ಕೈ ಪ್ರಣಾಳಿಕೆಗೆ ಮೋದಿ ಟಿಪ್ಪಣಿ
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಎಲ್ಲರನ್ನೂ ಆಕರ್ಷಿಸಿದೆ. ಮೋದಿಯಂತೂ ಪ್ರತಿದಿನ ಪ್ರಣಾಳಿಕೆಯಲ್ಲಿರುವ ಅಂಶಗಳಿಗೆ ಎಲ್ಲ ಕಡೆ ಪ್ರಚಾರ ನೀಡಿ ಜನಪ್ರಿಯಗೊಳಿಸುತ್ತಿದ್ದಾರೆ. ಇದಕ್ಕೆ ಅವರಿಗೆ ಕಾಂಗ್ರೆಸ್ ಪಕ್ಷ ಅಭಿನಂದನೆ ಸಲ್ಲಿಸಲೇಬೇಕು. ಕೈ ಪ್ರಣಾಳಿಕೆ ಕೇವಲ ಭರವಸೆಗಳ ಕಂತೆಯಲ್ಲ. ಅದಕ್ಕೆ ಬಹಳಷ್ಟು ಪರಿಶ್ರಮ ಸಂದಿದೆ. ೨೦೧೯ರಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ೨೦೨೪ಕ್ಕೆ ಸಿದ್ಧತೆ ಆರಂಭವಾಯಿತು. ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ಕೈಗೊಳ್ಳುವಾಗ ಜನಸಾಮಾನ್ಯರ ನೋವುಗಳನ್ನು ಸ್ವತಃ ಆಲಿಸಿದರು. ಅಲ್ಲದೆ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೆಂದು ತೀರ್ಮಾನಿಸಿದರು. ಪಾದಯಾತ್ರೆಯ ಕೊನೆಯಲ್ಲಿ ಉದಯಪುರದಲ್ಲಿ ೩ ದಿನ ಎಐಸಿಸಿ ಅಧಿವೇಶನ ನಡೆಯಿತು. ಅಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಅದೇರೀತಿ ಉತ್ತರ ಭಾರತದಲ್ಲೂ ಪಾದಯಾತ್ರೆ ನಡೆಯಿತು. ಅದರ ಫಲವಾಗಿ ಈ ವರ್ಷ ಏಪ್ರಿಲ್ ೫ ರಂದು ನ್ಯಾಯ ಪತ್ರ ಬಿಡುಗಡೆಯಾಯಿತು. ೪೬ ಪುಟಗಳು ಈ ಪ್ರಣಾಳಿಕೆಯಲ್ಲಿ ಪ್ರತಿ ಹಂತದಲ್ಲೂ ಜನಸಾಮಾನ್ಯರಿಗಾಗಿ ನ್ಯಾಯ ಕೊಡಿಸುವ ಬಗ್ಗೆ ವಿವರವಾದ ಚರ್ಚೆ ನಡೆದಿದೆ. ಬಹುತೇಕ ಜನರಿಗೆ ಸಿಗದ ಮೂಲಭೂತ ಸವಲತ್ತುಗಳ ಬಗ್ಗೆ ಸುದೀರ್ಘ ಚರ್ಚೆ ಇದರಲ್ಲಿದೆ. ಆಡಳಿತ ಪಕ್ಷ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಗೆ ಅರ್ಥ ಕಳೆದುಕೊಂಡಿದೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಅದರಿಂದಲೇ ತಮಿಳುನಾಡು ಮುಖ್ಯಮಂತ್ರಿ ಇದನ್ನು ಇಡೀ ಚುನಾವಣೆಗೆ ಹಿಡಿದ ಕನ್ನಡಿ ಎಂದಿದ್ದಾರೆ.
ಪ್ರಣಾಳಿಕೆ ಬಿಡುಗಡೆಯಾದಾಗ ಮೋದಿ ಮತ್ತು ಬಿಜೆಪಿ ಹೆಚ್ಚು ಗಮನಹರಿಸಿರಲಿಲ್ಲ. ಮಾಧ್ಯಮದವರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದು ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಎಲ್ಲ ಕಡೆ ಪಕ್ಷದ ಕಾರ್ಯಕರ್ತರು ಪ್ರಚಾರ ನೀಡಿದಾಗ ಎಲ್ಲರ ಗಮನ ಇತ್ತ ಹರಿಯಿತು. ಕೈ ಪ್ರಣಾಳಿಕೆ ಬಂದ ಮೇಲೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಅದರಲ್ಲಿ ಮೋದಿಯೇ ಎಲ್ಲರಿಗೂ ಗ್ಯಾರಂಟಿ ಎಂಬ ವಾಕ್ಯ ಹೊರತುಪಡಿಸಿದರೆ ಬೇರೆ ಏನೂ ಇಲ್ಲ. ಅದರಿಂದ ಮೋದಿಗೆ ಬೇಸರ ಮೂಡಿದ್ದು ಸಹಜ. ಅಲ್ಲದೆ ಮತದಾನದ ಮೊದಲ ಹಂತ ಮುಕ್ತಾಯಗೊಂಡ ಮೇಲೆ ಆಡಳಿತ ಪಕ್ಷಕ್ಕೆ ಗುಪ್ತಚರ ಇಲಾಖೆ ವರದಿ ಕೈಸೇರಿದೆ. ಅದರಲ್ಲಿ ಕೈ ಪರ ಜನ ಇರುವುದು ಹಾಗೂ ಕೈ ನೀಡಿದ ಭರವಸೆಗಳು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೆಲಸ ಮಾಡಿದಂತೆ ಇತರ ಕಡೆಯೂ ಪರಿಣಾಮ ಬೀರಲಿದೆ ಎಂದು ತಿಳಿಸಿರುವುದು ಮೋದಿ ಮತ್ತು ಇತರ ನಾಯಕರ ನಿದ್ದೆ ಕೆಡಿಸಿದೆ. ಅಂದಿನಿಂದ ದಿನನಿತ್ಯ ಸುಳ್ಳು ಹೇಳುವುದನ್ನು ಮೋದಿ ಆರಂಭಿಸಿದ್ದಾರೆ.
ಸುಳ್ಳು ೧: ಕೈ ಪ್ರಣಾಳಿಕೆ ಮೇಲೆ ಮುಸ್ಲಿಂ ಲೀಗ್ ಛಾಯೆ
ನಿಜ: ೬ ಪುಟಗಳ ಪ್ರಣಾಳಿಕೆಯಲ್ಲಿ ಎಲ್ಲೂ ಮುಸ್ಲಿಂ ಎಂಬ ಶಬ್ದವೇ ಬಳಕೆಯಾಗಿಲ್ಲ. ಸಂವಿಧಾನದಲ್ಲಿ ತಿಳಿಸಿರುವ ಹಾಗೆ ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರಸ್ತಾಪವಿದೆಯೇ ಹೊರತು ಕೋಮುವಾರು ಶಬ್ದಗಳು ಬಳಕೆಯಾಗಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರಸ್ತಾಪವಿದೆ.
ಸುಳ್ಳು ೨: ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಶರೀಯತ್ ಕಾನೂನು ಜಾರಿಗೆ ಬರುತ್ತದೆ
ನಿಜ: ವಿವಿಧ ಕೋಮುಗಳಿಗೆ ಸಂಬಂಧಿಸಿದ ನಾಗರಿಕ ಸಂಹಿತೆಗಳ ಸುಧಾರಣೆಗೆ ಒತ್ತು ನೀಡಲಾಗುವುದು.
ಸುಳ್ಳು ೩: ಮಾರ್ಕ್ಸ್ ಮತ್ತು ಮಾವೋವಾದಕ್ಕೆ ಉತ್ತೇಜನ
ನಿಜ: ಉದಾರ ಆರ್ಥಿಕ ನೀತಿ ಕಾಂಗ್ರೆಸ್ ೧೯೯೧ರಲ್ಲಿ ಜಾರಿಗೆ ತಂದಿತು. ಅದನ್ನೇ ಈಗಿನ ಸರ್ಕಾರವೂ ಅನುಸರಿಸುತ್ತಿದೆ. ಮುಕ್ತ ಆರ್ಥಿಕ ವ್ಯವಸ್ಥೆ ಎಲ್ಲ ಕಡೆ ಹೊಸ ಉದ್ಯೋಗ ಸೃಷ್ಟಿ ಮಾಡಿದೆ. ಕಾಂಗ್ರೆಸ್ ಅದಕ್ಕೆ ಬದ್ಧವಾಗಿದೆ ಎಂಬುದು ಸ್ಪಷ್ಟ.
ಸುಳ್ಳು ೪: ಕಾಂಗ್ರೆಸ್ ಬಂದರೆ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗೆ ನೀಡಿರುವ ಮೀಸಲಾತಿ ರದ್ದು.
ನಿಜ: ಮೀಸಲಾತಿಯನ್ನು ಶೇ.೫೦ಕ್ಕೆ ಹೆಚ್ಚಿಸಲಾಗು ವುದು. ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ. ಶೇ.೧೦ ಆರ್ಥಿಕವಾಗಿ ಹಿಂದುಳಿದವರಿಗೆ ಇರುವ ಮೀಸಲಾತಿಯನ್ನು ಎಲ್ಲರಿಗೂ ವಿಸ್ತರಿಸಲಾಗುವುದು.
ಸುಳ್ಳು ೫: ಕೈ ಅಧಿಕಾರಕ್ಕೆ ಬಂದಲ್ಲಿ ಸತ್ತವರ ಆಸ್ತಿ ಮೇಲೂ ತೆರಿಗೆ
ನಿಜ: ಸತ್ತವರ ಆಸ್ತಿ ಮೇಲೆ ತೆರಿಗೆ ಎಂಬ ಪ್ರಸ್ತಾಪವೇ ಇಲ್ಲ. ತೆರಿಗೆ ಸಂಗ್ರಹದಲ್ಲಿ ಸುಧಾರಣೆ, ಜಿಎಸ್‌ಟಿಗೆ ಹೊಸ ರೂಪ ನೀಡಲಾಗುವುದು. ಎಂಎಸ್‌ಎಂಇಗೆ ಮರುಜೀವ ನೀಡಲಾಗುವುದು.
ಇವುಗಳೆಲ್ಲ ಮೋದಿಯವರಿಗೆ ತಿಳಿಯದ ವಿಷಯವೇನಲ್ಲ. ಆದರೂ ಜನರಲ್ಲಿ ಅಪನಂಬಿಕೆ ಮೂಡಿಸಲು ಅವರು ಮಾಡುತ್ತಿರುವ ಪ್ರಯತ್ನ ಫಲ ನೀಡುತ್ತಿಲ್ಲ. ಅದರೂ ಕೈ ಪ್ರಣಾಳಿಕೆಗೆ ಪ್ರಚಾರವಂತೂ ಸಿಗುತ್ತಿದೆ.