ರಾಜಕೀಯ ಅಸ್ಥಿರತೆ ತಂದ ಇರಾನ್ ಅಧ್ಯಕ್ಷರ ಸಾವು
ಮೇ ೧೯ರಂದು ಇರಾನ್ ಅಧ್ಯಕ್ಷರಾದ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಬಳಿಕ, ಇರಾನ್ ಜೂನ್ ೨೮ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಉದ್ದೇಶಿಸಿದೆ. ಇರಾನಿನ ಸರ್ವೋಚ್ಚ ನಾಯಕರಾದ, ಮಧ್ಯ ಪೂರ್ವದಲ್ಲಿ ಅತ್ಯಂತ ಪ್ರಭಾವಿ ಸ್ಥಾನ ಹೊಂದಿರುವ, ೮೪ ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರ ಬಳಿಕ, ರೈಸಿ ಇರಾನಿನ ಮುಂದಿನ ಸರ್ವೋಚ್ಚ ನಾಯಕರಾಗುವ ಸಾಧ್ಯತೆಗಳಿದ್ದವು.
ಅಧ್ಯಕ್ಷರ ಅಧಿಕಾರಗಳೇನು
ಸರ್ವೋಚ್ಚ ನಾಯಕನನ್ನು (ಸುಪ್ರೀಂ ಲೀಡರ್) ಶಿಯಾ ಇಸ್ಲಾಮಿಕ್ ಪರಿಭಾಷೆಯಲ್ಲಿ 'ವೆಲಾಯತ್ ಇ ಫಾಕಿಹ್' ಎಂದು ಕರೆಯಲಾಗಿದ್ದು, ಅವರದು ಇರಾನಿನ ಅತ್ಯುನ್ನತ ಸ್ಥಾನವಾಗಿದೆ. ದೇಶಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ನಿರ್ಧಾರಗಳನ್ನು ಸರ್ವೋಚ್ಚ ನಾಯಕ ಕೈಗೊಳ್ಳುತ್ತಾರೆ. ಈ ಸ್ಥಾನವನ್ನು ೧೯೭೯ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಸ್ಥಾಪಿಸಲಾಗಿದ್ದು, ದೇಶದ ಮುಖ್ಯಸ್ಥರು ಮತ್ತು ಸೇನಾಪಡೆಗಳ ಮುಖ್ಯಸ್ಥರಾಗಿ ಸರ್ವೋಚ್ಚ ನಾಯಕ ಕಾರ್ಯಾಚರಿಸುತ್ತಾರೆ. ಅದರೊಡನೆ, ಸರ್ವೋಚ್ಚ ನಾಯಕರಿಗೆ ದೇಶದ ಪೊಲೀಸ್ ಮತ್ತು ನೈತಿಕ ಪೊಲೀಸರ ಮೇಲೂ ನಿಯಂತ್ರಣವಿರುತ್ತದೆ.
ಅಯತೊಲ್ಲಾ ಖಮೇನಿ ಇರಾನಿನ ಆಂತರಿಕ ಭದ್ರತೆಯ ಜವಾಬ್ದಾರಿ ಹೊಂದಿರುವ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಮತ್ತು ಯಾವುದೇ ಪ್ರತಿಭಟನೆಯನ್ನು ತಡೆಯುವ ಐಆರ್ಜಿಸಿಯ ಸ್ವಯಂಸೇವಕ ವಿಭಾಗವಾದ ಬಾಸಿಜ್ ರೆಸಿಸ್ಟೆನ್ಸ್ ಫೋರ್ಸ್ ಮೇಲೆ ಅಧಿಕಾರ ಹೊಂದಿದ್ದಾರೆ.
ಕೇವಲ ಪುರುಷರಿಗೆ ಮಾತ್ರವೇ ಇರಾನಿನ ಸರ್ವೋಚ್ಚ ನಾಯಕನಾಗಲು ಅನುಮತಿಯಿದೆ. ದೇಶದ ಇಸ್ಲಾಮಿಕ್ ಕಾನೂನಿನ ಪ್ರಕಾರ, ಈ ಸ್ಥಾನ ಅತ್ಯುನ್ನತ ಶಿಯಾ ಇಸ್ಲಾಮಿಕ್ ಶಾಸ್ತ್ರಜ್ಞರಿಗೆ ಮೀಸಲಾಗಿದೆ. ಸರ್ವೋಚ್ಚ ನಾಯಕನನ್ನು ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರ ತಂಡ ಆರಿಸುತ್ತದೆ. ಈ ಸಮಿತಿಯನ್ನು ಸಾರ್ವಜನಿಕರು ಆರಿಸುತ್ತಾರಾದರೂ, ಅಭ್ಯರ್ಥಿಗಳನ್ನು ಮೊದಲಿಗೆ ಗಾರ್ಡಿಯನ್ ಕೌನ್ಸಿಲ್ ಅನುಮೋದಿಸಬೇಕು. ಗಾರ್ಡಿಯನ್ ಸಮಿತಿಯ ಸದಸ್ಯರಲ್ಲಿ ಅರ್ಧ ಸದಸ್ಯರನ್ನು ಸರ್ವೋಚ್ಚ ನಾಯಕ ಆರಿಸಿದರೆ, ಇನ್ನರ್ಧ ಸದಸ್ಯರನ್ನು ಸಂಸತ್ತು ಆರಿಸುತ್ತದೆ.
ಇರಾನಿನ ಅಧ್ಯಕ್ಷ ದೇಶದ ಕಾರ್ಯಾಂಗವನ್ನು ಮುನ್ನಡೆಸುತ್ತಾರೆ. ಅಧ್ಯಕ್ಷರನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ. ಆದರೆ, ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯನ್ನು ಗಾರ್ಡಿಯನ್ ಕೌನ್ಸಿಲ್ ಅನುಮತಿಸಬೇಕಾಗುತ್ತದೆ. ಅಧ್ಯಕ್ಷರು ಸರ್ಕಾರವನ್ನು ನಿರ್ವಹಿಸುತ್ತಾರೆ. ಅವರ ರಾಜಕೀಯ ಅನುಭವ, ಅಧಿಕಾರದ ಅನುಗುಣವಾಗಿ, ರಾಷ್ಟ್ರೀಯ ನೀತಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ ಬೀರಬಹುದು.
ಅಧ್ಯಕ್ಷರ ಸಚಿವ ಸಂಪುಟ ಇರಾನಿನ ಪೊಲೀಸ್ ಪಡೆಯನ್ನು ನಿರ್ವಹಿಸುತ್ತದೆ. ಆದರೆ ಪೊಲೀಸ್ ಕಮಾಂಡರ್ ಸರ್ವೋಚ್ಚ ನಾಯಕನಿಂದ ನೇಮಿಸಲ್ಪಡುತ್ತಾರೆ ಮತ್ತು ನೇರವಾಗಿ ಸರ್ವೋಚ್ಚ ನಾಯಕನಿಗೆ ವರದಿ ಮಾಡುತ್ತಾರೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಬಾಸಿಜ್ ಕಮಾಂಡರ್ಗಳನ್ನೂ ಸರ್ವೋಚ್ಚ ನಾಯಕರು ನೇಮಿಸುತ್ತಾರೆ. ಇಬ್ಬರು ಕಮಾಂಡರ್ಗಳು ನೇರವಾಗಿ ಸರ್ವೋಚ್ಚ ನಾಯಕರಿಗೆ ವರದಿ ಮಾಡುತ್ತಾರೆ.
ನೈತಿಕ ಪೊಲೀಸ್ ಎಂದರೇನು?
ಗೈಡೆನ್ಸ್ ಪ್ಯಾಟ್ರೋಲ್ಸ್ ಎಂದೂ ಕರೆಯಲಾಗುವ ನೈತಿಕ ಪೊಲೀಸ್ ಇರಾನಿನ ರಾಷ್ಟ್ರೀಯ ಪೊಲೀಸ್ ಇಲಾಖೆಯ ಭಾಗವಾಗಿದೆ. ಈ ವಿಭಾಗವನ್ನು ೧೯೭೯ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಪರಿಚಯಿಸಲಾದ ಇಸ್ಲಾಮಿಕ್ ನೈತಿಕತೆ ಮತ್ತು ವಸ್ತ್ರ ಸಂಹಿತೆಯನ್ನು ಜಾರಿಗೆ ತರುವ ಉದ್ದೇಶದಿಂದ ೨೦೦೫ರಲ್ಲಿ ಸ್ಥಾಪಿಸಲಾಯಿತು.
ಈ ವಿಭಾಗದಲ್ಲಿ ಅಂದಾಜು ೭,೦೦೦ ಪುರುಷ ಮತ್ತು ಮಹಿಳಾ ಅಧಿಕಾರಿಗಳಿದ್ದು, ಅವರು ನೈತಿಕತೆಯ ಉಲ್ಲಂಘನೆ ನಡೆಸುವ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ, ದಂಡ ವಿಧಿಸುವ ಅಥವಾ ಬಂಧಿಸುವ ಕಾರ್ಯ ನಡೆಸುತ್ತಾರೆ.
೨೦೨೨ರ ಬೇಸಿಗೆಯ ಪ್ರತಿಭಟನೆಗಳಿಗೆ ಮುನ್ನ, ಅಧ್ಯಕ್ಷ ರೈಸಿ ಹಿಜಾಬ್ ಮತ್ತು ನೈತಿಕತೆಯ ಕಾನೂನನ್ನು (ವಿವಾಹೇತರ ಸಂಬಂಧಗಳಿಂದ ದೂರವಿರುವ ಕಾನೂನು) ಕಠಿಣವಾಗಿ ಜಾರಿಗೆ ತರಲು ಆದೇಶಿಸಿದರು. ಇದರನ್ವಯ ಮಹಿಳೆಯರು ಸಭ್ಯ ವಸ್ತç ಧರಿಸಿ, ನೈತಿಕವಾಗಿ ನಡೆದುಕೊಳ್ಳಬೇಕಾಗಿತ್ತು. ಹಿಜಾಬ್ ಧರಿಸದ ಮಹಿಳೆಯರನ್ನು ಗುರುತಿಸಲು ದೇಶಾದ್ಯಂತ ಕ್ಯಾಮರಾಗಳನ್ನು ಅಳವಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಿಜಾಬ್ ನೀತಿಯನ್ನು ವಿರೋಧಿಸುವ ಮಹಿಳೆಯರಿಗೆ ಕಡ್ಡಾಯ ಜೈಲು ಶಿಕ್ಷೆ ವಿಧಿಸಲಾಯಿತು.
ರೆವಲ್ಯೂಷನರಿ ಗಾರ್ಡ್ಸ್ ಎಂದರೆ ಯಾರು?
ಐಆರ್ಜಿಸಿ ಎನ್ನುವುದು ಇರಾನಿನ ಆಂತರಿಕ ಭದ್ರತೆಯ ಪ್ರಮುಖ ಸಂಸ್ಥೆಯಾಗಿದ್ದು, ೧,೫೦,೦೦೦ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ, ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ಶಕ್ತಿಯಾಗಿದೆ.
ಐಆರ್ಜಿಸಿ ತನ್ನದೇ ಆದ ಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಹೊಂದಿದ್ದು, ಇರಾನಿನ ಪ್ರಮುಖ ಆಯುಧಗಳನ್ನು ನಿರ್ವಹಿಸುತ್ತದೆ.
ಐಆರ್ಜಿಸಿ ತನ್ನದೇ ವಿದೇಶಿ ಪಡೆಯನ್ನೂ ಹೊಂದಿದ್ದು, ಅದನ್ನು ಕುದ್ಸ್ ಫೋರ್ಸ್ ಎನ್ನಲಾಗಿದೆ. ಇದು ಮಧ್ಯಪೂರ್ವದ ತನ್ನ ಸಹಯೋಗಿಗಳಿಗೆ ರಹಸ್ಯವಾಗಿ ಹಣ, ಆಯುಧ, ತಂತ್ರಜ್ಞಾನ ಮತ್ತು ತರಬೇತಿಗಳನ್ನು ಒದಗಿಸುತ್ತದೆ. ಅದರೊಡನೆ, ಐಆರ್ಜಿಸಿ ಬಾಸಿಜ್ ರೆಸಿಸ್ಟೆನ್ಸ್ ಫೋರ್ಸ್ ಅನ್ನು ನಿಯಂತ್ರಿಸುತ್ತದೆ.
ಬಾಸಿಜ್ ಫೋರ್ಸ್
ಬಾಸಿಜ್ ರೆಸಿಸ್ಟೆನ್ಸ್ ಫೋರ್ಸ್ ಅಧಿಕೃತವಾಗಿ ಆರ್ಗನೈಸೇಶನ್ ಫಾರ್ ದ ಮೊಬಿಲೈಸೇಷನ್ ಆಫ್ ದ ಅಪ್ರೆಸ್ಡ್ ಎಂದು ಕರೆಯಲಾಗುತ್ತದೆ. ಇದನ್ನು ೧೯೭೯ರಲ್ಲಿ ಸ್ವಯಂಸೇವಕ ಅರೆಮಿಲಿಟರಿ ಪಡೆಯಾಗಿ ಸ್ಥಾಪಿಸಲಾಯಿತು.
ಈ ಸಂಸ್ಥೆ ಅಪ್ರೆಸ್ಡ್, ಅಂದರೆ, ಶಕ್ತಿಶಾಲಿ ಆಡಳಿತದಿಂದ ಅನ್ಯಾಯಕ್ಕೊಳಗಾದ ಸಮುದಾಯದ ಪರವಾಗಿ ಹೋರಾಡುವ ಗುರಿ ಹೊಂದಿದೆ.
ಬಾಸಿಜ್ ಫೋರ್ಸ್ ಇರಾನಿನ ಎಲ್ಲಾ ಪ್ರಾಂತ್ಯಗಳಲ್ಲಿ ಶಾಖೆಯನ್ನು ಹೊಂದಿದ್ದು, ಇರಾನಿನ ಅಧಿಕೃತ ಸಂಸ್ಥೆಗಳಲ್ಲೂ ಕಾರ್ಯಾಚರಿಸುತ್ತದೆ.
ಇದರ ಪುರುಷ ಮತ್ತು ಮಹಿಳಾ ಸದಸ್ಯರನ್ನು ಬಾಸಿಜಿಗಳೆಂದು ಕರೆಯಲಾಗಿದ್ದು, ಇಸ್ಲಾಮಿಕ್ ಕ್ರಾಂತಿಗೆ ನಿಷ್ಠರಾಗಿ, ಐಆರ್ಜಿಸಿಯ ಆದೇಶಗಳನ್ನು ಪಾಲಿಸುತ್ತಾರೆ. ದೇಶದ ಆಂತರಿಕ ಭದ್ರತಾ ಕಾರ್ಯಗಳನ್ನು ನಿರ್ವಹಿಸಲು ಅಂದಾಜು ೧,೦೦,೦೦೦ ಬಾಸಿಜಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಬಾಸಿಜಿಗಳು ೨೦೦೯ರ ಅಧ್ಯಕ್ಷೀಯ ಚುನಾವಣೆಯ ಬಳಿಕ ತಲೆದೋರಿದ ಸರ್ಕಾರ ವಿರೋಧಿ ದಂಗೆ, ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ನೂತನ ಮಧ್ಯಂತರ ಅಧ್ಯಕ್ಷರನ್ನು ನೇಮಿಸಿದ ಇರಾನ್
ಈ ಮೊದಲು ಇರಾನಿನ ಪ್ರಥಮ ಉಪಾಧ್ಯಕ್ಷರಾಗಿ ಕಾರ್ಯಾಚರಿಸಿದ್ದ ಮೊಹಮ್ಮದ್ ಮೊಖ್ಬೆರ್ ಅವರನ್ನು ಈಗ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮೊಖ್ಬೆರ್ ಅವರು ಇರಾನಿನ ಪ್ರಮುಖ ಮಿಲಿಟರಿ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಅಧಿಕಾರಿಯಾಗಿದ್ದು, ಈ ಮೊದಲು ದೇಶದ ಆಸ್ತಿಗಳನ್ನು ನಿರ್ವಹಿಸುವ ಐಆರ್ಜಿಸಿ ಸಂಸ್ಥೆಯನ್ನು ನಿರ್ವಹಿಸಿದ್ದರು. ಇರಾನಿನ ನ್ಯಾಯಾಂಗದ ಮುಖ್ಯಸ್ಥರು ಮತ್ತು ಇರಾನ್ ಸಂಸತ್ತಿನ ಸ್ಪೀಕರ್ ಸಹ ಆಗಿರುವ ಮೊಖ್ಬೆರ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಹೊಂದಿದ್ದಾರೆ.
ಸರ್ಕಾರದ ಸ್ಥಿರತೆಯ ಕುರಿತು ಸಾರ್ವಜನಿಕರಲ್ಲಿ ಇರಬಹುದಾದ ಆತಂಕಗಳನ್ನು ನಿವಾರಿಸುವ ಸಲುವಾಗಿ, ರೈಸಿ ಸಾವು ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ, ಹೆಲಿಕಾಪ್ಟರ್ ಪತನಗೊಂಡ ಸಂಜೆ ಖಮೇನಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಖಮೇನಿ ಇರಾನಿಯನ್ನರಿಗೆ ದೇಶ ಮತ್ತು ಸರ್ಕಾರದ ಕಾರ್ಯಾಚರಣೆಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಹೆಲಿಕಾಪ್ಟರ್ ಪತನದ ಹಿಂದಿನ ಕಾರಣಗಳು
ಮಂಜು ಮುಸುಕಿದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಳ್ಳುವ ಸಂದರ್ಭದಲ್ಲಿ, ರೈಸಿ ಅಜರ್ಬೈಜಾನ್ ಗಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದರು. ಈ ಅಪಘಾತದಲ್ಲಿ, ಅಧ್ಯಕ್ಷ ಇಬ್ರಾಹಿಂ ರೈಸಿ, ಇರಾನ್ ವಿದೇಶಾಂಗ ಸಚಿವ ಹೊಸೇನ್ ಆಮಿರಬ್ದೊಲ್ಲಾಹಿಯಾನ್ ಸೇರಿದಂತೆ, ಹೆಲಿಕಾಪ್ಟರ್ನಲ್ಲಿದ್ದ ಎಲ್ಲ ಒಂಬತ್ತು ಜನರೂ ಸಾವಿಗೀಡಾದರು. ಇರಾನಿಯನ್ ಅಧಿಕಾರಿಗಳು ಈ ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣ ಎಂದಿದ್ದರು.
ವರದಿಗಳ ಪ್ರಕಾರ, ರೈಸಿ ಬೆಲ್ ೨೧೨ ಎಂಬ ಅಮೆರಿಕನ್ ಹೆಲಿಕಾಪ್ಟರ್ ಅನ್ನು ಬಳಸುತ್ತಿದ್ದರು. ಈ ಹೆಲಿಕಾಪ್ಟರ್ ಮಾದರಿಯ ನಿರ್ಮಾಣ ೧೯೬೮ರಲ್ಲಿ ಆರಂಭಗೊಂಡು, ೧೯೯೮ರಲ್ಲಿ ಸ್ಥಗಿತಗೊಂಡಿತು. ೧೯೭೯ರ ಇಸ್ಲಾಮಿಕ್ ಕ್ರಾಂತಿಯ ಬಳಿಕ, ಇರಾನ್ ಮೇಲೆ ಅಮೆರಿಕಾ ಮತ್ತು ಯುರೋಪ್ನ ಪ್ರಮುಖ ಪೂರೈಕೆದಾರರಿಂದ ನೂತನ ಏರ್ಕ್ರಾಫ್ಟ್ಗಳು ಮತ್ತು ಬಿಡಿಭಾಗಗಳನ್ನು ಖರೀದಿಸಲು ಬಹಳಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಇದರಿಂದಾಗಿ ಇರಾನ್ ಇನ್ನೂ ಬಳಕೆಯಲ್ಲಿರುವ ಅತ್ಯಂತ ಹಳೆಯದಾದ, ಕನಿಷ್ಠ ಸೌಲಭ್ಯಗಳನ್ನು ಹೊಂದಿರುವ ಹೆಲಿಕಾಪ್ಟರ್ಗಳನ್ನು ಬಳಸುತ್ತಿದೆ. ಹೊಸ ಬಿಡಿಭಾಗಗಳ ಅಲಭ್ಯತೆಯ ನಡುವೆಯೂ ಇರಾನ್ ಈ ಹೆಲಿಕಾಪ್ಟರ್ಗಳ ನಿರ್ವಹಣೆಗೆ ತನ್ನ ಇಂಜಿನಿಯರ್ಗಳನ್ನು ಅವಲಂಬಿಸಿದೆ.
ನಾಯಕನ ಆಯ್ಕೆಯ ಮೇಲೆ ರೈಸಿ ಸಾವಿನ ಪರಿಣಾಮ
ಇರಾನಿನ ರಾಜಕಾರಣ ಅತ್ಯಂತ ಸಂಕೀರ್ಣವೂ, ರಹಸ್ಯಾತ್ಮಕವೂ ಆಗಿರುವುದರಿಂದ, ಖಮೇನಿಯ ಬಳಿಕ ಯಾರು ಸರ್ವೋಚ್ಚ ನಾಯಕರಾಗುತ್ತಾರೆ ಎಂಬ ಕುರಿತು ಬಹಿರಂಗವಾಗಿ ಮಾತುಕತೆಗಳು ನಡೆಯುವುದು ವಿರಳವಾಗಿದೆ. ಆದರೆ, ವಿಶ್ಲೇಷಕರು, ಅಧಿಕಾರಿಗಳು ಮತ್ತು ತಜ್ಞರು ಬಹಳ ಹಿಂದಿನಿಂದಲೂ ರೈಸಿ ಮತ್ತು ಖಮೇನಿಯ ಮಗ ಮೊಜ್ತಾಬ ಇಬ್ಬರೂ ಸರ್ವೋಚ್ಚ ನಾಯಕ ಸ್ಥಾನದ ಆಯ್ಕೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರೈಸಿ ನಿಧನದಿಂದಾಗಿ ಮೊಜ್ತಾಬಾಗೆ ಸರ್ವೋಚ್ಚ ನಾಯಕನಾಗುವ ಹಾದಿ ಸಲೀಸಾಗಿದೆ ಎನ್ನಲಾಗುತ್ತಿದೆ. ಆದರೆ, ೧೯೭೯ರ ಕ್ರಾಂತಿಯ ಭಾಗವಾಗಿದ್ದ ನಾಯಕರು ಯಾವುದೇ ರೀತಿಯ ವಂಶಪಾರಂಪರ್ಯ ಆಡಳಿತಕ್ಕೆ ಪ್ರಬಲ ವಿರೋಧಿಗಳಾಗಿದ್ದು, ಅವರು ಪ್ರಸ್ತುತ ವ್ಯವಸ್ಥೆಯನ್ನು ಜಾರಿಗೆ ತರಲು ರಾಜಾಡಳಿತವನ್ನೇ ಕಿತ್ತೊಗೆದಿದ್ದರು. ಮೊಜ್ತಾಬ ಯಾವುದೇ ಸರ್ಕಾರಿ ಹುದ್ದೆ ಹೊಂದಿಲ್ಲವಾದ್ದರಿಂದ, ಆತನ ಸಾಮರ್ಥ್ಯ ಇನ್ನೂ ಪರೀಕ್ಷಿಸಲ್ಪಟ್ಟಿಲ್ಲ. ಅದರೊಡನೆ, ಖಮೇನಿ ಮಗನಾಗಿದ್ದರೂ, ಮೊಜ್ತಾಬ ಸಾರ್ವಜನಿಕವಾಗಿ ಅಷ್ಟೇನೂ ಕಾಣಿಸಿಕೊಂಡಿಲ್ಲ. ಇರಾನಿನ ಸರ್ವೋಚ್ಚ ನಾಯಕನಾಗಬೇಕಾದರೆ, ಓರ್ವ ಮುಖಂಡನಿಗೆ ಪ್ರಸ್ತುತ ವ್ಯವಸ್ಥೆಯನ್ನು ಎತ್ತಿಹಿಡಿಯುವ ವ್ಯಕ್ತಿಗಳ ವ್ಯಾಪಕ ಬೆಂಬಲವೂ ಅಷ್ಟೇ ಮುಖ್ಯವಾಗಿರುತ್ತದೆ.
ಮಧ್ಯ ಪೂರ್ವದ ಮೇಲಿನ ಪರಿಣಾಮಗಳು
ರೈಸಿ ಸಾವು ಮಧ್ಯ ಪೂರ್ವದೊಡನೆ ಇರಾನ್ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಇರಾನ್ ಇಸ್ರೇಲನ್ನು ವಿರೋಧಿಸುವ ಹಮಾಸ್ ಮತ್ತು ಹೆಜ್ಬೊಲ್ಲಾದಂತಹ ಸಂಘಟನೆಗಳು, ಕೆಂಪು ಸಮುದ್ರದಲ್ಲಿ ಸರಕು ಸಾಗಾಣಿಕೆಯನ್ನು ಹಾಳುಗೆಡವುವ ಹೌತಿ ಬಂಡುಕೋರರಿಗೆ ಬೆಂಬಲ ನೀಡುತ್ತದೆ. ಇರಾನಿನ ಅರಾಜಕತೆಯಿಂದ ಶತ್ರುಗಳು ಪ್ರಯೋಜನ ಪಡೆದುಕೊಳ್ಳದಂತೆ ಐಆರ್ಜಿಸಿ ಪ್ರಯತ್ನ ಪಡಲಿದೆ. ರೈಸಿ ತನ್ನ ಅಧಿಕಾರಾವಧಿಯಲ್ಲಿ ಸೌದಿ ಅರೇಬಿಯಾ ಮತ್ತು ಯುಎಇಯಂತಹ ಗಲ್ಫ್ ರಾಷ್ಟ್ರಗಳೊಡನೆ ಸಂಬಂಧ ಸುಧಾರಿಸಿದ್ದು, ಅದು ಇನ್ನೂ ಮುಂದುವರಿಯುವ ಸಾಧ್ಯತೆಗಳಿವೆ. ಆದರೆ ನೂತನ ಅಧ್ಯಕ್ಷರು ವಿದೇಶಾಂಗ ನೀತಿಯ ಇತರ ಆಯಾಮಗಳಲ್ಲಿ ಬದಲಾವಣೆ ತರುವ ಸಾಧ್ಯತೆಗಳಿವೆ.