For the best experience, open
https://m.samyuktakarnataka.in
on your mobile browser.

RTO ಕೈ ಮಾಡಿದ್ದಕ್ಕೆ ವಿದ್ಯಾರ್ಥಿಗಳಿದ್ದ ವಾಹನ ಪಲ್ಟಿ

07:15 PM Sep 03, 2024 IST | Samyukta Karnataka
rto ಕೈ ಮಾಡಿದ್ದಕ್ಕೆ ವಿದ್ಯಾರ್ಥಿಗಳಿದ್ದ ವಾಹನ ಪಲ್ಟಿ

ಕೊಪ್ಪಳ: ಕ್ರೀಡಾಕೂಟಕ್ಕೆ ಮುಗಿಸಿಕೊಂಡು ವಾಪಾಸ್ ಗ್ರಾಮಕ್ಕೆ ಮರಳುವಾಗ ವಿದ್ಯಾರ್ಥಿಗಳಿದ್ದ ಟಾಟಾ ಏಸ್ ವಾಹನವು ಪಲ್ಟಿಯಾದ ೩೧ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.

ತಾಲ್ಲೂಕಿನ ಗುಳದಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೩೮ ವಿದ್ಯಾರ್ಥಿಗಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಆಗಮಿಸಿ, ವಾಪಾಸ್ ಗುಳದಳ್ಳಿಗೆ ಮರಳುತ್ತಿದ್ದರು. ವಿದ್ಯಾರ್ಥಿಗಳಿದ್ದ ವಾಹನಕ್ಕೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಆರ್.ಟಿ.ಓ ಅಧಿಕಾರಿ ಕೈ‌ಮಾಡಿದ್ದು, ಇದರಿಂದ ಭಯಗೊಂಡ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.

೩೧ ವಿದ್ಯಾರ್ಥಿಗಳ ತಲೆ, ಕೈ, ಕಾಲು ಮತ್ತು ಕುತ್ತಿಗೆ ಭಾಗದಲ್ಲಿ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ. ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲ ಗಾಯಗೊಂಡ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಪಾಲಕರು ಮತ್ತು ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡುತ್ತಿದ್ದರು.

ಮಾಹಿತಿ ತಿಳಿದ ಬಳಿಕ ವೇಗವಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ವಿದ್ಯಾರ್ಥಿಗಳನ್ನು ಪರಿಶೀಲಿಸಿದರು. ಬಳಿಕ ಉತ್ತಮವಾಗಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿ, ಶರವೇಗದಲ್ಲಿಯೇ ಹೋದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಸಿಪಿಐ ಸುರೇಶ ಡಿ., ನಗರ ಪೊಲೀಸ್ ಠಾಣೆಯ ಪಿಐ ಜಯಪ್ರಕಾಶ, ಪಿಎಸ್ಐ ಅಶೋಕ ಬೇವೂರು, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್ ಇದ್ದರು.

Tags :