಾಗಿರುವ ಐಎನ್‌ಎಸ್ ವಾಘ್‌ಶೀರ್ ಯುದ್ಧನೌಕೆಯನ್ನು ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದಿಂದ ನಿರ್ಮಿಸಲಾಗಿದೆ.