ನೆಹರೂ ದಾಖಲೆ ಸರಿಗಟ್ಟಿದ ಮೋದಿ
ಷಣ್ಮುಖ ಕೋಳಿವಾಡ
ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೇರುವ ಮೂಲಕ ಜವಾಹರಲಾಲ್ ನೆಹರೂ ಅವರು ಮಾಡಿದ್ದ ದಾಖಲೆಯನ್ನು ಸರಿಗಟ್ಟಿದರು.
ಸತತ ಮೂರನೇ ಸಲ ಪ್ರಧಾನಿಯಾದ ಹೆಗ್ಗಳಿಕೆ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರಿಗಿದ್ದು ಈಗ ಮೋದಿ ಅವರೂ ಈ ಗೌರವಕ್ಕೆ ಪಾತ್ರರಾದರು. ಆದರೆ ಮೋದಿ ಅವರು ಸಾರ್ವತ್ರಿಕ ಚುನಾವಣೆಗಳಲ್ಲಿ ಸತತ ಬಹುಮತ ಪಡೆದಿದ್ದರೆ ಮೋದಿ ಅವರು ಎರಡು ಸಲ ಬಿಜೆಪಿ ಬಹುಮತದೊಂದಿಗೆ ಈ ಹುದ್ದೆಗೇರಿದ್ದರೆ ಮೂರನೇ ಸಲ ಬಿಜೆಪಿ ಬಹುಮತಕ್ಕೆ ಸ್ವಲ್ಪ ಕೊರತೆ ಕಂಡಿತ್ತು. ಬಿಜೆಪಿ ಸಾರಥ್ಯದ ಎನ್ಡಿಎ ಬಹುಮತ ಪಡೆದುಕೊಂಡಿದ್ದು ಮೋದಿ ಪ್ರಧಾನಿ ಹುದ್ದೆಗೇರಿ ನೆಹರು ದಾಖಲೆ ಸರಿಗಟ್ಟಿದರು.
ಕಾಂಗ್ರೆಸ್ ೧೯೫೨ರ ಮೊದಲ ಚುನಾವಣೆಯಿಂದ ಸತತವಾಗಿ ಐದು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತ್ತು. ಮೂರನೇ ಅವಧಿಯಲ್ಲಿ ನೆಹರೂ ಸೇರಿದಂತೆ ಮೂವರು ಪ್ರಧಾನಿಗಳನ್ನು (ಇಬ್ಬರ ನಿಧನ) ಕಾಣಬೇಕಾಯಿತು. ಇಂದಿರಾಗಾಂಧಿ ಅವರು ಕಾಂಗ್ರೆಸ್ ಸಾರಥ್ಯ ವಹಿಸಿ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಪ್ರಧಾನಿಯಾದರೂ ಮೂರನೇ ಚುನಾವಣೆಯಲ್ಲಿ ಸೋಲು ಕಂಡಿದ್ದರು.
೨೦೦೪ರಲ್ಲಿ ಮನಮೋಹನ ಸಿಂಗ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸಾರಥ್ಯದ ಯುಪಿಎ ಸರ್ಕಾರ ಸತತ ಎರಡು ಅವಧಿ ಪೂರೈಸಿತ್ತು.
ಮತ್ತೆ ಸಮ್ಮಿಶ್ರ ಯುಗ: ೧೯೮೪ರಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬಹುಮತ ಪಡೆದುಕೊಂಡು ಅಧಿಕಾರಕ್ಕೇರಿದ್ದ ನಂತರ ನಂತರ ೩೦ ವರ್ಷ ಯಾವೊಂದು ಪಕ್ಷವೂ ಸರ್ಕಾರ ರಚಿಸುವಷ್ಟು ಸರಳ ಬಹುಮತವನ್ನೂ ಪಡೆಯಲಿಲ್ಲ. ೨೦೧೪ರಲ್ಲಿ ಬಿಜೆಪಿ ಬಹುಮತ ಪಡೆದು ಮತ್ತೆ ಹಳೆಯ ಬಹುಮತ ಸರ್ಕಾರದ ಅಸ್ತಿತ್ವ ಸಾಕಾರಗೊಳಿಸಿತು. ೨೦೧೯ರಲ್ಲೂ ಇದೇ ಪರಂಪರೆ ಮುಂದುವರೆಯಿತು. ಆದರೆ ಇತ್ತೀಚಿಗೆ (೨೦೨೪) ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಿಯೇ ವಿನ: ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿ ಮೈತ್ರಿಕೂಟದ ನೆರವಿನಿಂದ ಅಧಿಕಾರಕ್ಕೆ ಬಂದಿತು.
೧೯೮೯, ೧೯೯೬, ೧೯೯೮ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮೈತ್ರಿಕೂಟದ ಸರ್ಕಾರಗಳು ಹೆಚ್ಚು ದಿನ ಬಾಳದೇ ಆಂತರಿಕ ಕಚ್ಚಾಟ ಹಾಗೂ ಪಾಲುದಾರ ಪಕ್ಷಗಳಲ್ಲಿನ ಭಿನ್ನಮತದಿಂದಾಗಿ ಸಾಕಷ್ಟು ಮುಂಚಿತವಾಗಿಯೇ ಪತನಗೊಂಡು ಮಧ್ಯಂತರ ಚುನಾವಣೆಯ ವಾತಾವರಣ ಸೃಷ್ಟಿಸಿದ್ದವು.
೧೯೯೧, ೨೦೦೪ ಮತ್ತು ೨೦೦೯ರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಅಸಿತ್ವಕ್ಕೆ ಬಂದಿದ್ದ ಮೈತ್ರಿಕೂಟ ಸರ್ಕಾರಗಳು ಅವಧಿ ಪೂರ್ಣಗೊಳಿಸಿದ್ದು ದಾಖಲೆಯೇ ಸರಿ. ಇದು ಪಿ.ವಿ. ನರಸಿಂಹರಾವ್, ಮನಮೋಹನ ಸಿಂಗ್ ಅವರ ಗುಣಗ್ರಾಹಿ ಆಡಳಿತಕ್ಕೆ ಸಾಕ್ಷಿ ಎನ್ನಬಹುದು. ಅದೇ ರೀತಿ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಪೂರ್ಣಾವಧಿ ಘೋಷಿಸಿದ್ದು ವಾಜಪೇಯಿ ಅವರ ಜಾಣತನದಿಂದ ಎನ್ನದೆ ವಿಧಿ ಇಲ್ಲ. ಇನ್ನುಮುಂದೆ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕಾಲಾವಧಿ ಅವರ ಮುತ್ಸದ್ದಿ ಮೇಲೆ ಅವಲಂಬಿಸಿದೆ.