32 ಅಡಿ ಎತ್ತರದ ಶಂಕರಾಚಾರ್ಯರ ಭವ್ಯಮೂರ್ತಿ ಲೋಕಾರ್ಪಣೆ
ಶೃಂಗೇರಿ: ಶೃಂಗೇರಿ ಶ್ರೀ ಶಾರದಾಪೀಠದ 36ನೇ ಜಗದ್ಗುರು ಶ್ರೀಭಾರತೀತೀರ್ಥಮಹಾಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 10ಗಂಟೆಗೆ ಮಾರುತಿ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ 32 ಅಡಿ ಎತ್ತರದ ಶ್ರೀಶಂಕರಾಚಾರ್ಯರ ಭವ್ಯಮೂರ್ತಿ ಲೋಕಾರ್ಪಣೆಗೊಂಡಿತು.
ಮೆರವಣಿಗೆ ಮೂಲಕ ಸಾಗಿಬಂದ ಶ್ರೀಶಂಕರರ ರಜತಮೂರ್ತಿಯನ್ನು ಭವ್ಯಮೂರ್ತಿಯ ಬಳಿ ಇಡಲಾಯಿತು. ಬಳಿಕ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ನೆರವೇರಿಸಿದರು. ನಂತರ ಶ್ರೀಶಂಕರಾಚಾರ್ಯರ ರಜತ ಉತ್ಸವಮೂರ್ತಿಗೆ ಉಭಯಶ್ರೀಗಳು ವಿಶೇಷಪೂಜೆ ಸಲ್ಲಿಸಿದರು.
ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ಶ್ರೀಶಂಕರರ ಭವ್ಯಮೂರ್ತಿಗೆ ಜಲಾಭಿಷೇಕ, ಅಕ್ಷತಾರ್ಚನೆ, ಪುಪ್ಪಾರ್ಚನೆ ಮುಂತಾದ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಮಾರುತಿಬೆಟ್ಟದ ಸುತ್ತಮುತ್ತಲೂ ಸೇರಿದ ತಾಲೂಕಿನ ಹಾಗೂ ವಿವಿಧ ಪ್ರಾಂತ್ಯಗಳಿಂದ ಆಗಮಿಸಿದ ಸದ್ಭಕ್ತರು ಕಿರಿಯಶ್ರೀಗಳು ಧಾರ್ಮಿಕ ಪ್ರಕ್ರಿಯೆ ನೆರವೇರಿಸುತ್ತಿದ್ದ ಸಂದರ್ಭದಲ್ಲಿ "ಶ್ರೀ ಶಂಕರಾಚಾರ್ಯರಿಗೆ ಜಯವಾಗಲಿ" ಎಂದು ಉದ್ಘೋಷಣೆ ಕೂಗಿ ಶ್ರದ್ಧಾಭಕ್ತಿ ಮೆರೆದರು.
ಪುರೋಹಿತರಿಂದ ಶ್ರೀ ಶಂಕರರ ಸ್ತೋತ್ರಗಳ ಪಠನ, ಶಾರದಾ ಶಂಕರ ಭಕ್ತಮಂಡಳಿ ಹಾಗೂ ಗೀರ್ವಾಣಿ ಮಹಿಳಾ ಮಂಡಳಿ ಅವರ ಭಜನಾ ಕಾರ್ಯಕ್ರಮ, ವೇದವಾದ್ಯಗೋಷ್ಠಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೆರಗು ನೀಡಿದವು. ಬಳಿಕ ಶ್ರೀಭಗವತ್ಪಾದರ ಶಿಷ್ಯರಾದ ಜಗದ್ಗುರುಗಳಾದ ಶ್ರೀಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಮಲಕಾಚಾರ್ಯ, ತೋಟಕಾಚಾರ್ಯ ಮೂರ್ತಿಗಳು ಹಾಗೂ ಜಗದ್ಗುರು ಶ್ರೀ ವಿದ್ಯಾರಣ್ಯರ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಯತಿವರ್ಯರು ಉದ್ಘಾಟಿಸಿದರು. ಶ್ರೀ ಮಠದ ಆವರಣದಲ್ಲಿ ಅತಿರುದ್ರಯಾಗ ಮತ್ತು ಸಹಸ್ರಚಂಡೀ ಮಹಾಯಾಗದ ಪೂರ್ಣಾಹುತಿ ನೆರವೇರಿತು.