For the best experience, open
https://m.samyuktakarnataka.in
on your mobile browser.

ಪೋಸ್ಟ್‌ಮಾರ್ಟಂ ಇಲಾಖೆ

03:30 AM Dec 04, 2024 IST | Samyukta Karnataka
ಪೋಸ್ಟ್‌ಮಾರ್ಟಂ ಇಲಾಖೆ

ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತಿದ್ದಾಗ ವಿಶ್ವ ತಲೆಯನ್ನು ನಕರಾತ್ಮಕವಾಗಿ ಕೊಡವಿದ. ವಿಶಾಲೂ ತುಂಬಾ ನಷ್ಟ ಆಯ್ತು ನಮ್ಗೆ ಎಂದಳು.
“ನಿಮ್ಗೆ ಯಾವ ಥರ ನಷ್ಟ?” ಎಂದು ಕೇಳಿದೆ.
“ಮೂರು ಕಡೆ ಬೈ ಎಲೆಕ್ಷನ್ ಆಯ್ತು. ನಮ್ಮಲ್ಲಿ ಆಗ್ಲಿಲ್ವಲ್ಲ” ಎಂದು ಪರಿತಪಿಸಿದಳು.
“ಜಾಗ ಖಾಲಿ ಆದ್ರೆ ಬೈ ಎಲೆಕ್ಷನ್ ಆಗುತ್ತೆ. ಇದರಿಂದ ನಿಮಗೇನು ಲಾಸ್ ಆಯ್ತು?” ಎಂದೆ.
“ಈ ಸಲ ಬೈ ಎಲೆಕ್ಷನ್ ಆದ ಎಲ್ಲಾ ಕ್ಷೇತ್ರಗಳಲ್ಲಿ ಒಂದೊಂದು ಓಟ್‌ಗೆ ಸಾವಿರಾರು ರೂಪಾಯಿ ಕೊಟ್ಟಿದ್ದಾರಂತೆ. ನಮ್ಮ ಫ್ರೆಂಡ್ಸು ಫೋನ್ ಮಾಡಿ ಹೇಳಿದ್ರು” ವಿಶ್ವ ಹೇಳಿದ.
“ಈ ಪಕ್ಷದವರೂ ಒಂದು ಓಟ್‌ಗೆ ಹತ್ತು ಸಾವಿರ. ಆ ಪಕ್ಷದವರೂ ಒಂದು ಓಟ್‌ಗೆ ಹತ್ತು ಸಾವಿರ”
“ಈ ಕಡೆ, ಆ ಕಡೆ ಹಣ ತಗೊಂಡು ಮಧ್ಯದವರಿಗೆ ಓಟ್ ಹಾಕ್ತಾರಾ? ಎಂದು ಕೇಳಿದೆ.
“ಎರಡೂ ಕಡೆ ಹಣ ಪಡೆದವರು ಕಾಯಿನ್ ಟಾಸ್ ಹಾಕ್ತಾರೆ. ಹೆಡ್ ಬಿದ್ರೆ ತಲೆ ಪಕ್ಷ, ಟೈಲ್ ಬಿದ್ರೆ ಬಾಲದ ಪಕ್ಷ”
“ಒಟ್ಟಾರೆಯಾಗಿ ನೀನು ಹೇಳೋದೇನು?” ಎಂದು ಕೇಳಿದೆ.
“ಈವರೆಗಿನ ರಾಜಕೀಯ ಏನಾಯ್ತು ಅನ್ನೋದು ತಿಳಿಯೋಕೆ ಪೋಸ್ಟ್ ಮಾರ್ಟಂ ಮಾಡೋದು ಒಳ್ಳೇದು, ಅನುಮಾನದ ಸಾವಿಗೆ ಅದನ್ನೇ ಮಾಡ್ತಾರೆ”.
“ಪೋಸ್ಟ್ ಮಾರ್ಟಂ ಆದ್ರೆ ಸಾವಿಗೆ ಕಾರಣ ತಿಳಿಯುತ್ತೆ. ಸಾವಿಗೆ ಏನು ಕಾರಣ? ನೇಣ್ಹಾಕಿದ್ದಾ? ನೀರಲ್ಲಿ ಬಿದ್ದಿದ್ದಾ? ವಿಷ ಉಣಿಸಿದ್ದಾ? ಇವೆಲ್ಲ ತಿಳೀಬೇಕಾದ್ರೆ ಪೋಸ್ಟ್ ಮಾರ್ಟಂ ಆಗ್ಲೇಬೇಕು, ಸೋಲೂ ಕೂಡ ಅಷ್ಟೇ” ಎಂದು ವಿಶ್ವ ಹೇಳಿದಾಗ ಮಡದಿ ಆಶ್ಚರ್ಯ ಪಟ್ಟಳು.
“ಅಲ್ರೀ, ಪೋಸ್ಟ್ ಮಾರ್ಟಂಗೂ ಎಲೆಕ್ಷನ್‌ಗೂ ಏನ್ರೀ ಸಂಬಂಧ?” ಎಂದು ಕೇಳಿದಳು.
“ಇಲ್ಲೂ ಕೂಡ ಹಾಗೇನಮ್ಮ, ಯಾವ ಕಾರಣಕ್ಕೆ ನಮ್ಗೆ ಫಲಿತಾಂಶ ಸಿಕ್ತು ಅಥವಾ ಸಿಗ್ಲಿಲ್ಲ ಅನ್ನೋದನ್ನ ಡಿಸೆಕ್ಟ್ ಮಾಡಿ ನೋಡ್ಬೇಕಾಗುತ್ತೆ” ಎಂದ.
“ಡಿಸೆಕ್ಷನ್ನು, ಪೋಸ್ಟ್ ಮಾರ್ಟ್ಂಗೆ ಗೆದ್ದವರಿಗೆ ಟೈಂ ಎಲ್ಲಿ ಇರುತ್ತೆ?” ವಿಶಾಲು ಕೇಳಿದಳು.
“ಅದಕ್ಕಾಗಿ ಒಂದು ಇಲಾಖೆ ಸೃಷ್ಟಿ ಮಾಡ್ಬೇಕಾಗುತ್ತೆ. ಅದರ ಹೆಸರು ಪೋಸ್ಟ್ಮಾರ್ಟಂ ಇಲಾಖೆ ಅಂತ. ಅದಕ್ಕೆ ಒಬ್ಬ ಸಚಿರ‍್ನೂ ನೇಮಕ ಮಾಡ್ಬೇಕಾಗುತ್ತೆ” ಎಂದ ವಿಶ್ವ.
“ ಪೋಸ್ಟ್ಮಾರ್ಟಂ ಖಾತೆಯ ಕೆಲ್ಸಗಳೇನು?” ಅಂತ ಕೇಳಿದೆ.
“ಯಾವ್ದೇ ಸರ್ಕಾರ ಹೊಸದಾಗಿ ಬಂದ ಕೂಡ್ಲೆ ಹಳೇ ಸರ್ಕಾರದ ಬಗ್ಗೆ ಕ್ಯಾತೆ ತೆಗೀಬೇಕು, ಹಿಂದಿನ ಲೋಪದೋಷಗಳನ್ನ ಹುಡುಕಬೇಕು. ಪೋಸ್ಟ್‌ಮಾರ್ಟಂ ಮಾಡ್ಬೇಕು. ಉದಾಹರಣೆಗೆ ಒಂದು ಬ್ರಿಡ್ಜ್ ಬಿತ್ತು ಅಥವಾ ಒಂದು ಅಣೆಕಟ್ಟು ಬಿರುಕು ಬಿಡ್ತು ಅಂದಾಗ ಯಾವ ಸರ್ಕಾರ ಆಗ ಇತ್ತು ಅಂತ ನಾವು ಪರಿಶೋಧನೆ ಮಾಡ್ಬೇಕಾಗುತ್ತೆ” ಎಂದು ವಿಶ್ವ ಹೇಳಿದ.
“ಒಂದ್ವೇಳೆ ಹಿಂದೆ ಕೂಡ ಇರ‍್ದೇ ಸರ್ಕಾರ ಇದ್ದು ಹಣ ಮಂಜೂರಾಗಿದ್ರೆ?”.
“ಅಂಥ ಸಮಯದಲ್ಲಿ ಇನ್ನೂ ಹಿಂದಿದ್ದ ಬೇರೆ ಸರ್ಕಾರದವರಿಗೆ ಹೋಗಬೇಕಾಗುತ್ತೆ. ಗುದ್ದಲಿ ಪೂಜೆ ಮಾಡಿದ ಗಳಿಗೆ ಸರಿ ಇಲ್ಲ ಅಂತ ವಾದ ಮಾಡಬಹುದಲ್ಲ? ಶಾಸ್ತ್ರಿಗಳು ಸರಿಯಾಗಿ ಶಂಕುಸ್ಥಾಪನೆ ಮಾಡಿಸಲಿಲ್ಲ ಅನ್ನಬಹುದಲ್ಲ” ಎಂದ ವಿಶ್ವ.
“ಬೈ ಎಲೆಕ್ಷನ್‌ನಲ್ಲಿ ಸೋಲು ಗೆಲುವುಗಳ ಬಗ್ಗೆ ಹೆಂಗೆ ಕ್ಯಾತೆ ತಗೀತೀರ?” ಎಂದೆ. ಆಗ ವಿಶ್ವ ಉತ್ಸಾಹದಿಂದ ಹೇಳಿದ.
“ಪಾರ್ಟಿ ಕಾರ್ಯಕರ್ತರೆಲ್ಲರಿಗೂ ತಲಾ ನಾಲ್ಕೈದು ಕೋಟಿ ದುಡ್ಡು ಕೊಟ್ಬಿಡ್ತಾರೆ ಎಲ್ಲರಿಗೂ ಹಂಚು ಅಂತ, ತಲೆಗೆ ಹತ್ಹತ್ತು ಸಾವಿರ ರೂಪಾಯಿ ಹಂಚ್ಬೇಕು ಅವನು. ಆಗ ಅವನು ಏನ್ಮಾಡ್ತಾನೆ? ನಿನಗೆ ಹತ್ತು ನನಗೆ ಹತ್ತು ಅಂತ ಕೆಲವರಿಗೆ ಹಂಚ್ತಾನೆ. ಉಳಿದಿದ್ದು ತನ್ನ ಜೇಬಿಗೆ ಹಾಕಿಕೊಳ್ಳುತ್ತಾನೆ. ಆಗ ಅವನ ಹತ್ರ ಒಂದೆರಡು ಕೋಟಿ ಉಳಿಯುತ್ತೆ”
“ಇದು ಚುನಾವಣೆ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರೊಲ್ವಾ? ಸೋಲು-ಗೆಲುವೆಲ್ಲ ಜಗತ್ತಿನ ನಿಯಮ. ಹಣ ಹಂಚಿದ್ದಕ್ಕೇ ಗೆದ್ರು ಅಂತ ಹೇಳೋಕೆ ಆಗೊಲ್ಲ” ಎಂದೆ ನಾನು.
“ಅದೇನೋ ನಿಜ, ಹಣಕ್ಕೂ, ಓಟ್‌ಗೂ ಸಂಬಂಧ ಇಲ್ಲ. ಯಾರು ಕೊಟ್ರ‍್ರೂ ನಾವು ತಗೋತೀವಿ, ಹಾಕೋದು ಮಾತ್ರ ನಮಗೆ ಯಾರು ಬೇಕೋ ಅವರಿಗೇ” ಎಂದ ವಿಶ್ವ.
“ಹಾಗಿದ್ರೆ, ಪೋಸ್ಟ್ ಮಾರ್ಟಂ ಇಲಾಖೆಯ ಕೆಲ್ಸ ಏನು?” ಎಂದು ಮತ್ತೆ ಕೇಳಿದೆ.
“ಪೋಸ್ಟ್ ಮಾರ್ಟಂ ಇಲಾಖೆಯವರು ಸನಿಕೆ, ಪಿಕಾಸಿ ಹಿಡಿದು ಹಳೇದನ್ನ ಕೆದಕ್ತಾರೆ. ಈ ಮೊದಲು ಯಾರಿದ್ರು? ಅವರು ಯಾವ ರೀತಿ ಆಡಳಿತ ಮಾಡಿದ್ರು? ಅವರ ಕಾಲದಲ್ಲಿ ಎಷ್ಟು ಕೋಟಿ ನುಂಗಿದ್ರು? ದಾಖಲೆ ಸಮೇತ ಕಂಡುಹಿಡೀತಾರೆ”
“ಅದರಿಂದ ಉಪಯೋಗ?”.
“ಗೂಬೆ ತಂದರ‍್ತೀವಿ ಅದನ್ನ ಯಾರ ತಲೆ ಮೇಲೆ ಹೇಗೆ ಕೂರಿಸಬೇಕು ಅಂತ ಐಡಿಯಾ ಸಿಗುತ್ತೆ” ಎಂದ ವಿಶ್ವ.
“ಯಾರು ಹೆಚ್ಚು ತಿಂದ್ರು ಅಂತ ಪೋಸ್ಟ್ ಮಾರ್ಟಂ ಇಲಾಖೆ ಸರ್ವೆ ಮಾಡ್ಬೇಕಾಗುತ್ತೆ” ಎಂದಳು ವಿಶಾಲು.
“ಇದಕ್ಕೋಸ್ಕರ ಹೊಸ ಇಲಾಖೆ ಅಂದ್ರೆ ಮತ್ತೆ ಕೋಟಿ ಕೋಟಿ ಖರ್ಚಾಗುತ್ತಲ್ಲ?” ಎಂದೆ.
“ಉಳಿದ ಸಚಿವರೆಲ್ಲ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗರ‍್ತಾರೆ. ಹಳೇದನ್ನು ಕೆದಕೋಕೇ ಒಂದು ಇಲಾಖೆ ಬೇಕಾಗುತ್ತೆ. ಆಗ ಜನಕ್ಕೆ ಸತ್ಯ ತಿಳಿಯುತ್ತೆ. ಎಲ್ಲಿ ತಪ್ಪಾಗಿದೆ ಅಂತ ಗೊತ್ತಾಗುತ್ತೆ”
“ಆಯ್ತು, ಎಲೆಕ್ಷನ್‌ನಲ್ಲಿ ನಾವು ಸೋತಿದ್ದಾಗಿದೆ. ಆಗ ಏನ್ಮಾಡ್ಬೇಕು?” ಎಂದು ಕೇಳಿದೆ.
“ಆಗ ಆತ್ಮ ಶೋಧನಾ ಸಮಾವೇಶ ಮಾಡ್ಬೇಕಾಗುತ್ತೆ. ಆತ್ಮ ಇದ್ದವರೆಲ್ಲ ಯಾಕೆ ಈ ಥರ ಸೋಲು ಆಯ್ತು ಅಂತ ಚರ್ಚಿಸುತ್ತಾರೆ. ಸ್ವಾಭಿಮಾನ ಸಮಾವೇಶ ಮಾಡ್ಬೇಕು. ಎಲ್ಲಿ ಎಡವಿದ್ದು ಅನ್ನೋದರ ಬಗ್ಗೆ ವಿಚಾರ ಸಂಕಿರಣ ಮಾಡಬಹುದು. ಕೊಟ್ಟ ಹಣ ಕ್ಲೈಮ್ಯಾಕ್ಸಲ್ಲಿ ವರ್ಕೌಟ್ ಆಗಿಲ್ಲ ಯಾಕೆ? ಅಂತ ಚರ್ಚಿಸಬೇಕು”.
“ಇದಕ್ಕಾಗಿ ಹೊಸ ಇಲಾಖೆ ಮಾಡೋದ್ರಲ್ಲಿ ಅರ್ಥ ಇಲ್ಲ” ಎಂದೆ.
“ಖಂಡಿತವಾಗ್ಲೂ ಅರ್ಥ ಇದೆ. ಈಗ ಯಾವ್ದೇ ದಿನಪತ್ರಿಕೆ ತೆಗೆದು ನೋಡಿದ್ರೂ ಹಿಂದಿನ ಸರ್ಕಾರ ಹೀಗ್ ಮಾಡ್ತು, ಹಾಗ್ ಮಾಡ್ತು ಅಂತ ಹೇಳ್ತಾ ಬರ‍್ತಾರೆ. ಈ ಸರ್ಕಾರ ಇದ್ದಾಗ್ಲೂ ಹಾಗೇ, ಹಿಂದಿನ ಸರ್ಕಾರ ಇದ್ದಾಗ ಇನ್ನೂ ಜಾಸ್ತೀನೇ ಇತ್ತಲ್ಲ ಹಗರಣ? ಹಳಬರ ತಪ್ಪುಗಳ್ನ ಹುಡುಕಿ ಲಿಸ್ಟ್ ಮಾಡಿ ಜನಗಳ ಮುಂದೆ ಇಡ್ತಾ ಇದ್ರೆ ಮತದಾರರಿಗೂ ಮಜಾ ಸಿಗುತ್ತೆ”
“ಜನಕ್ಕೇನು ಮಜಾ ಸಿಗುತ್ತೆ?” ಎಂದೆ.
“ಜನಕ್ಕೆ ಬಿಟ್ಟಿ ಮನರಂಜನೆ ಸಿಗುತ್ತೆ, ಪೇಪರ್ ಓದೋ ಉತ್ಸಾಹ ಆಗುತ್ತೆ, ಪೇಪರ್ ಸರ್ಕ್ಯೂಲೇಷನ್ ಜಾಸ್ತಿ ಆಗುತ್ತೆ, ರಾತ್ರಿ ಹೊತ್ತು ಪಾರ್ಟಿ ಮಾಡ್ತಾ ಬಾರಲ್ಲಿ ಕೂತಿರೋವಾಗ ಬರೀ ಇದೇ ಸುದ್ದಿ ಚರ್ಚೆ ಆಗುತ್ತೆ, ಇದಕ್ಕಿಂತ ಬೇಕಾ?” ಎಂದು ವಿಶ್ವ ಹೇಳಿದಾಗ, ಇರಬಹುದೇನೋ ಎಂದು ನನಗೂ ಅನ್ನಿಸಿತು.