For the best experience, open
https://m.samyuktakarnataka.in
on your mobile browser.

ಕೋಚ್ ಆಯ್ಕೆಗೆ ದ್ರಾವಿಡ ಪ್ರಾಣಾಯಾಮ

02:30 AM May 13, 2024 IST | Samyukta Karnataka
ಕೋಚ್ ಆಯ್ಕೆಗೆ ದ್ರಾವಿಡ ಪ್ರಾಣಾಯಾಮ

ಕಾಲದಿಂದ ಕಾಲಕ್ಕೆ ಅನೇಕ ಕ್ರೀಡಾ ದಿಗ್ಗಜರು ಕ್ರಿಕೆಟ್ ಲೋಕವನ್ನು ಆಳಿ ತೆರೆಮರೆಗೆ ಸರಿದಿದ್ದಾರೆ. ಅದರಲ್ಲಿ ಕೆಲವರು ಮರೆಯಲಾಗದ ಮೈಲಿಗಳನ್ನು ನಿರ್ಮಿಸಿ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದಿದ್ದಾರೆ. ಪ್ರತಿಭೆ, ಆಕ್ರಮಣಕಾರಿ ಹಾಗೂ ಮನೋರಂಜನಾತ್ಮಕ ಆಟದ ಶೈಲಿಗಳ ವಿಷಯ ಪ್ರಸ್ತಾಪವಾದಾಗ ಡಾನ್ ಬ್ರಾಡ್ಮನ್, ಸಚಿನ್, ಗಂಗೂಲಿ, ಸೆಹ್ವಾಗ್, ಬ್ರಿಯಾನ್ ಲಾರಾ, ಕೃಷ್ಣಮಾಚಾರಿ ಶ್ರೀಕಾಂತ್, ಕಪಿಲ್, ವಿರಾಟ್, ರೋಹಿತ್ ಶರ್ಮ, ಧೋನಿ ಹೀಗೆ ಹಲವಾರು ದಿಗ್ಗಜರ ಹೆಸರು ಮುನ್ನೆಲೆಗೆ ಬಂದಿತು. ಆದರೆ ಕ್ರಿಕೆಟ್ ಲೋಕದಲ್ಲಿ ಪರಿಶ್ರಮ, ಪರಿಪೂರ್ಣತೆ ಹಾಗೂ ದೃಢತೆಯ ವಿಷಯ ಬಂದಾಗ ಹಲವು ದಿಗ್ಗಜರೊಂದಿಗೆ ಮೊದಲ ಸಾಲಿನಲ್ಲಿ ಕೇಳಿ ಬರುವ ಹೆಸರು ರಾಹುಲ್ ದ್ರಾವಿಡ್. ಭಾರತ ತಂಡದ ಕೋಚ್ ಆಗಿ ಯಶಸ್ವಿಯಾಗುವುದು ಅತ್ಯಂತ ಕಷ್ಟಕರ ಕೆಲಸ. ಆದಾಗ್ಯೂ, ನವೆಂಬರ್ ೨೦೨೧ ರಲ್ಲಿ ರವಿಶಾಸ್ತ್ರಿ ನಂತರ ಕೋಚ್ ಆಗಿ ರಾಹುಲ್ ಕಾರ್ಯನಿರ್ವಹಿಸಿದ ಪರಿ ಗಮನಾರ್ಹ. ಆದರೆ ಮೂರು ವರುಷಗಳಲ್ಲಿ ದ್ರಾವಿಡ್ ಬಿಸಿಸಿಐಒಗೆ ಬೇಡವಾದರೆ? ಅಥವಾ ಬದಲಾವಣೆ ಇದೊಂದು ಸಹಜ ಪ್ರಕ್ರಿಯೆಯೇ ಎಂದು ಕ್ರಿಕೆಟ್ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ.
ಆಟಕ್ಕೊಂದು ಸ್ಥಿರತೆ, ಗಟ್ಟಿತನ ಒದಗಿಸಿ ಗೆಲುವಿನ ಗುರಿ ಸೇರಿಸುವ ಮಧ್ಯಮ ಕ್ರಮಾಂಕದ ಆಟಗಾರರು ಅಷ್ಟೇ ಮುಖ್ಯ. ಅವರಲ್ಲಿ ವಿಜಯ್ ಹಜಾರೆ, ವಿಜಯ್ ಮಂಜ್ರೇಕರ್, ದಿಲೀಪ್ ವೆಂಗ್‌ಸರ್ಕರ್, ರವಿಶಾಸ್ತ್ರಿ ಸಂಜಯ್ ಮಂಜ್ರೇಕರ್ ಪ್ರಮುಖರು. ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುವುದು ರಾಹುಲ್ ದ್ರಾವಿಡ್, ಕಲಾತ್ಮಕ ಆಟಕ್ಕೊಂದು ಬೆರಗು ಕೊಟ್ಟು ಸ್ವದೇಶದಲ್ಲಷ್ಟೇ ಅಲ್ಲದೆ ವಿದೇಶಿ ನೆಲದಲ್ಲೂ ಅಚಲವಾಗಿ ಕ್ರೀಸ್‌ನಲ್ಲಿ ನಿಂತು ಬೌಲರ್‌ಗಳ ನಿದ್ದೆಗೆಡಿಸಿದ ಕೀರ್ತಿ ದ್ರಾವಿಡ್‌ಗೆ ಸಲ್ಲುತ್ತದೆ. ಅದು ಇಂಗ್ಲೆಂಡ್, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಯಾವುದೇ ದೇಶದಲ್ಲಾಗಿರಲಿ ಅವರ ಕಲಾತ್ಮಕ ಆಟ ಸೋತಿದ್ದಿಲ್ಲ. ಒಂದಿಷ್ಟು ವೇಗ ಕಡಿಮೆಯಾಗಿದ್ದು ನಿಜ. ಅದೇ ಕಾರಣಕ್ಕಾಗಿ ಆರಂಭದ ದಿನಗಳಲ್ಲಿ ೧೯೯೮ ರಲ್ಲಿ ಅವರನ್ನು ಏಕ ದಿನ ತಂಡದಿಂದ ಕೈ ಬಿಡಲಾಗಿತ್ತು. ಆದರೆ ಸತತ ಅಭ್ಯಾಸ, ಪರಿಶ್ರಮ ಹಾಗೂ ದೃಢ ಸಂಕಲ್ಪದ ಫಲವಾಗಿ ೧೯೯೯ರಲ್ಲಿ ದ್ರಾವಿಡ್ ಮತ್ತೆ ತಂಡಕ್ಕೆ ಸೇರ್ಪಡೆಯಾದರು. ತದನಂತರ ವೃತ್ತಿಪರ ಏರಿಳಿತಗಳನ್ನು ಕಂಡರೂ ದ್ರಾವಿಡ್ ಕ್ಲಾಸಿಕ್ ಬ್ಯಾಟಿಂಗ್ ಶೈಲಿಗೆ ಧಕ್ಕೆ ಬಂದಿದ್ದಿಲ್ಲ. ಪರಿಣಾಮವಾಗಿ ಸರಿ ಸುಮಾರು ೧೫ ವರ್ಷಗಳಷ್ಟು ಟೆಸ್ಟ್ ಹಾಗೂ ಏಕದಿನ ಎರಡು ಸ್ವರೂಪಗಳಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿ ಮೀಡಿಯಾ ಹಾಗೂ ಕ್ರಿಕೆಟ್ ಪಂಡಿತರಿಂದ "ದಿ ವಾಲ್" ಎಂಬ ಅನ್ವರ್ಥ ನಾಮದೊಂದಿಗೆ ಕರೆಸಿಕೊಂಡ ಕೀರ್ತಿ ದ್ರಾವಿಡ್‌ಗೆ ಸಲ್ಲುತ್ತದೆ.
ಹಾಗೆ ನೋಡಿದರೆ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದು ಗಂಗೂಲಿಯೊಂದಿಗೆ, ಗಂಗೂಲಿ ತನ್ನ ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿ ೧೩೧ ರನ್‌ಗಳಿಸುವ ಮೂಲಕ ಜನ ಜನಿತರಾದರು. ಅದೇ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ರಕ್ಷಣಾತ್ಮಕವಾದ ಆಟವಾಡಿದ ದ್ರಾವಿಡ್ ಚೊಚ್ಚಲು ಪಂದ್ಯದಲ್ಲಿ ೯೫ ರನ್‌ಗಳಿಸಿ ಶತಕ ವಂಚಿತರಾಗಿ ಹೆಚ್ಚು ಸುದ್ದಿಯಾಗಲಿಲ್ಲ. ಅದೇನು ವಿಪರ್ಯಾಸವೋ ಏನೋ ದಿಲೀಪ್ ವೆಂಗ್‌ಸರ್ಕಾರ್ ಹಾಗೂ ಸಂಜಯ್ ಮಂಜ್ರೇಕರ್ ಅವರಂತೆ ದ್ರಾವಿಡ್ ಆಟದ ಶ್ರೇಷ್ಠತೆ ಅಂದಿನ ಗ್ಲಾಮರಸ್ ಕ್ರಿಕೆಟ್‌ರ್ಸಗಳ ಆರ್ಭಟದ ಮಧ್ಯೆ ಹೆಚ್ಚು ಚರ್ಚೆಯಾಗಲಿಲ್ಲ. ಅದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ದ್ರಾವಿಡ್ ತನ್ನ ಲಕ್ಷ್ಯವೆಲ್ಲವನ್ನು ಕೇಂದ್ರೀಕರಿಸಿದ್ದು ಆಟವನ್ನು ಉತ್ಕ್ರಷ್ಟಗೊಳಿಸುವತ್ತ ಮಾತ್ರ. ಸಾಮಾನ್ಯವಾಗಿ ಯಾವುದೇ ಆಟಗಾರರಿಗೆ ತಮ್ಮ ಕಂಫರ್ಟ್ ಜೋನ್‌ನಿಂದ ಹೊರ ಬಂದು ತಮ್ಮ ಪಾತ್ರ ವಹಿಸುವಂತೆ ಕೇಳಿಕೊಂಡರೆ ಅಷ್ಟಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ವಿನಮ್ರ ಭಾವದ ದ್ರಾವಿಡ ತಂಡಕ್ಕಾಗಿ ಏನನ್ನು ಮಾಡಲೂ ಸಿದ್ಧವಿರುತ್ತಿದ್ದರು, ಪರಿಣಾಮವಾಗಿ ದಾದಾ ದ್ರಾವಿಡ್ ಕೈಗೆ ಕೀಪಿಂಗ್ ಗ್ಲೋವ್ಸ್ ಅನ್ನು ಕೊಟ್ಟು Dravid is indispensable and he is the man who can wear multiple hats on need basis ಎಂಬ ಮೆಸೇಜ್ ಅನ್ನು ಸೆಲೆಕ್ಷನ್ ಕಮಿಟಿಗೆ ಕಳುಹಿಸಿದ್ದರು. ಹೀಗೆ ತಂಡ ಬಯಸಿದಾಗ ಮೊದಲ ಕ್ರಮಾಂಕದಲ್ಲೂ ಮಧ್ಯಮ ಕ್ರಮಾಂಕದಲ್ಲೂ, ನಾಯಕನಾಗಿಯೂ ಆಟವಾಡಿ ವಿಕೆಟ್ ಕೀಪಿಂಗ್‌ನಲ್ಲಿಯೂ ಸೈ ಎನಿಸಿಕೊಂಡಿದ್ದ ಪರಿಪೂರ್ಣ ಟೀಮ್ ಪ್ಲೇಯರ್ ದ್ರಾವಿಡ್.
ಒಬ್ಬ ಪರಿಪೂರ್ಣ ಟೀಮ್ ಪ್ಲೇಯರ್ ತಂಡದ ತರಬೇತುಗಾರನಾಗಬೇಕೆಂದು ಬಯಸಿ ದಾದಾ ದ್ರಾವಿಡ್‌ರನ್ನು ಟೀಮ್ ಇಂಡಿಯಾದ ತರಬೇತುದಾರನಾಗುವಂತೆ ಕೇಳಿಕೊಂಡಾಗ ದ್ರಾವಿಡ ದ್ವಂದ್ವದಲ್ಲಿದ್ದದು ನಿಜ. ಆದರೆ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ ಆವರ ನಾಯಕತ್ವದಲ್ಲಿ ತಂಡದಲ್ಲೊಂದು ಸಿನರ್ಜಿ ಕಾಣಿಸಿಕೊಂಡಿದೆ. ತಂಡ ಇತ್ತೀಚಿನ ವರ್ಲ್ಡ್ ಕಪ್‌ನ ಫೈನಲ್ ಪಂದ್ಯದಲ್ಲಿ ಸೋತಿರಬಹುದು. ಆದರೆ ವರ್ಲ್ದ್ ಕಪ್‌ನಲ್ಲಿ ಸತತವಾಗಿ ೧೦ ಪಂದ್ಯಗಳನ್ನು ಗೆದ್ದಿದ್ದರೆ ಅದಕ್ಕೆ ಕಾರಣ ರಾಹುಲ್ ಹಾಗೂ ರೋಹಿತ್. ದ್ರಾವಿಡ್ ತರಬೇತುದಾರರಾಗಿ ನಿಯೋಜನೆ ಆದಾಗ ಹಲವು ಸವಾಲುಗಳನ್ನು ತಂಡ ಎದುರಿಸಬೇಕಾಯಿತು, ತಂಡದ ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ಬುಮ್ರಾ ಹೀಗೆ ಹಲವಾರು ಆಟಗಾರರು ಏಳರಿಂದ ಎಂಟು ತಿಂಗಳ ಕಾಲ ಇಂಜುರಿಯಿಂದಾಗಿ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಯಿತು. ಆದರೆ ಅಂಡರ್ ೧೯ ತಂಡದ ತರಬೇತುದಾರನಾಗಿ ಹೊಸ ಪ್ರತಿಭೆಗಳನ್ನು ಅನ್ವೇಷಿಸಿದ್ದ ದ್ರಾವಿಡ್ ಇಲ್ಲೂ ಅದನ್ನೇ ಮಾಡಿ ಟ್ಯಾಲೆಂಟ್ ಪೂಲ್ ನಿರ್ಮಿಸಿದರು. ದ್ರಾವಿಡ್ ತನ್ನ ಆಟದಲ್ಲಿ ಆಕ್ರಮಣಕಾರಿ ಆಗಿರದೆ ಇದ್ದದ್ದು ನಿಜ. ಆದರೆ ಒಂದು ತಂಡವಾಗಿ ತಂಡದ ಪ್ರತಿಯೊಬ್ಬ ಸದಸ್ಯನು ಹೇಗೆ ಆಕ್ರಮಣಕಾರಿಯಾಗಿ ಆಟವಾಡಬೇಕೆಂದು ತೋರಿಸಿಕೊಟ್ಟಿದ್ದು ಅಲ್ಲದೆ ಮೊಟ್ಟಮೊದಲ ಬಾರಿಗೆ ತಂಡದಲ್ಲಿ ಅವರವರ ಪಾತ್ರಗಳು ಮತ್ತು ಜವಾಬ್ದಾರಿಯನ್ನು ನಿರ್ದಿಷ್ಟವಾಗಿ ತೋರಿಸಿಕೊಟ್ಟ ಹೆಗ್ಗಳಿಕೆ ದ್ರಾವಿಡ್‌ಗೆ ಸಲ್ಲಬೇಕು. ಅಂದರೆ ರೋಹಿತ್ ಶರ್ಮ ಮೊದಲ ೧೫ ಓವರ್‌ಗಳಲ್ಲಿ ಒಳ್ಳೆಯ ಆಟವಾಡಬೇಕು. ವಿರಾಟ್ ರೋಹಿತ್ ಆಟಕ್ಕೆ ಆಧಾರ ಸ್ತಂಭವಾಗಿ ನಿಲ್ಲಬೇಕು. ನಂತರ ಕೆ.ಎಲ್.ರಾಹುಲ್ ಆಧಾರ ಸ್ತಂಭವಾಗಿ ನಿಲ್ಲಬೇಕು. ಆಗ ವಿರಾಟ ಹೊಡಿ ಬಡಿ ಆಟಕ್ಕೆ ಮುನ್ನುಗ್ಗಬೇಕು. ಹೀಗೆ ಸರಿ ಸುಮಾರು ಒಂದು ವರುಷಗಳ ಕಾಲ ಒಬ್ಬೊಬ್ಬರ ಪ್ಲಸ್ ಮೈನಸ್‌ಗಳ ಮೇಲೆ ಕೆಲಸ ಮಾಡಿ ತಂಡಕ್ಕೊಂದು ಟೆಕ್ನಿಕಲ್ ಅಪ್ರೋಚ್ ಕೊಟ್ಟು ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೆ ಒಂದು ಬಗೆಯ ರೋಲ್ ಕ್ಲಾರಿಟಿಯನ್ನು ಕೊಟ್ಟಿದ್ದು ದ್ರಾವಿಡ್. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ರಾಹುಲ್ ನೇತೃತ್ವದಲ್ಲಿ ಭಾರತ ತಂಡ ಕೇವಲ ಬ್ಯಾಟಿಂಗ್ ವಿಭಾಗದಲ್ಲಷ್ಟೇ ಆಕ್ರಮಣಕಾರಿಯಾಗಿರದೇ ಬೌಲಿಂಗ್ ವಿಭಾಗಕ್ಕೂ ಅದೇ ಆಕ್ರಮಣಕಾರಿ ಪ್ರವೃತ್ತಿಯನ್ನು ತಂದು ತಂಡದಲ್ಲಿ ಸದಾ ಫೀಲ್ ಗುಡ್ ಫ್ಯಾಕ್ಟರ್ ಇರುವಂತೆ ಮಾಡಿದ ಕೀರ್ತಿ ರಾಹುಲ್‌ಗೆ ಸಲ್ಲಬೇಕು.
ಹೀಗೆ ಯಾವ ನಿಟ್ಟಿನಲ್ಲಿ ಗಮನಿಸಿದರೂ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರಿಯದೆ ಇರುವುದಕ್ಕೆ ಕಾರಣಗಳಿಲ್ಲ. ಕೇವಲ ಒಂದು ವರ್ಲ್ಡ್ ಕಪ್ ಫೈನಲ್ ಪಂದ್ಯದ ಮ್ಯಾಚ್ ನೋಡಿ ನಿರ್ಧರಿಸುವುದು ಸೂಕ್ತವೂ ಅಲ್ಲ. ಹೀಗೆ ದ್ರಾವಿಡ್ ಸಾಧನೆಗಳು ಕಣ್ಣಮುಂದೆ ರಾರಾಜಿಸುತ್ತಿದ್ದರೂ ಬಿಸಿಸಿಐ ಮಾತ್ರ ಕೋಚ್ ಆಯ್ಕೆಗೆ ಜಾಹೀರಾತುಗಳನ್ನು ಕೊಟ್ಟು ಬೇಕಿದ್ದರೆ ದ್ರಾವಿಡ್ ಕೂಡ ಕೋಚ್ ಸ್ಥಾನಕ್ಕೆ ಪುನ: ಅರ್ಜಿ ಸಲ್ಲಿಸಬಹುದೆಂಬ ಕೊಟ್ಟಿರುವ ಹೇಳಿಕೆ ಕೋಚ್ ಆಯ್ಕೆಗೆ ನಡೆಸುತ್ತಿರುವ ದ್ರಾವಿಡ ಪ್ರಾಣಾಯಾಮದಂತೆ ಭಾಸವಾಗುತ್ತಿದೆ.
ಅದೇನೇ ಇರಲಿ ಆಯ್ಕೆ ಪುನರಾಯ್ಕೆ ಬಿಸಿಸಿಐ ಹಾಗೂ ದ್ರಾವಿಡ್ ಪರಿಧಿಗೆ ಬಿಟ್ಟದ್ದು. ಆದರೆ ಕ್ರಿಕೆಟ್ ಇರುವವರೆಗೂ ಕ್ರಿಕೆಟ್ ದ್ರಾವಿಡ್ ಆಟವನ್ನು ಹಾಗೂ ನಾಯಕತ್ವವನ್ನು ಮರೆಯುವುದಿಲ್ಲ.