For the best experience, open
https://m.samyuktakarnataka.in
on your mobile browser.

IT ಉದ್ಯೋಗ ಸಮಯ 14 ಗಂಟೆಗೆ ವಿಸ್ತರಣೆ: ಅಭಿಪ್ರಾಯ ಪಡೆದು, ಚರ್ಚಿಸಿ ಅಂತಿಮ ತೀರ್ಮಾನ

07:13 PM Jul 22, 2024 IST | Samyukta Karnataka
it ಉದ್ಯೋಗ ಸಮಯ 14 ಗಂಟೆಗೆ ವಿಸ್ತರಣೆ  ಅಭಿಪ್ರಾಯ ಪಡೆದು  ಚರ್ಚಿಸಿ ಅಂತಿಮ ತೀರ್ಮಾನ

ಬೆಂಗಳೂರು : ಐಟಿ ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗೆ ವಿಸ್ತರಣೆ ಕುರಿತಂತೆ ಐಟಿ ಉದ್ಯಮದಿಂದ ಪ್ರಸ್ತಾವ ನಮಗೆ ಬಂದಿದೆ. ಈ ಬಗ್ಗೆ ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದು ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲಸದ ಅವಧಿ ವಿಸ್ತರಣೆಯ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗುವುದು. ಐಟಿ ಉದ್ಯಮ ಯೂನಿಯನ್‌ಗಳ ಮುಖ್ಯಸ್ಥರನ್ನು ಕರೆಸಿ ಮಾತನಾಡಲಾಗುವುದು. ಇದಾದ ನಂತರ ತೀರ್ಮಾನ ಮಾಡಲಾಗುವುದು ಎಂದು ಅವರು ವಿವರಿಸಿದರು.

ಕೆಲಸದ ಅವಧಿ ವಿಸ್ತರಣೆ ವಿರೋಧಿಸಿ ಐಟಿ ಉದ್ಯೋಗಿಗಳು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಸ್ತಾವ ಐಟಿ ಉದ್ಯಮದಿಂದಲೇ ಬಂದಿದೆ. ಮಾಲೀಕರು, ಸಂಬಂಧಿಸಿದವರು ಸರ್ಕಾರದ ಮುಂದೆ ಅವರ ಅಭಿಪ್ರಾಯ ತಿಳಸಬಹುದು. ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಮುಂದಿನ ದಿನದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅಂತಿಮ ನಿರ್ಣಯ ಮಾಡಲಾಗುವುದು ಎಂದರು. ಈ ಪ್ರಸ್ತಾವದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಾ ಇದೆ. ಯಾರ ಅಭಿಪ್ರಾಯ ಏನಿದೆ ಎಂಬುದನ್ನು ನಾವು ಪರಿಗಣಿಸುತ್ತೇವೆ ಎಂದು ಹೇಳಿದರು. ಕಾರ್ಮಿಕ ಇಲಾಖೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದೆ. ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ಜೊತೆ ಶೀಘ್ರವೇ ಸಭೆ ಮಾಡಿದ ಬಳಿಕ ನಿರ್ಧಾರಕ್ಕೆ ಬರಲಿದೆ. ನಮ್ಮ ಸರ್ಕಾರ ಐಟಿ ಉದ್ಯೋಗಿಗಳು, ಕಾರ್ಮಿಕರು ಹಾಗೂ ಐಟಿ ಸಂಸ್ಥೆಗಳ ಒಳಿತನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರಕ್ಕೆ ಬರಲಿದೆ ಎಂದು ಸಚಿವ ಸಂತೋಷ್​ ಲಾಡ್​ ತಿಳಿಸಿದರು.