357ಕೋ. ರೂ. ವೆಚ್ಚದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣ
ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ೩೫೭ ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು ೧೬,೪೦೦ ಚದರ ಮೀಟರ್ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ ೨೦೨೬ ರೊಳಗೆ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಶನಿವಾರ ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಯೋಜನೆಯ ಕುರಿತು ವಿಮಾನ ನಿಲ್ದಾಣ ಸಲಹಾ ಸಮಿತಿಯ ಜೊತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಭೆ ನಡೆಸಿ, ಸಂಪೂರ್ಣ ಯೋಜನೆಯ ರೂಪರೇಶಗಳ ಬಗ್ಗೆ ಚರ್ಚಿಸಿದರು.
ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ೪ ಏರೋ ಬ್ರಿಡ್ಜ್, ೮ ಏಕ್ಸಲೇಟರ್, ೮ ಲಿಪ್ಟ್, ಏಕಕಾಲಕ್ಕೆ ಹೊರ ಹೋಗುವ ಮತ್ತು ಒಳಬರುವ ೨,೪೦೦ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಏಕಕಾಲಕ್ಕೆ ೯ ವಿಮಾನಗಳ ನಿಲುಗಡೆ ವ್ಯವಸ್ಥೆ ಹೊಂದಿದ್ದು, ಟರ್ಮಿನಲ್ ಎದುರಿಗೆ ೫೦೦ ಕಾರ್, ೨೦೦ ಬೈಕ್, ೧೦ ಬಸ್ ಹಾಗೂ ಇನ್ನಿತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕವಾದ ಸೌಲಭ್ಯಗಳ ಮೂಲಕ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು
ಈಗಾಗಲೇ ದೆಹಲಿ, ಮುಂಬೈ ಸೇರಿದಂತೆ ದೇಶದ ಅನೇಕ ನಗರಗಳಿಗೆ ಬೆಳಗಾವಿಯಿಂದ ನೇರ ಸಂಪರ್ಕ ವಿಮಾನಗಳು ಹಾರಾಡುತ್ತಿವೆ. ಇನ್ನೂ ಹೆಚ್ಚಿನ ವಿಮಾನ ಸೇವೆ ಸಿಗಲಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಉತ್ತಮ ಗುಣಮಟ್ಟದ ವಿಮಾನ ಸೇವೆ ನೀಡಲು ಸಹ ಇದು ಸಹಕಾರಿಯಾಗಲಿದೆ ಎಂದರು.