For the best experience, open
https://m.samyuktakarnataka.in
on your mobile browser.

ಮತದಾನದಲ್ಲಿ ಕುರುಡು ಕಾಂಚಾಣದ ಸದ್ದು

02:00 AM May 13, 2024 IST | Samyukta Karnataka
ಮತದಾನದಲ್ಲಿ ಕುರುಡು ಕಾಂಚಾಣದ ಸದ್ದು

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದು ಅಭ್ಯರ್ಥಿಗಳ ಫಲಿತಾಂಶ ಮತಯಂತ್ರಗಳಲ್ಲಿ ಭದ್ರವಾಗಿ ಸೇರಿಕೊಂಡಿದೆ. ಕಳೆದ ಒಂದೆರಡು ತಿಂಗಳ ಕಾಲ ಬೇಸಿಗೆಯ ಗರಿಷ್ಠ ತಾಪಮಾನವನ್ನೂ ಲೆಕ್ಕಿಸದೆ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರಗಳಲ್ಲಿ ಸಂಚರಿಸಿ ಮತಭಿಕ್ಷೆ ಕೇಳಿದ್ದಾರೆ. ಯರ‍್ಯಾರ ಜೋಳಿಗೆ ಎಷ್ಟೆಷ್ಟು ತುಂಬಿದೆ, ಮತದಾರರು ಯಾರಿಗೆ ಎಷ್ಟು ಭಿಕ್ಷೆ ಹಾಕಿದ್ದಾರೆ ಎಂಬುದನ್ನು ತಿಳಿಯಲು ಜೂನ್ ೪ರವರೆಗೆ ಕಾಯಬೇಕಿದೆ. ಚುನಾವಣೆ ಆಯೋಗ ಮತದಾನ ಜಾಗೃತಿ ಮೂಡಿಸುವ ಮೂಲಕ ಈ ಬಾರಿ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತದಾನ ಆಗಿರುವುದು ಒಳ್ಳೆಯ ಬೆಳವಣಿಗೆ. ಆದಾಗ್ಯೂ ಅನೇಕ ವಿದ್ಯಾವಂತ ಮತದಾರರು ಮತದಾನದಿಂದ ದೂರ ಉಳಿದು ಪ್ರಜಾಪ್ರಭುತ್ವದ ಹಕ್ಕು ಚಲಾಯಿಸುವಲ್ಲಿ ವಿಫಲರಾದದ್ದು, ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆಯಾಗದಿರುವುದು ವಿಷಾದದ ಸಂಗತಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹರಿದಾಡಿದಷ್ಟು ಕುರುಡು ಕಾಂಚಾಣ’ ಹಿಂದಿನ ಬರ‍್ಯಾವ ಚುನಾವಣೆಗಳಲ್ಲೂ ಹರಿದಾಡಿಲ್ಲ ಎಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರೇ ಒಪ್ಪಿಕೊಳ್ಳುತ್ತಾರೆ. ಅಭ್ಯರ್ಥಿಗಳ ವೆಚ್ಚ ಲೆಕ್ಕಕ್ಕೆ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಒಟ್ಟಾರೆಯಾಗಿ ತಲಾ ೯೫ ಲಕ್ಷ ರೂ. ಖರ್ಚು ಮಾಡಬೇಕು ಎಂದು ಚುನಾವಣೆ ಆಯೋಗ ನಿಗದಿ ಮಾಡಿದೆ. ಆದರೆ ಈ ಮೊತ್ತಲೆಕ್ಕಕ್ಕುಂಟು ಆಟಕ್ಕಲ್ಲ’ ಎಂಬುದು ವಾಸ್ತವಿಕ ಸತ್ಯ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆಯೋಗ ನಿಗದಿ ಮಾಡಿದಷ್ಟು ಮಾತ್ರ ವೆಚ್ಚ ಮಾಡಿದಲ್ಲಿ, ಮತದಾರರು ಭ್ರಷ್ಟರಾಗಲು ಸಾಧ್ಯವಿಲ್ಲ. ರಾಜಕಾರಣಿಗಳು ಇಷ್ಟೊಂದು ಮತಗಳನ್ನೂ ಪಡೆಯಲು ಸಾಧ್ಯವಿಲ್ಲ ಎಂಬುದೂ ಸತ್ಯ. ಕರಪತ್ರ, ಮಾದರಿ ಬ್ಯಾಲೆಟ್ ಪತ್ರ ಮುದ್ರಣ, ವಾಹನಗಳ ವೆಚ್ಚ, ಪ್ರಚಾರದ ಖರ್ಚು, ಸಾರ್ವಜನಿಕ ಸಭೆಗಳಲ್ಲಿ ಮಾಡಿದ ವೆಚ್ಚ, ಜಾಹೀರಾತು ವೆಚ್ಚ, ಕಾರ್ಯಕರ್ತರ ಊಟೋಪಚಾರ ಮತ್ತಿತರ ಖರ್ಚುಗಳನ್ನು ಪರಿಗಣಿಸಿ ಚುನಾವಣೆ ಆಯೋಗ ವೆಚ್ಚ ನಿಗದಿ ಮಾಡಿದೆಯಷ್ಟೆ. ಇಷ್ಟೇ ವೆಚ್ಚ ಮಾಡಿ ಚುನಾವಣೆ ಪ್ರಕ್ರಿಯೆ ಮುಗಿದರೆ ಸಾವಿರಾರು ಕೋಟಿ ರೂಪಾಯಿ ಕಪ್ಪುಹಣ ಚಲಾವಣೆಯಾಗುವುದನ್ನು ತಪ್ಪಿಸಬಹುದು. ಮತದಾರರು ಭ್ರಷ್ಟರಾಗುವುದನ್ನು ತಪ್ಪಿಸಬಹುದು.
ವರಕವಿ ದ.ರಾ.ಬೇಂದ್ರೆ ಅವರು ಬರೆದ ಗೀತೆಯಂತೆ ಚುನಾವಣೆಯ ಮುನ್ನಾ ದಿನ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕುರುಡು ಕಾಂಚಾಣ’ ಕುಣಿದಿದ್ದು ಜನಜನಿತ. ಹಿಂದೆಂದೂ ಈ ರೀತಿಯಲ್ಲಿ ಹಣ ಹರಿದಾಡಿದ್ದನ್ನ ನಾವು ನೋಡಿದ್ದಿಲ್ಲ ಎಂದು ಜನರೇ ಒಪ್ಪಿಕೊಳ್ಳುತ್ತಾರೆ.ನಮ್ಮ ಕಡೆ ಇಂತಿಷ್ಟು ಹಂಚಿಕೆ ಮಾಡಿದ್ದಾರೆ, ನಿಮ್ಮಲ್ಲಿ ಎಷ್ಟು ಕೊಟ್ಟಿದ್ದಾರೆ ಎಂಬ ಚರ್ಚೆಗಳು..,’ ಇಂಥ ಪಕ್ಷದವರು ಈ ಬಾರಿ ಕಡಿಮೆ ಕೊಟ್ಟಿದ್ದಾರೆ, ಆ ಪಕ್ಷದವರು ಈ ಚುನಾವಣೆಯಲ್ಲಿ ಹಿಂದೆಂದೂ ನೀಡದಷ್ಟು ಹಣ ನೀಡಿದ್ದಾರಂತೆ..,’ ಒಂದು ಓಟಿಗೆ ಇಂತಿಷ್ಟು ಎಂದು ಲೆಕ್ಕ ಹಾಕಿ ಮನೆಮನೆಗೆ ಹಂಚಿಕೆ ಮಾಡಲಾಗಿದೆಯಂತೆ.., ಬರೋಬ್ಬರಿ ೧೨೦ ಕೋಟಿ ಖರ್ಚಾಗಿದೆಯಂತೆ..’ ಎಂಬ ಜನರ ಅಂಬೋಣಗಳನ್ನು ಲೆಕ್ಕ ಹಾಕಿದರೆ ಎಲ್ಲ ಅಭ್ಯರ್ಥಿಗಳಿಂದ ಒಟ್ಟಾರೆ ಒಂದೊಂದು ಕ್ಷೇತ್ರದಲ್ಲಿ ೨೫೦-೩೦೦ ಕೋಟಿ ರೂ. ವೆಚ್ಚವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ರೀತಿ ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರಗಳಲ್ಲಿ ಸಾವಿರಾರು ಕೋಟಿ ರೂ. ಹಣ ಹರಿದಾಡಿದೆ, ಇದಕ್ಕೆಲ್ಲ ಕಡಿವಾಣ ಬೀಳುವುದು ಯಾವಾಗ ಎಂದು ಪ್ರಜ್ಞಾವಂತ ಮತದಾರರು ಪ್ರಶ್ನಿಸುತ್ತಾರೆ. ಮತದಾನದ ಮುನ್ನಾ ದಿನ ಈ ಹಂಚಿಕೆ ವಿಷಯ ಬಹುತೇಕ ಹಳ್ಳಿ-ಪಟ್ಟಣಗಳಲ್ಲಿ ಚರ್ಚೆಯಾಗುತ್ತದೆ. ಎಲ್ಲಿ, ಯಾರು, ಎಷ್ಟೊಂದು ಹಂಚಿಕೆ ಮಾಡಲಾಗಿದೆ ಎಂಬುದು ಎಲ್ಲ ರಾಜಕೀಯ ನಾಯಕರು, ಸರ್ಕಾರ, ಅಧಿಕಾರಿಗಳಿಗೆ ತಿಳಿಯದ ವಿಷಯವಲ್ಲ. ಆದರೆ ಈ ಹಂಚಿಕೆಗೆ ಯಾವುದೇ ದಾಖಲೆ ಇರುವುದಿಲ್ಲ. ಇದೆಲ್ಲ ಲೆಕ್ಕಕ್ಕೆ ಸಿಗದ ಹಣವಾಗಿದ್ದು, ದಲಾಲಿ ಅಂಗಡಿಗಳಲ್ಲಿ ರೈತರಿಗೆಕೈಚೀಟಿ’ ನೀಡುವಂತೆ ಕಾರ್ಯಕರ್ತರು ಹಣ ಹಂಚಿದ ದಾಖಲೆಗಳನ್ನು ತಮ್ಮ ನಾಯಕರಿಗೆ ಒಪ್ಪಿಸಲು ಇಟ್ಟುಕೊಂಡಿರುತ್ತಾರಷ್ಟೆ ಇದೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಚರ್ಚೆಗಳೂ ನಡೆಯುತ್ತಿವೆ. ಬೆಟ್ಟಿಂಗ್‌ನಲ್ಲೂ ಕಾಂಚಾಣದ ಸದ್ದು ಈ ಹಣ ಹಂಚಿಕೆಯ ಆಧಾರದ ಮೇಲೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಕೂಡ ಆರಂಭವಾಗಿದೆ. ಈ ಬಾರಿ ನಾವು ಇಷ್ಟೊಂದು ಹಣ ಖರ್ಚು ಮಾಡಿದ್ದೇವೆ, ನಮ್ಮ ಪಕ್ಷವೇ ಗೆಲ್ಲುತ್ತದೆ ಎಂದು ಒಂದು ಪಕ್ಷದವರು ಹೇಳಿದರೆ, ನಿಮ್ಮ ಹಣ ಪಡೆದ ಜನ ನಮಗೆ ಓಟು ಹಾಕಿದ್ದಾರೆ, ನಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಇನ್ನೊಂದು ಪಕ್ಷದವರ ವಿಶ್ವಾಸದ ಮಾತು. ಒಬ್ಬೊಬ್ಬ ಅಭ್ಯರ್ಥಿ ಮೇಲೂ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ ಎನ್ನಲಾಗಿದ್ದು, ಬೆಟ್ಟಿಂಗ್‌ನಲ್ಲೂಕುರುಡು ಕಾಂಚಾಣ’ ಸದ್ದು ಮಾಡುತ್ತಿದೆ.
ಪರಿಷತ್ ಚುನಾವಣೆಗಿಲ್ಲ ವೆಚ್ಚದ ಮಿತಿ
ವಿಧಾನಸಭೆ, ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣೆ ವೆಚ್ಚದ ಮಿತಿ ಹೇರಲಾಗಿದೆ. ಆದರೆ ವಿವಿಧ ಕ್ಷೇತ್ರಗಳ ಮೂಲಕ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇರುವುದಿಲ್ಲ. ಪದವೀಧರರ ಕ್ಷೇತ್ರ, ಶಿಕ್ಷಕರ ಕ್ಷೇತ್ರ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಎಷ್ಟೇ ಹಣ ಖರ್ಚು ಮಾಡಿದರೂ ಚುನಾವಣೆ ಆಯೋಗ ಕೇಳುವುದಿಲ್ಲ. ಬಹುಶಃ ಈ ಚುನಾವಣೆಯಲ್ಲಿ ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರು ಇರುವುದರಿಂದ, ಹಣದ ಹಂಚಿಕೆ ನಡೆಯುವುದಿಲ್ಲ, ಹೀಗಾಗಿ ವೆಚ್ಚದ ಮಿತಿ ಅಗತ್ಯ ಇಲ್ಲ ಎಂಬುದು ಸರ್ಕಾರದ ಅಭಿಪ್ರಾಯ ಇರಬಹುದು. ಆದರೆ ಅತಿ ಹೆಚ್ಚು ಹಣದ ಚಲಾವಣೆ ಆಗುವುದು ಇದೇ ಚುನಾವಣೆಯಲ್ಲಿ ಎಂಬುದು ಇತ್ತೀಚೆಗೆ ಜಗಜ್ಜಾಹೀರಾಗಿದೆ. ಈ ಕಾರಣದಿಂದಲೇ ವಿವಿಧ ರಾಜಕೀಯ ಪಕ್ಷಗಳಲ್ಲಿನ ಸಜ್ಜನ ರಾಜಕಾರಣಿಗಳು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.
ಈ ಹಿಂದೆ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಕೆಲವೇ ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರು. ಈ ಖರ್ಚನ್ನು ಕೂಡ ಆಯಾ ಪಕ್ಷಗಳೇ ಒದಗಿಸುತ್ತಿದ್ದವು. ವಿವಿಧ ಜಿಲ್ಲೆಗಳಲ್ಲಿ ವಿಧಾನ ಪರಿಷತ್ ಮತಕ್ಷೇತ್ರ ಹಂಚಿಕೆ ಆಗಿರುವುದರಿಂದ ಕ್ಷೇತ್ರದೆಲ್ಲೆಡೆ ಓಡಾಡಿ ಪ್ರಚಾರ ಮಾಡುವುದೇ ಸಾಹಸದ ಕೆಲಸವಾಗಿದೆ. ಅಂದಿನ ದಿನಗಳಲ್ಲಿ ಮತದಾರರನ್ನು ಒಂದು ಬಾರಿ ಭೇಟಿ ಮಾಡಿ ಬಂದರೆ ಸಾಕು ಶಿಕ್ಷಕರು, ವಿವಿಧ ಪದವೀಧರರು ಸ್ವಯಂಪ್ರೇರಿತರಾಗಿ ಬಂದು ಮತ ಚಲಾಯಿಸುತ್ತಿದ್ದರು. ಆದರೆ ಇಂದು ಬರೀ ಭೇಟಿ ಮಾಡುವುದರಿಂದ ಮತಗಳು ಬರುವುದಿಲ್ಲ. ಲಕ್ಷ ಅಲ್ಲ, ಹಲವು ಕೋಟಿ ರೂಪಾಯಿಗಳೇ ಬೇಕು, ಅಲ್ಲದೆ ಈ ಚುನಾವಣೆಯಲ್ಲಿ ವೆಚ್ಚದ ಮಿತಿ ಇಲ್ಲದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು ಸ್ಪರ್ಧಿಸುತ್ತಿದ್ದಾರೆ. ಅಂಥವರು ಕೋಟಿಗಟ್ಟಲೇ ಹಣ ಖರ್ಚು ಮಾಡಲು ಸಿದ್ಧರಿರುತ್ತಾರೆ. ಗೆಲ್ಲಲೇಬೇಕೆಂಬ ಧಾವಂತದಲ್ಲಿ ಸುಶಿಕ್ಷಿತ ಮತದಾರರನ್ನೂ ಇಂಥವರು ಭ್ರಷ್ಟರನ್ನಾಗಿಸಿದ್ದಾರೆ. ಇದು ದುರಾದೃಷ್ಟಕರ ಸಂಗತಿ. ವಿಧಾನ ಪರಿಷತ್ ಚುನಾವಣೆ ಇರಲಿ, ಸಾರ್ವತ್ರಿಕ ಚುನಾವಣೆಗಳಾಗಿರಲಿ, ಪ್ರಜಾಪ್ರಭುತ್ವದಲ್ಲಿಮತದಾನ’ಕ್ಕಿರುವ ಪಾವಿತ್ರ್ಯತೆ ಉಳಿಸಿಕೊಳ್ಳಬೇಕಾದರೆ ಯಾವ ಚುನಾವಣೆಯಲ್ಲೂ ಹಣದ ಹಂಚಿಕೆಯಾಗಲಿ, ಆಮಿಷಗಳನ್ನಾಗಲಿ ಒಡ್ಡಬಾರದು. ಹಾಗಿದ್ದಲ್ಲಿ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಎಲ್ಲರಿಗೂ ಸಮಾನ ರಾಜಕೀಯ ಅವಕಾಶಗಳು ದೊರೆಯಬೇಕಾದರೆ, ಚುನಾವಣೆಯಲ್ಲಿ ಹಣದ ತಾಂಡವನೃತ್ಯ’ ನಿಲ್ಲಬೇಕು.ಹಣ ಮತ್ತು ತೋಳ್ಬಲ’ ಇದ್ದವರಿಗೆ ಬಿ ಫಾರಂ ನೀಡುವ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಚರ್ಚೆಯಾಗದ ಸಮಸ್ಯೆಗಳು
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಆರೋಗ್ಯಕರ ಚರ್ಚೆಗಳನ್ನು ಮಾಡಲೇ ಇಲ್ಲ. ಕೇವಲ ವೈಯಕ್ತಿಕ ಆರೋಪ-ಪ್ರತ್ಯಾರೋಪ, ಭಾವನಾತ್ಮಕ ವಿಷಯಗಳ ಮೂಲಕ ಮತಯಾಚನೆ ಮಾಡಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಕಸ್ತೂರಿ ರಂಗನ್ ವರದಿ, ಡೀಮ್ಡ್ ಅರಣ್ಯ, ಸೆಕ್ಷನ್ ೪(೧) ಇನಾಂ ಭೂಮಿ, ಸೊಪ್ಪಿನ ಬೆಟ್ಟ, ಅರಣ್ಯ, ಕಂದಾಯ ಭೂಮಿ, ಹೆಲಿ ಟೂರಿಸಂ ಮತ್ತಿತರ ಸಮಸ್ಯೆಗಳ ಚರ್ಚೆಯಾಗಲೇ ಇಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಮುಖವಾಗಿ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆ ಪುನಶ್ಚೇತನ, ಸಹ್ಯಾದ್ರಿ ಬೆಟ್ಟ ಶ್ರೇಣಿಗಳ ರಕ್ಷಣೆ, ಅರಣ್ಯ ಒತ್ತುವರಿ ತೆರವು, ಶರಾವತಿ ನಿರಾಶ್ರಿತರ ಸಮಸ್ಯೆಗಳು ಚರ್ಚೆಯಾಗಬೇಕಿತ್ತು. ಅದರಂತೆ ಚಿತ್ರದುರ್ಗ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆ, ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಕುರಿತು ಗಂಭೀರ ಚರ್ಚೆಯಾಗಬೇಕಿತ್ತಾದರೂ ಆಗಲೇ ಇಲ್ಲ. ಇನ್ನು ದಾವಣಗೆರೆ ಕ್ಷೇತ್ರದಲ್ಲಂತೂ ಬರಿ ವೈಯಕ್ತಿಕ ಟೀಕೆ-ಟಿಪ್ಪಣಿಗಳನ್ನು ಹೊರತುಪಡಿಸಿ ಅಭಿವೃದ್ಧಿ ಕುರಿತಾಗಿ ಯಾವುದೇ ಚರ್ಚೆ ಮಾಡದಿರುವುದು ಎರಡೂ ರಾಜಕೀಯ ಪಕ್ಷಗಳು ತಮ್ಮತಮ್ಮ ಆಡಳಿತಾವಧಿಯಲ್ಲಿನ ತಪ್ಪುಗಳನ್ನು ಮರೆಮಾಚಿದ್ದನ್ನು ಎತ್ತಿ ತೋರಿಸುತ್ತಿದೆ. ಆದರೆ ಪಕ್ಷೇತರ ಅಭ್ಯರ್ಥಿ ಮಾತ್ರ ಅಭಿವೃದ್ಧಿ ರಾಜಕಾರಣ ಬಗ್ಗೆ ಮತ್ತು ವಂಶಾಡಳಿತದ ವಿರುದ್ದ ಧ್ವನಿ ಎತ್ತಿ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಆಗಬೇಕೆಂಬುದಕ್ಕೆ ನಾಂದಿ ಹಾಡಿದ್ದು ಉತ್ತಮ ಬೆಳೆವಣಿಗೆಯಾಯಿತು.
ಚುನಾವಣೆ ವ್ಯವಸ್ಥೆಯ ಸುಧಾರಣೆ ಅಗತ್ಯ
ಭ್ರಷ್ಟಾಚಾರ ರಹಿತ ಚುನಾವಣೆ ನಡೆಸಬೇಕಾದರೆ, ಮತದಾನದ ಪಾವಿತ್ರö್ಯತೆ’ ಕಾಪಾಡಿಕೊಳ್ಳಬೇಕು. ಈಗಾಗಲೇ ಅಪವಿತ್ರವಾಗಿರುವ ಮತದಾನದ ಪದ್ಧತಿಯನ್ನು ಸುಧಾರಿಸಬೇಕಿದೆ. ಇದಕ್ಕಾಗಿ ಚುನಾವಣೆ ಆಯೋಗ ಮೊದಲ ಆದ್ಯತೆಯಾಗಿ ಚುನಾವಣೆ ಪದ್ಧತಿಯಲ್ಲಿ ಸುಧಾರಣೆ ತರಬೇಕಿದೆ. ರಾಜಕೀಯ ಪಕ್ಷಗಳು ಕೂಡ ಚುನಾವಣೆ ಸುಧಾರಣೆಗೆ ಆದ್ಯತೆ ನೀಡಬೇಕಿದೆ. ಹಾಗಂತ ಸುಧಾರಣೆ ಆಗಿಲ್ಲ ಎಂದಲ್ಲ. ಬ್ಯಾಲೆಟ್ ಪೇಪರ್ ಹೋಗಿ ಈಗ ವಿದ್ಯುನ್ಮಾನ ಯಂತ್ರಗಳಿಂದ ಮತದಾನ ಮಾಡಲಾಗುತ್ತಿದೆ. ಮತ ಎಣಿಕೆ ಆರಂಭವಾದ ೪-೫ ಗಂಟೆಗಳಲ್ಲೇ ಫಲಿತಾಂಶವೂ ಸಿಗುತ್ತಿದೆ. ಮತದಾರರ ಜಾಗೃತಿಯಿಂದಾಗಿ ಮತದಾನದ ಪ್ರಮಾಣದಲ್ಲಿಯೂ ಸುಧಾರಣೆ ಕಂಡಿದೆ. ಆದರೆ ಮತದಾರರು ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ, ಹಣ-ಹೆಂಡ ತೆಗೆದುಕೊಳ್ಳದೆ ಮತ ಚಲಾಯಿಸಬೇಕಾದರೆಕಡ್ಡಾಯ ಮತದಾನ’ದಿಂದ ಮಾತ್ರ ಸಾಧ್ಯ. ಆದ್ದರಿಂದ ಮುಂದಿನ ದಿನಗಳಲ್ಲಿ ಕಡ್ಡಾಯ ಮತದಾನ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಮತ್ತು ಚುನಾವಣಾ ಆಯೋಗ ಮುನ್ನಡಿ ಇಡಬೇಕು, ಪ್ರಜಾಪ್ರಭುತ್ವ ಮತ್ತು ಮತದಾನದ ಪಾವಿತ್ರ್ಯತೆ ಕಾಪಾಡಬೇಕು.