For the best experience, open
https://m.samyuktakarnataka.in
on your mobile browser.

ಪಿತ್ತಜನಕಾಂಗಕ್ಕೆ ಹೆಚ್ಚಿನ ಮಹತ್ವ ಅವಶ್ಯ

04:00 AM Dec 03, 2024 IST | Samyukta Karnataka
ಪಿತ್ತಜನಕಾಂಗಕ್ಕೆ ಹೆಚ್ಚಿನ ಮಹತ್ವ ಅವಶ್ಯ

ಯಾವುದೇ ಒಂದು ವಾಹನವು ನಿರ್ದಿಷ್ಟವಾಗಿ ಚಾಲನೆಗೊಳ್ಳಲು ಇಂಜಿನ್ ಉತ್ತಮ ಹಾಗೂ ಸುಭದ್ರವಾಗಿರಬೇಕು ಮತ್ತು ಅದಕ್ಕೆ ಸಂಬಂಧಿಸಿದ ಬಿಡಿ ಭಾಗಗಳು ಉತ್ತಮವಾಗಿರಬೇಕು. ಅದೇ ರೀತಿಯಲ್ಲಿ ಪ್ರತಿ ಮಾನವ ಹಾಗೂ ಪ್ರಾಣಿ-ಪಕ್ಷಿಗಳಲ್ಲಿ ದೇಹವನ್ನು ಯಥಾಚಿತ್ ಜೀವಂತವಾಗಿಟ್ಟು ಆರೋಗ್ಯವಂತವಾಗಿರಲು ದೇಹಕ್ಕೆ ಹಲವು ವಿಧದ ಅಂಗಾಂಗಗಳು ಉತ್ತಮ ಕಾರ್ಯ ನಿರ್ವಹಿಸಬೇಕು ಅಲ್ಲವೇ.
ನಾವು ಸಾಮಾನ್ಯವಾಗಿ ದೇಹದೊಳಗೆ ಅಡಗಿರುವ ಹೃದಯ, ಮೆದುಳು, ಪಿತ್ತ ಜನಕಾಂಗ ಸೇರಿದಂತೆ ಹಲವು ಅಂಗಗಳಿಗೆ ಹೆಚ್ಚಿನ ಮಹತ್ವ ಕೊಡುವ ಉತ್ತಮ ಆರೋಗ್ಯಕ್ಕೆ ನೆರವಾಗುವಂತಹ ಅಂಗಾಂಗಗಳ ಪೈಕಿ ಪಿತ್ತಜನಕಾಂಗ ಅಥವಾ ಯಕೃತ್ (ಲಿವರ್)ಕೂಡ ಒಂದು. ಇದು ನಮ್ಮ ದೇಹದ ಎರಡನೇ ಅತಿ ದೊಡ್ಡ ಅಂಗವಾಗಿದೆ. ಇದು ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಕೆಲಸ ನಿರ್ವಹಿಸುವ ದೊಡ್ಡ ರಾಸಾಯನಿಕ ಕಾರ್ಖಾನೆ ಇದ್ದಂತೆ ಜೀರ್ಣಕ್ರಿಯೆಗೆ ಬೇಕಾದ ಕ್ಷಾರಿಯಾ ಪಿತ್ತ ರಸವನ್ನು ಉತ್ಪಾದಿಸುತ್ತದೆ. ದೇಹದಲ್ಲಿ ಹೈಕ್ಲೋಜನ್ ಸಂಗ್ರಹಣೆ, ಕೆಂಪು ರಕ್ತ ಕಣಗಳ ವಿಭಜನೆ, ಹಾರ್ಮೋನ್ ಉತ್ಪಾದನೆ ಹಾಗೂ ವಿಷದ ಅಂಶಗಳನ್ನು ತೆಗೆಯುವ ಕೆಲಸವನ್ನು ಮಾಡುತ್ತದೆ. ಇದು ದೇಹದ ಕಿಬ್ಬೊಟ್ಟೆಯ ಎದೆಗೂಡಿನ ಜಾಗದಲ್ಲಿ ಇರುತ್ತದೆ. ಆರೋಗ್ಯವಂತ ಶರೀರದಲ್ಲಿ ೧.೫ ಕೆಜಿಯಷ್ಟು ತೂಕ ಇರುವ ಯಕೃತ್ತು ಅಪಧಮನಿ-ಅಭಿದಮನಿ ಎಂದು ಕರೆಯಲ್ಪಡುವ ರಕ್ತನಾಳಗಳಿಗೆ ಸಂಪರ್ಕ ಹೊಂದಿಕೊಂಡಿರುತ್ತದೆ.
ಈ ಯಕೃತ್ತಿಗೆ ಬರುವ ತೊಂದರೆಯಲ್ಲಿ ಫ್ಯಾಟಿ ಲಿವರ್ ಕೂಡ ಒಂದು. ಯಕೃತ್‌ನಲ್ಲಿ ಅತಿಯಾದ ಕೊಬ್ಬು ಸಂಗ್ರಹಗೊಂಡು ಅತಿಯಾಗಿ ಆಯಾಸವಾಗುವುದು, ದೇಹ ತೂಕ ಹೆಚ್ಚಾಗುವುದು, ಲಿವರ್‌ನಲ್ಲಿ ನೀರು ತುಂಬಿಕೊಳ್ಳುವುದು ಈ ಎಲ್ಲಾ ಸಮಸ್ಯೆಗಳು ಮನುಷ್ಯನನ್ನು ಅನಾರೋಗ್ಯಕ್ಕೆ ದೂಡುತ್ತದೆ. ಬೈಲಿರುಬಿನ್ ಮಟ್ಟ ಹೆಚ್ಚುವುದು, ಹೈಪಟೈಟಿಸ್, ಮದ್ಯಪಾನ, ಕೊಬ್ಬು ತುಂಬಿದ ಯಕೃತ್ತು, ಸಿರೋಸಿಸ್, ಕ್ಯಾನ್ಸರ್, ಹೆಚ್ಚು ಔಷಧಿಗಳ ಸೇವನೆಯಿಂದಾಗಿ ಯಕೃತ್ತಿನಲ್ಲಿ ತೊಂದರೆ ಹೆಚ್ಚಾಗುತ್ತವೆ. ಇದರಿಂದ ನಮ್ಮ ದೇಹದಲ್ಲಿನ ಕಿಡ್ನಿಗಳಿಗೂ ತೊಂದರೆ ಆಗುವುದು. ಕ್ಯಾನ್ಸರ್, ಸಕ್ಕರೆ ಕಾಯಿಲೆ ಹೆಚ್ಚಾಗುವುದು ಹೃದಯ ಸಂಬಂಧಿ ಸಮಸ್ಯೆ ನರಸಮಸ್ಯೆ ಜೊತೆಗೆ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರಬಹುದು. ಹೆಚ್ಚು ಮದ್ಯ ಸೇವಿಸುವವರಲ್ಲಿ ಸಮಸ್ಯೆ ಹೆಚ್ಚಾಗುವುದು, ಜೊತೆಗೆ ನಾವು ತಿನ್ನುವ ಆಹಾರ ಜಂಕ್ ಫುಡ್ ಎಣ್ಣೆಯುಕ್ತ ಆಹಾರ ಇದೆಲ್ಲವೂ ಪಿತ್ತಜನಕಾಂಗ ಅಥವಾ ಯಕೃತ್‌ಗೆ ಹಾನಿಕರ, ಹಾಗಾಗಿ ಇದನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯುತ್ತಾರೆ. ಆರಂಭಿಕ ಹಂತದಲ್ಲಿ ಹೊಟ್ಟೆ ಭಾಗದಲ್ಲಿ ಹೆಚ್ಚಿನ ತೂಕ, ತೂಕ ಕಡಿಮೆಗೊಳಿಸುವಲ್ಲಿ ವಿಫಲತೆ, ಹೆಚ್ಚಿದ ಕೊಲೆಸ್ಟ್ರಾಲ್, ಸುಸ್ತು, ವಾಕರಿಕೆ ಹಾಗೂ ಅಜೀರ್ಣ, ಮಾನಸಿಕವಾಗಿ ಕಿರಿಕಿರಿ, ಕಾಲು ಕೈಗಳಲ್ಲಿ ನೋವಾಗುವುದರ ಜೊತೆಗೆ ಕಾಲು ಊತಗೊಳ್ಳುವುದು, ಚರ್ಮಕಡಿತ, ಕಿಬ್ಬೊಟ್ಟೆ ನೋವು ಇವೆಲ್ಲವೂ ಕೆಲವು ಸಾಮಾನ್ಯ ಸೂಚನೆಗಳಾಗಿದೆ. ಹಾಗಾಗಿ ನಮ್ಮ ದಿನನಿತ್ಯದ ಜೀವನ ಶೈಲಿಯ ಬದಲಾವಣೆಯಿಂದ ಯಕೃತ್ತನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.
ಇವುಗಳ ಸೇವನೆ ಆರೋಗ್ಯಕರ
ಫ್ಯಾಟಿ ಲಿವರ್‌ಗೆ ಕೆಲವಷ್ಟು ಮನೆಯಲ್ಲಿ ಮಾಡಿದಂತಹ ಜ್ಯೂಸ್ ಹಾಗೂ ಹಸಿರು ತರಕಾರಿ ಸಲಾಡ್ ಅನ್ನು ತಿನ್ನುವುದು ಒಳ್ಳೆಯದು. ಕೆಲವಷ್ಟು ಪಾನೀಯಗಳು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದು, ಪೌಷ್ಟಿಕಾಂಶ ಸತ್ವಗಳನ್ನು ಒಳಗೊಂಡಿರುವ ನೆಲ್ಲಿಕಾಯಿ ಲಿವರ್ ಭಾಗದ ವಿಷಕಾರಿ ಅಂಶಗಳನ್ನು ಹೋಗಲಾಡಿಸುವಲ್ಲಿ ಇದು ಕೆಲಸ ಮಾಡುತ್ತದೆ.
ಬೀಟ್ರೂಟ್ ಜ್ಯೂಸ್, ಇದರಲ್ಲಿ ನಾರಿನ ಪ್ರಮಾಣ ಹೆಚ್ಚು ಆಂಟಿಆಕ್ಸಿಡೆಂಟ್ ಮತ್ತು ಇನ್ನಿತರ ಅಗತ್ಯ ಕಣಜಾಂಶಗಳನ್ನು ಹೊಂದಿದ್ದು ದೇಹದ ವಿಷಕಾರಿ ಅಂಶಗಳಿಂದ ಮುಕ್ತವಾಗಿಸಲು ಸಾಕಷ್ಟು ಕೆಲಸ ಮಾಡುತ್ತದೆ. ಅರಿಶಿಣ ಚಹ ಸಹ ದೇಹದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸುತ್ತದೆ ಮತ್ತು ಲಿವರ್ ಆರೋಗ್ಯವನ್ನು ಅಭಿವೃದ್ಧಿಪಡಿಸುತ್ತದೆ. ಅದನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಒಳಿತು. ಗ್ರೀನ್ ಟೀ ಕ್ಯಾನ್ಸರ್ ಜೀವಕೋಶಗಳು ಅಭಿವೃದ್ಧಿ ಆಗದ ರೀತಿ ತಡೆಯುತ್ತದೆ.
ಅಲೋವೆರಾ ಜ್ಯೂಸ್ ತುಂಬಾನೇ ಒಳ್ಳೆಯದು. ಅಲೋವೆರಾ ಎಳೆಯಿಂದ ಜಲ್ಲನ್ನು ತೆಗೆದುಕೊಂಡು ನೀರಿನಲ್ಲಿ ಸೇರಿಸಿ ಮಾಡಿ ದಿನಕ್ಕೆ ಎರಡು ಬಾರಿಯಂತೆ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು. ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವ ಬದಲು ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣು ಸೇವಿಸಿದರೆ ಉತ್ತಮ. ಶುಂಠಿಯನ್ನು ಜಜ್ಜಿ ರಸ ತೆಗೆದು ನೀರಿನಲ್ಲಿ ಸೇರಿಸಿ ದಿನಕ್ಕೆ ಎರಡು ಬಾರಿಯಂತೆ ಸೇವಿಸುವುದು ಉತ್ತಮ. ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯುವುದು ಉತ್ತಮ.
ಹೊರಗೆ ಸಿಗುವ ಜಂಕ್ ಪದಾರ್ಥ, ಎಣ್ಣೆಯಿಂದ ಕರಿದ ತಿಂಡಿ ಪದಾರ್ಥಗಳು, ಸಕ್ಕರೆ, ಉಪ್ಪು, ಕೊಬ್ಬು ಪದಾರ್ಥಗಳಿಂದ ದೂರವಿರುವುದು ಒಳಿತು. ಇದರ ಜೊತೆಗೆ ನಿಯಮಿತವಾಗಿ ಸೈಕ್ಲಿಂಗ್, ವ್ಯಾಯಾಮ, ಸ್ವಿಮ್ಮಿಂಗ್ ಮಾಡುವುದರಿಂದ ಈ ತೊಂದರೆಯಿಂದ ಹೊರಬರಲು ಸಾಧ್ಯವಾಗುತ್ತದೆ. ದಿನಾಲೂ ಹೆಚ್ಚು ನೀರು ಕುಡಿಯುವುದರಿಂದ ಪಿತ್ತಜನಕಾಂಗ ಶುದ್ಧಿಯಾಗಿ, ಆರೋಗ್ಯಕರ ತೂಕ ಇಟ್ಟು ಕೊಳ್ಳುವುದು ಉತ್ತಮ. ಮೇಲಿನ ನಿಯಮ ಹಾಗೂ ಆಹಾರ ಪದ್ಧತಿಯನ್ನು ಅನುಸರಿಸಿದಲ್ಲಿ ವೈದ್ಯರನ್ನು ಸಂಪರ್ಕಿಸುವುದು ತಪ್ಪುತ್ತದೆ.