30ನೇ ವರ್ಷದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ
ಮೂಡುಬಿದಿರೆ: ಚೆನ್ನೈನ ಸ್ಟೆಕೇಟೋದ 25 ಕಲಾವಿದರು ಮೂರು ಗಂಟೆಗಳ ಕಾಲ ಭರ್ಜರಿಯಾಗಿ ನಡೆಸಿಕೊಟ್ಟ ಸಂಗೀತ ರಸದೌತಣದೊಂದಿಗೆ ವಿರಾಸತ್ ರೂವಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಕಳೆದ 5 ದಿನಗಳಲ್ಲಿ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ನಡೆದ 30 ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶನಿವಾರ ರಾತ್ರಿ ತೆರೆ ಬಿತ್ತು.
ಕಳೆದ ನಾಲ್ಕು ದಿನಗಳ ಕಾಲ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡಿದ್ದು ಮೊದಲ ಉದ್ಘಾಟನೆ ಮತ್ತು ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯೊಂದಿಗೆ ಚಾಲನೆ ದೊರೆತಿದ್ದು ಎರಡನೇ ದಿನ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ 2024ರ ವಿರಾಸತ್ ಪ್ರಶಸ್ತಿ ಪ್ರದಾನ ಮತ್ತು ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನಡೆಯಿತು. ನಂತರ ಗುಜರಾತಿನ ರಂಗ್ ಮಲ್ಹರ್ ದಿ ಫೋಕ್ ಆಟ್ಸ್ ೯ ತಂಡದವರಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ನಡೆಯಿತು.
ಮೂರನೇ ದಿನ ಗುಜರಾತಿನ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ಉಡುಪಿಯ ನೃತ್ಯ ನಿಕೇತನ ಕೊಡವೂರು, ಬೆಂಗಳೂರಿನ ಚಿಗುರು ನೃತ್ಯಾಲಯ, ಮಂಗಳೂರಿನ ಸನಾತನ ನಾಟ್ಯಾಲಯ, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯ ಹಾಗೂ ಮಂಗಳೂರಿನ ಗಾನ ನೃತ್ಯ ಅಕಾಡೆಮಿ ಮತ್ತು ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನೃತ್ಯ ವೈವಿಧ್ಯ ಪ್ರಸ್ತುತಗೊಂಡಿತು.
ನಾಲ್ಕನೇ ದಿನ ಸಿತಾರ್ ವಾದಕ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ಸೌಂಡ್ ಆಫ್ ಇಂಡಿಯಾ ಕಾರ್ಯಕ್ರಮ ನಡೆದಿದ್ದು ಸಂಗೀತಾಸಕ್ತರ ಮನ ಗೆದ್ದಿತು.
ನಂತರ ಕೊಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ತ್ರಿಪರ್ಣ-ಭರತನಾಟ್ಯ, ಒಡಿಸ್ಸಿ, ಕಥಕ್ ನೃತ್ಯಸಂಗಮ ಪ್ರಸ್ತುತಗೊಂಡಿತು. ಬೆಂಗಳೂರಿನ ಕಾರ್ತಿಕ್ ಪರ್ ಫಾರ್ಮಿಂಗ್ ಆಟ್ಸ್ ೯ ಅವರಿಂದ ನೃತ್ಯೋಲ್ಲಾಸ ಶ್ರೀ ರಾಜರಾಜೇಶ್ವರಿ ಕಲಾ ನಿಕೇತನದ ತಂಡದಿಂದ ಕೂಚುಪುಡಿ ನೃತ್ಯ ಸಾದರಗೊಂಡಿತು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರತಿದಿನವೂ ಆಳ್ವಾಸ್ ವಿದ್ಯಾರ್ಥಿಗಳಿಂದ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವವು ಮನಗೆದ್ದಿತು.
ನಂತರ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸ್ವಸ್ಥಾನಗಮನವಾಯಿತು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬಿದ್ದರೂ ಭಾನುವಾರ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದುಕೊಳ್ಳಲಿದೆ.
.