For the best experience, open
https://m.samyuktakarnataka.in
on your mobile browser.

42 ಸಿಮ್‌ ಖರೀದಿಸಿದ ಅಪ್ರಾಪ್ತ ಸೇರಿ ಐವರ ಬಂಧನ

11:18 PM Feb 04, 2024 IST | Samyukta Karnataka
42 ಸಿಮ್‌ ಖರೀದಿಸಿದ ಅಪ್ರಾಪ್ತ ಸೇರಿ ಐವರ ಬಂಧನ

ಮಂಗಳೂರು: ವ್ಯವಹಾರಕ್ಕೆಂದು ಹೇಳಿ ಬೇರೆ ಬೇರೆಯವರ ಹೆಸರಿನಲ್ಲಿ 42 ಸಿಮ್ ಕಾರ್ಡ್ ಖರೀದಿಸಿ ಬೆಂಗಳೂರಿಗೆ ತೆರಳುತ್ತಿದ್ದ ಅಪ್ರಾಪ್ತ ಸೇರಿದಂತೆ ಐವರು ಯುವಕರನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಿಮ್ ಕಾರ್ಡ್ ದಂಧೆಯಲ್ಲಿ ಈ ತಂಡ ತೊಡಗಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಆರೋಪಿಗಳ ಬಳಿ ಇದ್ದ ಸಿಮ್ ಕಾರ್ಡ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ
ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಮೀಝ್(20), ಬಂಟ್ವಾಳ ಪಾಂಡವಕಲ್ಲು ನಿವಾಸಿ ಅಕ್ಬರ್ ಆಲಿ (24), ಬೆಳ್ತಂಗಡಿ ಸಂಜಯನಗರ ನಿವಾಸಿ ಮೊಹಮ್ಮದ್ ಮುಸ್ತಫಾ(22), ಬೆಳ್ತಂಗಡಿ ಪಡಂಗಡಿ ನಿವಾಸಿ ಮುಹಮ್ಮದ್ ಸಾಧಿಕ್(27) ಹಾಗೂ ಬೆಳ್ತಂಗಡಿ ಕಲ್ಮಂಜ ನಿಡಿಗಲ್ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕ ಬಂಧಿತರು. ಈ ಬಗ್ಗೆ ಧರ್ಮಸ್ಥಳ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ನಾಲ್ವರು ಯುವಕರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನಾಲ್ವರಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಪ್ರಾಪ್ತನನ್ನು ಬಾಲ ನ್ಯಾಯಲಯಕ್ಕೆ ಹಾಜರಾಗಲು ನೋಟಿಸ್‌ ನೀಡಿ ತಂದೆಯೊಂದಿಗೆ ಮನೆಗೆ ಕಳುಹಿಸಲಾಗಿದೆ.
ಈ ಪ್ರಕರಣವನ್ನು ಎ‌ನ್​ಐಎಗೆ ವಹಿಸುವಂತೆ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, 'ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯಲ್ಲಿ ನಡೆದ ಸ್ಫೋಟದ ನಂತರ ಈಗ ನಕಲಿ ದಾಖಲೆ ನೀಡಿ ನಲವತ್ತಕ್ಕೂ ಅಧಿಕ ಸಿಮ್ ಖರೀದಿ ಪ್ರಕರಣ ಬೆಳಕಿಗೆ ಬಂದಿದೆ. ಈ ಖರೀದಿಸಿದ ಸಿಮ್ ಗಳನ್ನು ರಾಜ್ಯ ರಾಜಧಾನಿ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂಬುದು ಇನ್ನೂ ಆತಂಕಕಾರಿ ವಿಚಾರ ಎಂದಿದ್ದಾರೆ.