For the best experience, open
https://m.samyuktakarnataka.in
on your mobile browser.

8ರಂದು ನಾಲವಾರ ಹಳೆಯ ಜಾತ್ರೆ

10:12 PM May 06, 2024 IST | Samyukta Karnataka
8ರಂದು ನಾಲವಾರ ಹಳೆಯ ಜಾತ್ರೆ

ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ವರ್ಷದ ಎರಡನೆಯ ತನಾರತಿ ಉತ್ಸವ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
ಅಕ್ಷಯತದಿಗೆ ಅಮಾವಾಸ್ಯೆ ಪ್ರಯುಕ್ತ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಲಿದ್ದು, ಸಂಜೆ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಶ್ರೀಮಠದ ಮುಖವಾಣಿ ತನಾರತಿ ಪತ್ರಿಕೆ ಕೂಡಾ ಲೋಕಾರ್ಪಣೆಗೊಳ್ಳಲಿದ್ದು, ಹಿರಿಯ ಸಾಹಿತಿ ಹಾಗೂ ಕಲಾವಿದರಿಂದ ಉಪನ್ಯಾಸ ಹಾಗೂ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯರಾತ್ರಿ ನಾಡಿನಲ್ಲಿಯೇ ವಿಶೇಷವಾದ ತನಾರತಿ ಉತ್ಸವ ನಡೆಯಲಿದ್ದು, ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಪಾರಂಪರಿಕ ಪೋಷಾಕು ತೊಟ್ಟು ಉತ್ಸವದ ನೇತೃತ್ವ ವಹಿಸಲಿದ್ದಾರೆ.
ಕರ್ನಾಟಕ, ಆಂಧ್ರ, ತೆಲಂಗಾಣಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಿದ ಮಹಾಗುರುವಿಗೆ ತನಾರತಿ ಸೇವೆಯನ್ನು ಸಮರ್ಪಿಸಲಿದ್ದಾರೆ.
ವರ್ಷದಲ್ಲಿ ಮೂರು ಬಾರಿ ನಡೆಯುವ ಈ ತನಾರತಿ ಉತ್ಸವವು ವರ್ಷದ ಎರಡನೆಯ ಉತ್ಸವ.ಜಾತಿ,ಮತ ಪಂಥಗಳ ಭೇಧ ಮರೆತು ನಾವೆಲ್ಲರೂ ಒಂದೇ ಎಂಬ ಭಾವದಿಂದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ಗದ್ದುಗೆಗೆ ಭಕ್ತಿಯಿಂದ ತನಾರತಿ ಬೆಳಗಿ ಕೃತಾರ್ಥರಾಗುತ್ತಾರೆ.
ಅಮಾವಾಸ್ಯೆ ಮರುದಿನ ಗುರುವಾರ ಶ್ರೀಮಠದ ಆವರಣದಲ್ಲಿ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ ಕೂಡಾ ನಡೆಯಲಿದೆ.ನಾಡಿನ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಮಹಾದೇವ ಗಂವ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.