For the best experience, open
https://m.samyuktakarnataka.in
on your mobile browser.

50,000 ಕೋಟಿ ಆಸ್ತಿ ಹುಡುಕಿಕೊಡಿ

05:16 PM Oct 17, 2024 IST | Samyukta Karnataka
50 000 ಕೋಟಿ ಆಸ್ತಿ ಹುಡುಕಿಕೊಡಿ

ಬೆಂಗಳೂರು: ನಮ್ಮ 50,000 ಕೋಟಿಯ ಆಸ್ತಿಯನ್ನು ಹುಡುಕಿಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಫೇಕ್ ಫ್ಯಾಕ್ಟರಿಯನ್ನು ಸ್ಥಾಪಿಸಿ ಸುಳ್ಳುಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ಬಿಜೆಪಿ ಹಾಗೂ ಅದರ ನಾಯಕರು ಬಹಳ ಹಿಂದಿನಿಂದಲೂ ನಮ್ಮ ಕುಟುಂಬದ ಮೇಲೆ ₹50,000 ಕೋಟಿ ಆಸ್ತಿಯ ಆರೋಪ ಮಾಡುತ್ತಿದ್ದಾರೆ. ಹೀಗೆ ಆರೋಪ ಮಾಡಿದ್ದ ಬಿಜೆಪಿಯ ಕೆಲ ಪುಡಿ ಮುಖಂಡರಿಗೆ ಲೀಗಲ್ ನೋಟಿಸ್ ಕಳಿಸಿದ್ದೆ, ಆದರೆ ಇದುವರೆಗೂ ಅವರ್ಯಾರೂ 50,000 ಕೋಟಿಯ ಅಸ್ತಿಯನ್ನು ತೋರಿಸದಿರುವುದು ನನಗೆ ನಿರಾಸೆಯನ್ನುಂಟುಮಾಡಿದೆ!

ಕಳೆದ ಹನ್ನೊಂದು ವರ್ಷ ವರ್ಷದಿಂದ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ, ಸೋಕಾಲ್ಡ್ ಶಕ್ತಿಮಾನ್ ಪ್ರಧಾನಿ ಇದ್ದಾರೆ, ಐಟಿ, ಇಡಿ, ಸಿಬಿಐಗಳಿಗೆ ಇವರ ಕೈನಲ್ಲೇ ಇದ್ದಾವೆ, ಹೀಗಿದ್ದೂ ಇದುವರೆಗೂ ನಮ್ಮ 50,000 ಕೋಟಿಯ ಆಸ್ತಿ ಹುಡುಕಲು ಸಾಧ್ಯವಾಗದಿರುವುದೇಕೆ?

ದಮ್ಮು, ತಾಕತ್ತಿನ ಬಿಜೆಪಿಯವರಿಗೆ ನನ್ನ ಸವಾಲು,
ಎಲ್ಲಾ ತನಿಖಾ ಏಜೆನ್ಸಿಗಳನ್ನು ಕಳಿಸಲಿ, ಎಲ್ಲಿ ಬೇಕಾದರೂ ರೈಡ್ ಮಾಡಿಸಲಿ, ನಮ್ಮ 50,000 ಕೋಟಿಯ ಆಸ್ತಿಯನ್ನು ಹುಡುಕಿಕೊಡಲಿ.

ಕರ್ನಾಟಕ ಬಿಜೆಪಿಯವರದು ಸುಳ್ಳು, ಯಾರದು ಸತ್ಯ ಎನ್ನುವುದು ಈಗಾಗಲೇ ಜಗತ್ತಿಗೆ ತಿಳಿದಿರುವ ಸಂಗತಿ, ನಿಮಗೆ ನಮ್ಮ 50,000 ಕೋಟಿ ಆಸ್ತಿಯ ದಾಖಲೆ ತೋರಿಸಲಾಗಿಲ್ಲ, ಸಿಎ ನಿವೇಶನ ಹೇಗೆ ಅಕ್ರಮ ಎನ್ನುವುದನ್ನು ನಿರೂಪಿಸಲಾಗಿಲ್ಲ.

ಆದರೆ, ನನ್ನ ಸತ್ಯಕ್ಕೆ ಹಲವು ನಿದರ್ಶನಗಳಿವೆ..

  • ನಾನು ಬಯಲಿಗೆಳೆದಿದ್ದ PSI ಹಗರಣವನ್ನು ನಿಮ್ಮವರೇ ಒಪ್ಪಿದ್ದಾರೆ, ಅಧಿಕಾರಿಗಳು, ಆರೋಪಿಗಳ ಬಂಧನವಾಗಿದೆ.
  • ನಾನು ಆರೋಪಿಸಿದ್ದ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳ ಬಂಧನವಾಗಿದೆ. ಹಗರಣಕ್ಕೆ ಸಾಕ್ಷ್ಯ ಸಿಕ್ಕಿದೆ.
  • ಗಂಗಾ ಕಲ್ಯಾಣದಲ್ಲಿ ಭ್ರಷ್ಟರ ಕಲ್ಯಾಣವಾಗಿದೆ ಎಂದಿದ್ದೆ, ಅಂತೆಯೇ ನಿಮ್ಮವರೇ ನಡೆದಿರುವ ಅಕ್ರಮವನ್ನು ಒಪ್ಪಿಕೊಂಡಿದ್ದಾರೆ, ಅಧಿಕಾರಿಗಳ ತಲೆದಂಡವಾಗಿದೆ.
  • ಭೋವಿ ನಿಗಮದ ನಡೆದ ಅಕ್ರಮಕ್ಕೆ ಪುರಾವೆ ಸಿಕ್ಕಿದೆ, ತನಿಖೆಯಲ್ಲಿ ಸಾಬೀತಾಗಿದೆ.
  • ಟ್ರಕ್ ಟರ್ಮಿನಲ್ ಹಗರಣದಲ್ಲಿ ನಿಮ್ಮವರ ಬಂಧನವಾಗಿದೆ, ಅಕ್ರಮ ನಡೆದಿರುವುದು ಜಗಜ್ಜಾಹೀರಾಗಿದೆ.
  • ಕೋವಿಡ್ ಹಗರಣದಲ್ಲಿ ಅಧಿಕಾರಿಗಳ ತಲೆದಂಡವಾಗಿದೆ, ಸಮಿತಿಯ ತನಿಖೆಯಲ್ಲಿ ಅಕ್ರಮದ ಅಘಾದತೆ ಬಿಚ್ಚಿಕೊಳ್ಳುತ್ತಿದೆ.
  • KKRDB ಹಗರಣಕ್ಕೆ ಸಾಕ್ಷಿಗಳು ದೊರೆತಿವೆ.
  • ಪರಶುರಾಮ ಥೀಮ್ ಪಾರ್ಕ್ ಹಗರಣ ಜನರ ಮುಂದೆ ಬಯಲಾಗಿದೆ.
  • ಕಿಯೋನಿಕ್ಸ್ ಹಗರಣದ ಬಗ್ಗೆ ಸಿಎಜಿ ವರದಿಯಲ್ಲಿ ಪುರಾವೆ ಸಿಕ್ಕಿದೆ.

ನನ್ನ ಮುಂದಿನ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಬಿಜೆಪಿಯವರು ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಲಿ, ಯಡಿಯೂರಪ್ಪನವರ ಮೇಲೆ ಪೊಕ್ಸೋ ಪ್ರಕರಣ ಇರುವುದು ಸುಳ್ಳಾ? ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದು ಸುಳ್ಳಾ? ಮುನಿರತ್ನ ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರಾಪ್ ಮಾಡಿದ್ದು ಸುಳ್ಳಾ? ಬಿಜೆಪಿಯ 15ಕ್ಕೂ ಹೆಚ್ಚು ನಾಯಕರು ಸಿಡಿಗೆ ತಡೆಯಾಜ್ಞೆ ತಂದಿದ್ದು ಸುಳ್ಳಾ? ನಿಮ್ಮ ವಿಧಾನಪರಿಷತ್ ವಿಪಕ್ಷ ನಾಯಕರು ಶಾಲೆ ಹೆಸರಲ್ಲಿ ನಿವೇಶನ ಪಡೆದು ಬಿರಿಯಾನಿ ಹೋಟೆಲ್ ಮಾಡಿದ್ದು ಸುಳ್ಳಾ? ನಿಮ್ಮ ವಿರೋಧ ಪಕ್ಷದ ನಾಯಕರು ಅಕ್ರಮ ನಿವೇಶನ ಪಡೆದು ವಾಪಸ್ ನೀಡಿದ್ದು ಸುಳ್ಳಾ? ಎಂದು ಪ್ರಶ್ನಿಸಿದ್ದಾರೆ.

Tags :