FIR ಆಗಿರುವ ಎಲ್ಲರೂ ರಾಜೀನಾಮೆ ಕೊಡಲಿ
ಯಾರ ಮೇಲೆ ಎಫ್‌ಐಆರ್ ಆಗಿದೆ, ಯಾರ ಮೇಲೆ ಚಾರ್ಜ್ ಶೀಟ್ ಇದೆ. ಯಾರು ಬೇಲ್ ಮೇಲೆ ಇದ್ದಾರೆ ಅವರ ಸ್ಥಾನಗಳಿಗೆ ರಾಜೀನಾಮೆ ಕೊಡಲಿ. ಆ ಮೇಲೆ ಬೇರೆ ಅವರನ್ನು ರಾಜೀನಾಮೆ ಕೇಳಲಿ
ಮೈಸೂರು: ಆರ್.ಅಶೋಕ್ ರಾಜೀನಾಮೆ ಕೊಟ್ಟು ಮಾತನಾಡಲಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ರಾಜೀನಾಮೆ ಕೇಳುವವರು ಡೋಂಗಿ ಮಾತು ಬಿಡಲಿ. ಸಿಎಂ ರಾಜೀನಾಮೆ ಕೇಳುವವರ ಮೇಲೆಯೇ ಕೇಸ್ ಗಳು ಇವೆ. ಅವರು ರಾಜೀನಾಮೆ ಕೊಟ್ಟ ಮೇಲೆ ರಾಜೀನಾಮೆ ಕೇಳುವ ನೈತಿಕತೆ ಇರುತ್ತೆ. ಅವರಿಗೊಂದು ಬೇರೆ ಅವರಿಗೊಂದು ಕಾನೂನು ಇದ್ಯಾ. ಈ ಡೋಂಗಿತನ ಬೇಡಾ. ಯಾರ ಮೇಲೆ ಎಫ್‌ಐಆರ್ ಆಗಿದೆ, ಯಾರ ಮೇಲೆ ಚಾರ್ಜ್ ಶೀಟ್ ಇದೆ. ಯಾರು ಬೇಲ್ ಮೇಲೆ ಇದ್ದಾರೆ ಅವರ ಸ್ಥಾನಗಳಿಗೆ ರಾಜೀನಾಮೆ ಕೊಡಲಿ. ಆ ಮೇಲೆ ಬೇರೆ ಅವರನ್ನು ರಾಜೀನಾಮೆ ಕೇಳಲಿ. ಮಾಡಬಾರದ್ದನ್ನು ಮಾಡಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ಯಾರನ್ನೂ ಯಾಮಾರಿಸಲು ಆಗಲ್ಲ, ಆರ್.ಅಶೋಕ್ ರಾಜೀನಾಮೆ ಕೊಟ್ಟು ಮಾತನಾಡಲಿ. ಆ ಮೇಲೆ ನಾವು ಉತ್ತರ ಕೊಡ್ತೀವಿ. ಅಶೋಕ್ ಬಿಡಿಎ ವಶಪಡಿಸಿಕೊಂಡ ಜಮೀನನ್ನು 22 ವರ್ಷದ ಬಳಿ ಡಿನೋಟಿಫಿಕೇಶನ್ ಮಾಡಿಸುತ್ತಾರೆ. ಡಿನೋಟಿಫಿಕೇಶನ್ ಮೊದಲೇ ಜಮೀನನ್ನು ಖರೀದಿ ಮಾಡಿದ್ದಾರೆ. ಬಿಡಿಎ ಜಮೀನನ್ನೇ ಯಾರೋದ್ದೋ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ಇವರು ಮಾಡಿರೋದು ಬಹಳ ನ್ಯಾಯಾನಾ? ಬಿಡಿಎ ಜಮೀನನ್ನು ಯಾರಿಂದಲೋ ಖರೀದಿ ಮಾಡಿರೋದು ಸರಿನಾ? ಇವರದ್ದು ಯಾವ ಸೀಮೆ ನ್ಯಾಯ. ಬಿಡಿಎಗೆ ಫ್ರಾಡ್ ಮಾಡಿ ಜಮೀನು ಖರೀದಿ ಮಾಡಿರೋದು. ರಾಮಸ್ವಾಮಿ ಎಂಬ ಸಂಬಂಧಿಸಿದ ವ್ಯಕ್ತಿಯಿಂದ ಡಿನೋಟಿಫಿಕೇಶನ್ ಗೆ ಅರ್ಜಿ ಕೊಟ್ಟಿದ್ದಾರೆ. ರಾಮಸ್ವಾಮಿಗೂ ಈ ಜಮೀನಿಗೂ ಏನ್ ಸಂಬಂಧ. ಅರ್ಜಿ ಕೊಟ್ಟ 10 ದಿನಗಳಲ್ಲಿಯೇ ಡಿನೋಟಿಫಿಕೇಷನ್ ಮಾಡಿಸಿದ್ದಾರೆ. ಇವರು ನ್ಯಾಯ ಬದ್ಧವಾಗಿ ಮಾಡಿದ್ದಾರಾ. ಇವರು ಮಾಡಬಾರದ್ದು ಮಾಡಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಅಂತಾರೆ. ಮೊದಲು ಅಶೋಕ್ ರಾಜೀನಾಮೆ ಕೊಟ್ಟು ಆ ಮೇಲೆ ಕೇಳಲಿ ಎಂದು ಸವಾಲು ಹಾಕಿದ್ದಾರೆ.