31 ವರ್ಷಗಳ ಹಿಂದಿನ ಕೇಸ್ ರೀ ಓಪನ್: ಕರ ಸೇವಕರ ಎದೆಯಲ್ಲಿ ಢವ ಢವ
ಹುಬ್ಬಳ್ಳಿ: ಇಡೀ ದೇಶವೇ ಸದ್ಯ ರಾಮ ನಾಮ ಜಪ ಮಾಡುತ್ತಿದೆ. ಅದೇಷ್ಟೋ ಹೋರಾಟ, ಸಾವು-ನೋವು ಕಾನೂನು ಹೋರಟದ ಬಳಿಕ ಕೊನೆಗೂ ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಾಪನೆ ಆಗುತ್ತಿದ್ದಾನೆ. ಈ ಕ್ಷಣಕ್ಕೆ ರಕ್ತ ಸುರಿಸಿ ಹೋರಾಡಿದವರು ಅದ್ಭುತ ಕ್ಷಣಕ್ಕೆ ಕಾದು ಕುಳಿತ್ತಿದ್ದಾರೆ. ಆದರೆ, ಹುಬ್ಬಳ್ಳಿಯಲ್ಲಿ ಮಾತ್ರ ರಾಮನಿಗಾಗಿ ರಸ್ತೆಗಿಳಿದವರ ಎದೆಯಲ್ಲಿ ಈಗ ಢವ ಢವ ಶುರುವಾಗಿದೆ. ಮೂರು ದಶಕಗಳ ಬಳಿಕ ಹುಬ್ಬಳ್ಳಿ ಧಾರವಾಡ ಪೋಲಿಸರು ಕೈಗೊಂಡಿರುವ ನಿರ್ಣಯ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.
ಜನೇವರಿ ೨೨ರಂದು ಆಯೋಧ್ಯೆಯಲ್ಲಿ ರಾಮಮಂದಿರ ಗರ್ಭ ಗುಡಿಯಲ್ಲಿ ಕೋಟಿ ಕೋಟಿ ಹಿಂದುಗಳ ಆರಾಧ್ಯ ದೈವ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. ಹಲವಾರು ದಶಗಳಿಂದ ಮಂದಿರದ ಕನಸು ಕಾಣುತ್ತಿದ್ದ ಅಸಂಖ್ಯಾತ ಹಿಂದೂಗಳು ಸಂಭ್ರಮದ ಅಲೆಯಲ್ಲಿದ್ದಾರೆ. ಈ ರಾಮ ಮಂದಿರಕ್ಕಾಗಿ ಅದೆಷ್ಟೋ ಹೋರಾಟಗಳು ನಡೆದಿವೆ, ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಭಕ್ತರು ಜೈಲು ಸೇರಿದ್ದಾರೆ. ಅದೆಷ್ಟೋ ಪ್ರಕರಣಗಳು ದಾಖಲಾಗಿವೆ. ಈಗ ಅದೆಲ್ಲವೂ ಸುಖಾಂತ್ಯ ಕಾಣುವ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ೩೧ ವರ್ಷದ ಹಿಂದಿನ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ.
೩೧ ವರ್ಷದ ಹಿಂದಿನ ಪ್ರಕರಣಕ್ಕೆ ಮರು ಜೀವ ಕೊಡಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ. ಕರಸೇವೆಗೂ ಮುನ್ನ ಎಂದರೆ ಡಿಸೆಂಬರ್ ೫, ೧೯೯೨ ರಂದು ರಾಮ ಮಂದಿರ ನಿರ್ಮಾಣಕ್ಕಾಗಿ ಹುಬ್ಬಳ್ಳಿಯಲ್ಲಿ ನಡೆದ ಹೋರಾಟದಲ್ಲಿ ಗಲಭೆ ನಡೆದಿತ್ತು. ಗಲಭೆಯಲ್ಲಿ ವಾಹನಗಳಿಗೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಸಾಕಷ್ಟು ಹಾನಿ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಒಟ್ಟು ೯ ಹೋರಾಟಗಾರ ಮೇಲೆ ಶಹರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ, ಯಾವುದೇ ಆರೋಪಿಗಳ ಬಂಧನವಾಗಿರಲಿಲ್ಲ. ಇನ್ನೂ ಕೆಲವರು ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದರು. ಹೀಗಾಗಿ ಪೋಲಿಸರು ಸಹ ಪ್ರಕರಣದ ತನಿಖೆಗೆ ವೇಗ ತಗ್ಗಿಸಿ ಇಷ್ಟು ದಿನ ಸುಮ್ಮನಿದ್ದರು. ಆದರೆ, ಈಗ ೩೧ ವರ್ಷಗಳ ಬಳಿಕ ಏಕಾಏಕಿ ಪ್ರಕರಣದ ೩ನೇ ಆರೋಪಿ ಶ್ರೀಕಾಂತ ಪೂಜಾರಿ ಎಂಬುವವರನ್ನು ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.