ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

5,555 ಕೆಜಿ ನಾಣ್ಯಗಳೊಂದಿಗೆ ಆನೆ, ಅಂಬಾರಿ ಬೃಹತ್ ತುಲಾಭಾರ

08:09 PM Jan 31, 2024 IST | Samyukta Karnataka

ಹುಬ್ಬಳ್ಳಿ: ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನ ಮಹಾಪೀಠದ ಫಕೀರ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ ಕಾರ್ಯಕ್ರಮ, ಆನೆ ಅಂಬಾರಿ ಉತ್ಸವ, ೫೫೫೫ ಕೆಜಿ ನಾಣ್ಯಗಳ ಆನೆ ಅಂಬಾರಿ ತುಲಾಭಾರ ಹಾಗೂ ಭಾವೈಕ್ಯತಾ ರಥಯಾತ್ರಾ ಸಮಾರೋಪ ಸಮಾರಂಭ ಫೆ. ೧ರಂದು ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನ ಮಹಾಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೩ರವರೆಗೆ ಮೂರುಸಾವಿರ ಮಠದ ಪ್ರೌಢ ಶಾಲೆ ಆವರಣದಲ್ಲಿ ಒಂದು ಲಕ್ಷ ಜನರಿಗೆ ಪ್ರಸಾದ ವಿತರಣೆ ನಡೆಯಲಿದೆ. ಗಂಗಾವತಿ ಸಿಲ್ಕ್ ಪ್ಯಾಲೇಸ್ ಮಾಲೀಕರು ಹಾಲುಗ್ಗಿ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶ ಕೌಜಗೇರಿ, ರಾಜಣ್ಣ ಕೊರವಿ ೧೦೦ ಕ್ವಿಂಟಲ್ ಅಕ್ಕಿ ವ್ಯವಸ್ಥೆ, ಮುಸ್ಲಿಂ ಸಮುದಾಯದ ಮಹ್ಮದ್ ರಫೀಕ್ ಸಾವಂತನವರ ಸಾಂಬರ ವ್ಯವಸ್ಥೆ ಮಾಡಿದ್ದಾರೆ ಎಂದರು.
ಮಧ್ಯಾಹ್ನ ೩ಕ್ಕೆ ಮೂರುಸಾವಿರ ಮಠದ ಕರ್ತೃ ಗುರುಸಿದ್ದೇಶ್ವರರ ಗದ್ದುಗೆಗೆ ಪೂಜೆ ಸಲ್ಲಿಸಿ ೫ ಆನೆ, ೫ ಕುದುರೆ, ೨ ಒಂಟೆ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಫಕೀರೇಶ್ವರರ ಆನೆ ಅಂಬಾರಿ ಮೆರವಣಿಗೆ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಸಭಾಪತಿ ಬಸವರಾಜ ಹೊರಟ್ಟಿ ಉತ್ಸವದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮೇಯರ್ ವೀಣಾ ಬರದ್ವಾಡ ಹಾಗೂ ಪಾಲಿಕೆ ಸದಸ್ಯರು ಪಾಲ್ಗೊಳ್ಳುವರು. ಆನೆ ಅಂಬಾರಿ ಉತ್ಸವದಲ್ಲಿ ಚಂಪಿಕಾ ಆನೆ ೨ ಕ್ವಿಂಟಲ್ ಸಾಗವಾನಿ ಕಟ್ಟಿಗೆಯಿಂದ ನಿರ್ಮಾಣವಾದ ಅಂಬಾರಿಯಲ್ಲಿ ಫಕೀರೇಶ್ವರರ ಬೆಳ್ಳಿ ಮೂರ್ತಿಯನ್ನು ಹೊತ್ತು, ದಾಜೀಬಾನ್ ಪೇಟೆ, ಚನ್ನಮ್ಮ ವೃತ್ತದ ಮೂಲಕ ಹಾದು ನೆಹರೂ ಮೈದಾನ ತಲುಪಲಿದೆ. ಚನ್ನಮ್ಮ ವೃತ್ತದಲ್ಲಿ ಅಂಬಾರಿ ಉತ್ಸವಕ್ಕೆ ಪುಷ್ಪವೃಷ್ಟಿ ಮಾಡಲಾಗುವುದು ಎಂದರು.
ಜೀವನ ದರ್ಶನ ಗ್ರಂಥಗಳ ಲೋಕಾರ್ಪಣೆ:
ಸಂಜೆ ೪.೩೦ಕ್ಕೆ ಆನೆ ಅಂಬಾರಿ ಉತ್ಸವವು ನೆಹರೂ ಮೈದಾನ ತಲುಪಲಿದ್ದು ಫಕೀರ ಸಿದ್ಧರಾಮ ಸ್ವಾಮೀಜಿಗಳಿಗೆ ಆನೆ ಸಹಿತ ೫೫೫೫ ಕೆಜಿ ನಾಣ್ಯಗಳ ತುಲಾಭಾರ ಸೇವೆ ಮಾಡಲಾಗುವುದು. ೫೫೦ ಪುಟಗಳ ಜೀವನ ದರ್ಶನ ಗ್ರಂಥದ ಕನ್ನಡ ಹಾಗೂ ಆಂಗ್ಲ ಆವೃತ್ತಿಗಳನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಲೋಕಾರ್ಪಣೆ ಮಾಡುವರು. ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೀಪ ಪ್ರಜ್ವಲನೆ ಮಾಡುವರು. ತುಲಾಭಾರಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡುವರು. ಶಿಕ್ಷಣ ಪ್ರೇಮಿ ಅರಕ್ಕಳ ಹಾಜಬ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ೧೮ ಜನ ಶಾಸಕರು, ೩೦ ಜನ ಮಾಜಿ ಶಾಸಕರು, ಮಂತ್ರಿಗಳು ಹಾಗೂ ರಾಜ್ಯದ ೬೦ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿರುವರು ಎಂದು ಹೇಳಿದರು.

೭೩.೪೦ ಲಕ್ಷ ಮೌಲ್ಯ…
ಆನೆ ಸಹಿತ ಫಕೀರ ಸಿದ್ದರಾಮ ಸ್ವಾಮೀಜಿಗಳ ತುಲಾಭಾರ ಮಾಡಲು ಬೇಕಾದ ೫೫೫೫ ನಾಣ್ಯಗಳ ಮೌಲ್ಯ ೭೩.೪೦ ಲಕ್ಷವಾಗಿದ್ದು, ಆಮೇಲೆ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಥಾಯಿ ನಿಧಿ ಸ್ಥಾಪಿಸಲು ವಿನಿಯೋಗಿಸಲಾಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಹುಬ್ಬಳ್ಳಿ ಭಕ್ತರು ಶ್ರೀಗಳ ಸುವರ್ಣ ತುಲಾಭಾರಕ್ಕೆ ಎಷ್ಟು ಬಂಗಾರ ದೇಣಿಗೆ ನೀಡಿದ್ದಾರೆ ಎಂಬುದನ್ನು ಘೋಷಿಸಲಾಗುವುದು.

ಶಿರಹಟ್ಟಿಯಲ್ಲಿ ವಿಶೇಷ ಕಾರ್ಯಕ್ರಮ
ಫಕೀರ ಸಿದ್ದರಾಮ ಸ್ವಾಮೀಜಿಗಳ ಸುವರ್ಣ ತುಲಾಭಾರದ ನಿಮಿತ್ತ ಶಿರಹಟ್ಟಿ ಶ್ರೀಮಠದಲ್ಲಿ ೭೫ ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ದಿನ ೧೦೧ ಆರತಿ, ಕುಂಭಗಳ ಸಮೇತ ಶ್ರೀಗಳನ್ನು ವೇದಿಕೆಗೆ ಕರೆ ತರಲಾಗುವುದು. ೭೫ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಗುವುದು. ೭೫ ದಿನಗಳ ಕಾಲ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ೭೫ಕ್ಕೂ ಹೆಚ್ಚು ಬಡವರ ವಿವಾಹಗಳನ್ನು ಮಾಡಲು ಚಿಂತಿಸಲಾಗಿದೆ. ಶ್ರೀಗಳಿಗೆ ಸುವರ್ಣ ಕಿರೀಟ ಧಾರಣೆ, ಮುತ್ತಿನ ಪಲ್ಲಕ್ಕಿ ಸೇವೆ ಮಾಡಲಾಗುವುದು. ಕೊನೆಯ ದಿನ ಶ್ರೀಗಳ ಸುವರ್ಣ ತುಲಾಭಾರ ಮಾಡಲಾಗುವುದು. ಈ ಎಲ್ಲ ಕಾರ್ಯಕ್ರಮಗಳ ದಿನಾಂಕವನ್ನು ಈಗಲೇ ಘೋಷಣೆ ಮಾಡುವುದಿಲ್ಲ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

Next Article