HMPV ವೈರಸ್: ಭಯ ಪಡಬೇಡಿ, ಇದು ಹೊಸ ವೈರಸ್ ಅಲ್ಲ
08:21 PM Jan 06, 2025 IST | Samyukta Karnataka
ನವದೆಹಲಿ: HMPV ವೈರಸ್ ಕುರಿತು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ತಿಳಿಸಿದ್ದಾರೆ.
2001ರಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ HMPV ವೈರಸ್ ಇದಾಗಿದ್ದು, ಹಲವು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಇದು ಹೊಸ ವೈರಸ್ ಏನಲ್ಲ. ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ, ಭಾರತೀಯ ಆರೋಗ್ಯ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಜೊತೆಗೆ ಚೀನಾ ಮತ್ತು ನೆರೆಯ ದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. “ವಿಶ್ವ ಆರೋಗ್ಯ ಸಂಸ್ಥೆ (WHO) ಈ ಸೋಂಕಿನ ಬಗ್ಗೆ ಎಚ್ಚರ ವಹಿಸಿದೆ. ಅದರ ವರದಿಯನ್ನು ಶೀಘ್ರದಲ್ಲೇ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ