For the best experience, open
https://m.samyuktakarnataka.in
on your mobile browser.

ಲೋಕ ಸಮಸ್ತಃ ಸುಖಿನೋ ಭವಂತು

02:30 AM Apr 09, 2024 IST | Samyukta Karnataka
ಲೋಕ ಸಮಸ್ತಃ ಸುಖಿನೋ ಭವಂತು

ಸ್ಥಿರ ಮತ್ತು ನಿಶ್ಚಲವಾಗಿರುವ ಯಾವುದಾದರೂ ಅಂತಿಮವಾಗಿ ಕೊಳೆತೇ ಕೊಳೆಯುತ್ತದೆ ಮತ್ತು ನಾಶವಾಗುತ್ತದೆ. ಕಲ್ಮಶಗಳಿಂದ ಮುಕ್ತವಾಗಿರಲು ನೀರು ಹೇಗೆ ಸದಾ ಹರಿಯುತ್ತಿರಬೇಕೋ ಹಾಗೆಯೇ ಧರ್ಮವೂ ಬೆಳೆಯುವ ಸಾಮರ್ಥ್ಯವನ್ನು ಹೊಂದಿರಬೇಕು. ಈಜಿಪ್ಟ್ ಮತ್ತು ಮೆಸಪೊಟೇಮಿಯಾದಂತಹ ದೇಶಗಳ ಹೆಚ್ಚು ವಿಕಸನಗೊಂಡಿದ್ದ ಪ್ರಾಚೀನ ಧರ್ಮಗಳು ಕಾಲಾಂತರದಲ್ಲಿ ಭೂಮಿಯಿಂದಲೇ ಅಳಿಸಿಹೋಗಿವೆ. ಆದರೆ ಸನಾತನಧರ್ಮವು ಬದಲಾಗುತ್ತಿರುವ ಕಾಲದೊಂದಿಗೆ ವಿಕಸನಗೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ ಮತ್ತು ವಿಕಸನಶೀಲವಾಗಿದೆ. ಸನಾತನ ಧರ್ಮವು ಆಲದಮರದಂತೆ ಹೆಚ್ಚು ಹೆಚ್ಚು ಶಾಖೆಗಳನ್ನು ಸೃಷ್ಟಿಸಿಕೊಂಡು ತನ್ನ ಮೂಲ ಸ್ವಭಾವವನ್ನು ಜೀವಂತವಾಗಿರಿಸಿಕೊಂಡಿದೆ. ಅದರಿಂದಾಗಿಯೇ ಪ್ರಪಂಚದ ಉಳಿದೆಲ್ಲಾ ಮತಗಳನ್ನು ಒಟ್ಟುಗೂಡಿಸಿದರೂ ಅದಕ್ಕಿಂತ ಹೆಚ್ಚು ಶಾಖೆಗಳನ್ನು ಸನಾತನಧರ್ಮದಲ್ಲಿ ಕಾಣುತ್ತೇವೆ. ಸನಾತನಧರ್ಮದ ಮೂಲ ಪರಿಕಲ್ಪನೆಗಳು ಪ್ರಾಚೀನವಾಗಿದ್ದರೂ ಅದು ಧರ್ಮ ಅಥವಾ ಸದಾಚಾರಕ್ಕೆ ಹೊಂದಿಕೆಯಾಗುವ ಎಲ್ಲಾ ಹೊಸ ಆಲೋಚನೆಗಳನ್ನು, ಚಿಂತನೆಗಳನ್ನು ಸ್ವೀಕರಿಸಲು ಮತ್ತು ಸ್ವಾಗತಿಸಲು ಸಮರ್ಥವಾಗಿದೆ. ಆದಾಗ್ಯೂ, ಇತರೆಲ್ಲಾ ಧರ್ಮಗಳಂತೆ ಸನಾತನ ಧರ್ಮವು ತನ್ನದೇ ಆದ ಸಂಪ್ರದಾಯಗಳು, ಆಚರಣೆಗಳು, ಅಂತರ್ನಿರ್ಮಿತ ನಂಬಿಕೆಗಳು, ವಿಶಾಲ ದೃಷ್ಟಿಕೋನ, ಸಂಪೂರ್ಣ ಪರಿಕಲ್ಪನೆಗಳು, ಅಧ್ಯಾತ್ಮಿಕತೆ, ನೀತಿಶಾಸ್ತ್ರ, ಸೌಂದರ್ಯಶಾಸ್ತ್ರ, ವಿಶ್ವವಿಜ್ಞಾನ, ವಿಶ್ವಜ್ಞಾನ, ದೇವತಾಶಾಸ್ತ್ರಗಳಂತಹವುಗಳನ್ನು ಒಳಗೊಂಡು ವಿಶಿಷ್ಠತೆಯನ್ನು ಮೆರೆದಿದೆ. ಸನಾತನಧರ್ಮವು ಋಷಿಮುನಿಗಳು, ಯೋಗಿಗಳು, ಆಚಾರ್ಯರು, ಮಹಾನ್ ಸಂತರುಗಳು, ಅವಿಚ್ಛಿನ್ನ ಗುರುಪರಂಪರೆಯ ಅಸಾಧಾರಣ ಪ್ರಯತ್ನ ಮತ್ತು ಅಧ್ಯಾತ್ಮಿಕ ಒಳನೋಟಗಳ ಫಲರೂಪವಾಗಿದೆ. ಲೆಕ್ಕವಿಲ್ಲದಷ್ಟು ಕಾಲದ ಪರೀಕ್ಷೆಯನ್ನು, ಆಕ್ರಮಣ ಮತ್ತು ಸವಾಲುಗಳನ್ನು ಎದುರಿಸಿಯೂ ಇತರ ಸಂಸ್ಕೃತಿಗಳಂತೆ ನಾಶವಾಗದೆ ಜೀವಂತವಾಗಿ ಉಳಿದಿದೆ. ಇವರೆಲ್ಲರೂ ವೇದಗಳ ಮಹಾನ್ ಜ್ಞಾನವನ್ನು ಮತ್ತು ರಹಸ್ಯವನ್ನು ಭಾರತಕ್ಕೆ ಮಾತ್ರವೇ ಸೀಮಿತವಾಗಿರಿಸಿರಲಿಲ್ಲ (ಆ ಕಾಲದಲ್ಲಿ ಜಗತ್ತಿನಲ್ಲಿ ಬೇರಾವ ಧರ್ಮವೂ ಅಸಿತ್ವದಲ್ಲಿರಲಿಲ್ಲ); ಬದಲಿಗೆ "ಲೋಕ ಸಮಸ್ತಃ ಸುಖಿನೋ ಭವಂತು" ಎಂಬ ಆಶಯವನ್ನು ಹೊಂದಿದ್ದರು ಎಂಬುದನ್ನು ಇಡೀ ವಿಶ್ವವೇ ಅರಿತುಕೊಳ್ಳಬೇಕಿದೆ. ಭಾರತೀಯ ಋಷಿಗಳು ಆವಿಸ್ಕರಿಸಿದ ಸ, ರಿ, ಗ, ಮ, ಪ, ದ, ನಿ ಎಂಬ ಸಪ್ತಸ್ವರಗಳ ಆಧಾರದ ಮೇಲೆಯೇ ಪಾಶ್ಚಾತ್ಯ ಜಗತ್ತು ಇತ್ತೀಚೆಗೆ ದೋ, ರೆ, ಮಿ, ಫ, ಸೋ, ಲ, ತಿ ಎಂಬ ಸಂಗೀತಸ್ವರಗಳನ್ನು ಗುರುತಿಸಿಕೊಂಡಿದೆ.
ದೇಶ-ಧರ್ಮಗಳ ಮತ್ತು ರಾಷ್ಟçದ ಏಕಾತ್ಮತೆಯ ರಕ್ಷಣೆಗಾಗಿ ಶಂಕರಾಚಾರ್ಯರು ಧರ್ಮಪೀಠಗಳನ್ನು ಸ್ಥಾಪಿಸಿದರು. ಯಾಗಕುಂಡದಲ್ಲಿ ಯಾವಾಗಲೂ ಉರಿಯುತ್ತಿರುವ ಅಗ್ನಿಯೇ ವೇದಪುರುಷ. ಆತನ ಪೂರ್ವದಿಕ್ಕಿನಲ್ಲಿ ಋಗ್ವೇದ, ದಕ್ಷಿಣದಲ್ಲಿ ಯಜುರ್ವೇದ, ಪಶ್ಚಿಮದಲ್ಲಿ ಸಾಮವೇದ, ಉತ್ತರದಲ್ಲಿ ಅಥರ್ವವೇದ ಇರುತ್ತವೆ. ಈ ಹಿನ್ನೆಲೆಯಲ್ಲಿ ಶಂಕರಾಚಾರ್ಯರು ನಾಲ್ಕು ವೇದಗಳನ್ನು ಪ್ರತಿನಿಧಿಸುವ ನಾಲ್ಕು ಮಠಗಳನ್ನು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದರು. ಪೂರ್ವದಿಕ್ಕಿನಲ್ಲಿ ಋಗ್ವೇದ ಅಧ್ಯಯನದ ಪುರಿ ಪೀಠ; ದಕ್ಷಿಣದಲ್ಲಿ ಯಜುರ್ವೇದದ ಶೃಂಗೇರಿ ಪೀಠ; ಪಶ್ಚಿಮದಲ್ಲಿ ಸಾಮವೇದದ ದ್ವಾರಕಾಪೀಠ; ಉತ್ತರದಲ್ಲಿ ಅಥರ್ವವೇದದ ಬದರೀಪೀಠ.
ಭಾರತದ ಸಂವಿಧಾನ ರಚನೆಯಲ್ಲಿ ಮಹರ್ಷಿ ಯಾಜ್ಞವಲ್ಕ್ಯರ ರಾಜಧರ್ಮ ಸಂಹಿತೆಯ ಪ್ರಭಾವ ಹೆಚ್ಚಿದ್ದು, ಭಾರತದ ಸಂವಿಧಾನ ರಚನೆಗೆ ಯಾಜ್ಞವಲ್ಕ್ಯರೇ ಪ್ರೇರಕಶಕ್ತಿಯಾಗಿದ್ದಾರೆ. ಭಾರತದ ಕಾನೂನು, ಗಣಿತ, ವಿಶೇಷವಾಗಿ ಭಾರತದ ಸಂವಿಧಾನದ ಮೇಲೆ ಮಹರ್ಷಿ ಯಾಜ್ಞವಲ್ಕö್ಯರ ರಾಜಧರ್ಮ ಸಂಹಿತೆ ಹೆಚ್ಚಿನ ಪ್ರಭಾವ ಬೀರಿದೆ. ಹಾಗಾಗಿಯೇ ಯಾಜ್ಞವಲ್ಕ್ಯರ ಭಾವಚಿತ್ರವನ್ನು ಲೋಕಸಭೆಯ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಭಾರತ ಸರ್ಕಾರ ಯಾಜ್ಞವಲ್ಕ್ಯರಿಗೆ ನೀಡಿದ ಗೌರವ ಎಂದರೆ ತಪ್ಪಾಗಲಾರದು.
ನಾಲ್ಕು ವೇದಗಳಲ್ಲೊಂದಾದ ಅಥರ್ವ ವೇದವು ಅಥರ್ವ ಋಷಿಯ ಹೆಸರಿನಿಂದ ಜನಜನಿತವಾಗಿದೆ. ಇದರಲ್ಲಿರುವ ಮಂತ್ರಗಳು ಕೆಟ್ಟದ್ದನ್ನು ನಿವಾರಿಸಲು ಮತ್ತು ಪರಿಪೂರ್ಣ ಆರೋಗ್ಯವನ್ನು ಹೊಂದಲು ಉದ್ದೇಶಿಸಲಾಗಿದ್ದು, ಇತರ ಮೂರು ವೇದಗಳಲ್ಲಿ ಉಲ್ಲೇಖಿಸದ ಹಲವಾರು ದೇವತೆಗಳ ಕುರಿತ ಸ್ತೋತ್ರಗಳನ್ನು ಹೊಂದಿದೆ. ಇದು "ಪೃಥ್ವಿ ಸೂಕ್ತ" ಎಂಬ ಪ್ರಕೃತಿಯ ಸ್ತೋತ್ರವನ್ನೂ ಹೊಂದಿದೆ. ಇದರಲ್ಲಿನ ಅಸಂಖ್ಯಾತ ಮಂತ್ರಗಳು ಮಾನವದೇಹಕ್ಕೆ ಸಂಬಂಧಿಸಿದಂತೆ ದೇಹದ ಹೊರಗಿನ ಹೊದಿಕೆಯಿಂದ ಆರಂಭಿಸಿ ಒಳಗಿನ ಅತ್ಯಂತ ಸಂಕೀರ್ಣ ಭಾಗಗಳಿಗೆ ಸಂಬಂಧಿಸಿದ ಹಲವಾರು ರೋಗಗಳಿಗೆ ಔಷಧಗಳು ಹಾಗೂ ಚಿಕಿತ್ಸೆಗಳನ್ನು ಸೂಚಿಸುತ್ತವೆ.
ಅಥರ್ವವೇದದಲ್ಲಿ ಕಂಡುಬರುವ ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಔಷಧವಿಜ್ಞಾನ, ಖಗೋಳವಿಜ್ಞಾನ, ಜ್ಯೋತಿಷ್ಯಶಾಸ್ತ್ರವೇ ಮುಂತಾದ ಅನೇಕ ವಿಜ್ಞಾನಗಳನ್ನು ಅನೇಕ ಶತಮಾನಗಳ ನಂತರದಲ್ಲಿ ಆಧುನಿಕ ಜಗತ್ತು ಕಂಡುಹಿಡಿದಿದೆ. ಶುದ್ಧೀಕರಣ, ದ್ರಾವಣಗಳು, ಸ್ಫಟಿಕೀಕರಣ, ಭಟ್ಟಿ ಇಳಿಸುವಿಕೆ, ಉತ್ಖನನ, ಖನಿಜಗಳು, ಲೋಹಗಳು, ವಿವಿಧ ತರಕಾರಿ ಉತ್ಪನ್ನಗಳಿಂದ ಬಣ್ಣಗಳ ತಯಾರಿಕೆ-ಹೀಗೆ ವಿಸ್ತೃತ ಕಾರ್ಯಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ. ಈ ಎಲ್ಲಾ ಜ್ಞಾನವನ್ನು ಈಗ ವೈದ್ಯಕೀಯ ಹಾಗೂ ಔಷಧ ವಿಜ್ಞಾನದಲ್ಲಿ ಬಳಸಲಾಗುತ್ತಿದೆ. ವೇದಗಳಲ್ಲಿ ನೀಡಲಾದ ಈ ವೈಜ್ಞಾನಿಕ ಸಂಗತಿಗಳ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ; ವಿಜ್ಞಾನವು ಕೇವಲ ಪ್ರಯೋಗಾಲಯಗಳಲ್ಲಿ ಮಾತ್ರವೇ ಕಂಡುಬರುವ ಸೈದ್ಧಾಂತಿಕ ವಿಷಯವಲ್ಲ; ಬದಲಿಗೆ ಇದು ಜೀವಂತ ಹಾಗೂ ಸದಾ ಮಿಡಿಯುವ ಅಧ್ಯಯನ ಎಂಬುದು. ಇದು ಮಾನವ ಜೀವನದ ಎಲ್ಲಾ ಅಂಶಗಳಲ್ಲಿ ತನ್ನ ಉಪಯುಕ್ತತೆಯನ್ನು ಕಂಡುಕೊಂಡಿದೆ. ಮಾನವರು, ಪ್ರಾಣಿ-ಪಕ್ಷಿಗಳು, ಸಸ್ಯಸಂಕುಲಗಳಿಗೆ ಪೂರ್ಣ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತಿದೆ. ಸೂರ್ಯ, ಚಂದ್ರ, ಶನಿ, ಮಂಗಳ, ಗುರು, ಶುಕ್ರ, ಬುಧ ಮುಂತಾದ ಗ್ರಹನಕ್ಷತ್ರಗಳು; ಚಿನ್ನ, ಬೆಳ್ಳಿ, ಸೀಸ, ತಾಮ್ರ, ಪಾದರಸ, ತವರ, ಕಬ್ಬಿಣದಂತಹ ರತ್ನಚಿಕಿತ್ಸೆಯಲ್ಲಿ ಬಳಸುವ ವಿವಿಧ ಲೋಹಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಜ್ಯೋತಿಷ್ಯವು ರಸಾಯನಶಾಸ್ತ್ರ ಮತ್ತು ಔಷಧ ವಿಜ್ಞಾನದ ಮೇಲೆ ನಿರ್ದಿಷ್ಟ ಪ್ರಭಾವ ಹೊಂದಿದೆ.
ಮಧ್ಯಯುಗದಲ್ಲಿ ಬಹಳಷ್ಟು ಕಾಯಿಲೆಗಳಿಗೆ 'ಬಂಗಾರದ ನೀರು' ಕುಡಿಸುವ ಪದ್ಧತಿಯಿತ್ತು. ಈ ಚಿಕಿತ್ಸೆ ಈಗ ಪುನಃ ರೂಢಿಗೆ ಬರುತ್ತಿದೆ. ಸಣ್ಣಪ್ರಮಾಣದಲ್ಲಿ ಸೇವಿಸುವ 'ಚಿನ್ನದ ನೀರು' ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಅಗಾಧವಾಗಿ ವೃದ್ಧಿಸಿ ಸಂಧಿವಾತ ಸೇರಿದಂತೆ ಅನೇಕ ಮೂಳೆಸಂಬಂಧಿ ಕಾಯಿಲೆಗಳನ್ನು ಶೀಘ್ರವಾಗಿ ಗುಣಪಡಿಸುತ್ತದೆ. ತಾಮ್ರದಲ್ಲಿರುವ ಡಿ ಆರ್ಬಿಟಲ್ಸ್ಗಳು ನೀರಿನ ಸಂಪರ್ಕಕ್ಕೆ ಬಂದು ಸೊಗಸಾಗಿ ಗೆರೆಯ ಹಾಗೆ ಸಾಲಿನಲ್ಲಿ ನಿಲ್ಲುತ್ತವೆ. ತಾಮ್ರದ ನೀರು ಅನೇಕ ವಿಷಕಾರಿ ಅಂಶಗಳನ್ನು ನಮ್ಮ ದೇಹದಿಂದ ಕಿತ್ತು ಹೊರಹಾಕುವುದರಿಂದ ಜೀವಕೋಶಗಳಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಮರುಸ್ಥಾಪಿಸುತ್ತದೆ. (ತಾಮ್ರದ ಪಾತ್ರೆಯಲ್ಲಿನ ತಳದ ನೀರನ್ನು ಕಲಕದೆ ತಿಳಿಯಾದ ಮೇಲ್ಪದರದ ಶುದ್ಧ ನೀರನ್ನು ಮಾತ್ರ ಸೇವಿಸಬೇಕು.)