BPL ಕಾರ್ಡ್: ಮನೆ ಬಾಗಿಲಿಗೆ ಬರಲಿದೆ ಗ್ಯಾರಂಟಿ ಸಮಿತಿ
ಒಂದು ವೇಳೆ ಅರ್ಹರಾಗಿದ್ದರೂ ರದ್ದಾಗಿದ್ದರೆ ಮತ್ತೆ ಅರ್ಜಿ ಸಲ್ಲಿಸಿ ಪಡೆಯಬಹುದು.
ಬೆಂಗಳೂರು: BPL ಕಾರ್ಡ್‌ಗಳು ರದ್ದಾಗುತ್ತವೆ ಎನ್ನುವ ಆತಂಕ ಯಾರಿಗೂ ಬೇಡ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಮರು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನೀವು ಅರ್ಹರೇ ಆಗಿದ್ದರೆ ಖಂಡಿತವಾಗಿಯೂ ನಿಮಗೆ BPL ಸೌಲಭ್ಯಗಳು ಸಿಗಲಿವೆ. ಒಂದು ವೇಳೆ ಅರ್ಹರಾಗಿದ್ದರೂ ರದ್ದಾಗಿದ್ದರೆ ಮತ್ತೆ ಅರ್ಜಿ ಸಲ್ಲಿಸಿ ಪಡೆಯಬಹುದು. ಸರ್ಕಾರಿ ನೌಕರರು, ಹತ್ತಾರು ಎಕರೆ ಜಮೀನು ಹೊಂದಿರುವವರು, ಸಹಕಾರ ಸಂಘಗಳ ಖಾಯಂ ಸರ್ಕಾರಿ ನೌಕರರು ಬಿಪಿಎಲ್ ಸೌಲಭ್ಯ ಪಡೆದಿರುವುದು ತಿಳಿದುಬಂದಿದೆ. ಈ ಸಂಬಂಧ ನಾವು ಶಾಸಕರಿಗೆ ಮಾಹಿತಿ ನೀಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಸಮಿತಿ ಅವರಿಗೂ ಕೂಡ ನೀಡಿದ್ದೇವೆ. ಯಾರಿಗೆ ಅನ್ಯಾಯವಾಗಿದೆ ಅವರ ಮನೆ ಬಾಗಿಲಿಗೆ ಹೋಗಿ ಆಗಿರುವ ತೊಂದರೆಯನ್ನು ಅವರು ಸರಿಪಡಿಸುತ್ತಾರೆ. ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಖಂಡಿತವಾಗಿಯೂ ಅರ್ಹರಿಗೆ ಸೌಲಭ್ಯ ಕೊಟ್ಟೇಕೊಡುತ್ತೇವೆ ಎಂದಿದ್ದಾರೆ.