KAS ಪರೀಕ್ಷಾರ್ಥಿಗಳಿಗೆ ಹೊಸ ಸಮಸ್ಯೆ
ಬೆಂಗಳೂರು: KAS ಪರೀಕ್ಷಾರ್ಥಿಗಳಿಗೆ ಹೊಸ ಸಮಸ್ಯೆ ಎದುರಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕರ್ನಾಟಕ ಲೋಕ ಸೇವಾ ಆಯೋಗ ಆಯೋಜಿಸಿರುವ KAS ಪರೀಕ್ಷೆ ಇದೆ ಆಗಸ್ಟ್ 27 ರಂದು ನಡೆಯಲಿದ್ದು, ಪರೀಕ್ಷಾರ್ಥಿಗಳಿಗೆ ಈಗಾಗಲೇ ಹಾಲ್ ಟಿಕೆಟ್ ಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಭಾನುವಾರ ನಡೆಯುವುದು ಅಲಿಖಿತ ನಿಯಮ, ಆದರೆ ಈ ಬಾರಿ ಮಂಗಳವಾರ ನಡೆಯಲಿದೆ.
ಈಗ ಪರೀಕ್ಷಾರ್ಥಿಗಳಿಗೆ ಹೊಸ ಸಮಸ್ಯೆ ಎದುರಾಗಿದ್ದು, ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾರ್ಥಿಗಳು ಇರುವ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹಾಕಿದ್ದಾರೆ. ಮೈಸೂರಿನಲ್ಲಿರುವವರಿಗೆ - ಶಿವಮೊಗ್ಗ, ಚಿತ್ರದುರ್ಗದಲ್ಲಿರುವವರಿಗೆ - ಮಂಗಳೂರು ಹೀಗೆ ಅವೈಜ್ಞಾನಿಕವಾಗಿ ಸ್ಥಳ ನಿಗದಿ ಮಾಡಿದ್ದಾರೆ. ವಾರದ ದಿನ ರಜೆ ಅಲಭ್ಯತೆ ಇರುವ ಸಮಸ್ಯೆದೊಂದಿಗೆ, ಈಗ ಪರೀಕ್ಷಾರ್ಥಿಗಳು ರಾತ್ರಿ ಪ್ರಯಾಣ ಮಾಡಬೇಕು ಹಾಗೂ ದೂರದೂರುಗಳಿಗೆ ಹೋಗಲು ಅನವಶ್ಯಕ ಖರ್ಚು ವೆಚ್ಚ ಮಾಡಿಕೊಳ್ಳಬೇಕು.
ಈ ರೀತಿಯಾದ (ಅ)ವ್ಯವಸ್ಥೆಗೆ ಕಾರಣ ಯಾರು ಹಾಗೂ ಅಭ್ಯರ್ಥಿಗಳ ಸ್ವಂತ ಊರು/ಜಿಲ್ಲೆ ಬಿಟ್ಟು ನೂರಾರು ಕಿಲೋಮೀಟರ್ ದೂರದಲ್ಲಿರುವ ಕೇಂದ್ರಗಳಿಗೆ ಹಾಕಿರುವುದು ಯಾಕೆ ಎಂಬುದನ್ನು ಲೋಕಸೇವಾ ಆಯೋಗ ಸ್ಪಷ್ಟಪಡಿಸಬೇಕು. ಪರೀಕ್ಷೆ ವಾರದ ದಿನ ಇರುವುದರಿಂದ ಎರಡು ದಿನ ರಜೆ ಪಡೆದು ಹೋಗುವುದು ಅಥವಾ ರಾತ್ರಿ ಪ್ರಯಾಣ ಮಾಡುವುದು ಅಭ್ಯರ್ಥಿಗಳಿಗೆ ಅನವಶ್ಯಕ ಹೊರೆಯಾಗಲಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರು ಕೂಡಲೇ ಇದನ್ನು ಸರಿಪಡಿಸಬೇಕು ಎಂದಿದ್ದಾರೆ.