6 ತಿಂಗಳ ಹಿಂದೆ ಮೃತ ಅಧಿಕಾರಿಗೆ ವರ್ಗಾವಣೆ…
12:22 PM Jul 13, 2024 IST | Samyukta Karnataka
ಕಲಬುರಗಿ: ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ಜಿಲ್ಲೆಯ ಸೇಡಂ ಪಟ್ಟಣದ ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಅವರಿಗೆ ರಾಜ್ಯ ಸರ್ಕಾರ ಕೊಡಗಿಗೆ ವರ್ಗಾವಣೆ ಮಾಡಿ ಜುಲೈ 9ರಂದು ಆದೇಶ ಹೊರಡಿಸಿ ಯಡವಟ್ಟು ಮಾಡಿಕೊಂಡಿದೆ. ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಅಶೋಕ ಭೀಮರಾಯ ಪುಟಪಾಕ್ (54) ಸೇಡಂ ಪುರಸಭೆಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯದ ಕಾರಣ ಅವರು ಸೇಡಂನಲ್ಲಿ ಜನವರಿ 12ರಂದು ಮೃತಪಟ್ಟಿದ್ದರು. ಜ.13ರಂದು ದಿಗ್ಗಾಂವ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ ನಡೆದಿತ್ತು. ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ, ನಗರಾಭಿವೃದ್ಧಿ ಇಲಾಖೆ ಮೃತ ವ್ಯಕ್ತಿಯನ್ನ ವರ್ಗಾವಣೆ ಮಾಡಿ ಮುಜುಗುರಕ್ಕಿಡಾಗಿದೆ.