For the best experience, open
https://m.samyuktakarnataka.in
on your mobile browser.

ವಿಶ್ವಕ್ಕೆ ವಿವೇಕದ ಆನಂದ ನೀಡಿದ ನರೇಂದ್ರ

11:01 AM Jan 12, 2024 IST | Samyukta Karnataka
ವಿಶ್ವಕ್ಕೆ ವಿವೇಕದ ಆನಂದ ನೀಡಿದ ನರೇಂದ್ರ

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ-ರಾಷ್ಟ್ರೀಯ ಯುವದಿನ

ಸಿದ್ದವನಹಳ್ಳಿ ವೀರೇಶ್ ಕುಮಾರ್
ಇಂದು ನಮಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸ ಖಂಡ, ಉಕ್ಕಿನ ನರ, ಎದುರಿಸುವುದಕ್ಕೆ ಅಸದಳವಾದ ವಿಶ್ವರಹಸ್ಯದ ಅಂತರಾಳವನ್ನು ಭೇದಿಸಿ, ಸಮಯ ಬಂದರೆ ಕಡಲಿನ ಆಳಕ್ಕೆ ನುಗ್ಗಿ, ಮೃತ್ಯುವನ್ನು ಎದುರಿಸಿ, ತಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳಬಲ್ಲಂತಹ ಪ್ರಚಂಡ ಇಚ್ಛಾಶಕ್ತಿಯನ್ನು ಹೊಂದಿರುವ ಯುವ ಜನರಿಗಾಗಿ ನನ್ನ ಜೀವನವನ್ನೇ ತ್ಯಾಗ ಮಾಡಲು ಸಿದ್ಧ ಎಂದು ಯುವಶಕ್ತಿಯ ಸದ್ಬಳಕೆಗಾಗಿ ಸನ್ಮಾರ್ಗ ದರ್ಶಕರಾಗಿ ಶ್ರಮಿಸಿದ ಮಹಾನ್ ಚೈತನ್ಯ, ಭಾರತದ ಮೊಟ್ಟ ಮೊದಲ ವೀರ ಸನ್ಯಾಸಿ, ವಿವೇಕಾನಂದರ ಜನ್ಮದಿನ. ವೃಥಾ ಕಳೆದುಹೋಗುತ್ತಿರುವ ಯುವಶಕ್ತಿಗೆ ಯುಕ್ತ ಸೂಕ್ತ ಅರಿವನ್ನು ಬಿತ್ತುವುದಕ್ಕೆ ವಿವೇಕಾನಂದರ ವಿಚಾರಧಾರೆಗಳು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿವೆ.
ಜನವರಿ ೧೨, ೧೮೬೩ ರ ಕಲ್ಕತ್ತೆಯಲ್ಲಿ, ತಂದೆ ವಿಶ್ವನಾಥ ದತ್ತ ಹಾಗೂ ತಾಯಿ ಭುವನೇಶ್ವರಿ ದೇವಿಯ ಮಗನಾಗಿ ನರೇಂದ್ರ ಎಂಬ ನಾಮಧೇಯದೊಂದಿಗೆ ಜನಿಸಿದರು. ಅತ್ಯಂತ ಚುರುಕಾಗಿದ್ದ ನರೇಂದ್ರನಿಗೆ ಮಾಲೀಕನೊಬ್ಬ ಮರದ ಮೇಲೊಂದು ಬ್ರಹ್ಮರಾಕ್ಷಸವೆಂಬ ಪಿಶಾಚಿ ಇದೆ ಅದು ಮಕ್ಕಳನ್ನು ತಿಂದುಬಿಡುತ್ತದೆ''ಎಂದು ಹುಡುಗರನ್ನು ಹೆದರಿಸಿದನು. ಅವನ ಬೆದರಿಕೆಗೆ ಜಗ್ಗದ ನರೇಂದ್ರ ಅಲ್ಲಿಯೇ ಕುಳಿತು ಮಾಲೀಕ ಕಟ್ಟಿದ ಕಥೆ ಸುಳ್ಳೆಂದು ಸಾರಿದನು. ಸನ್ಯಾಸಿಗಳಿಗೆ ಭಿಕ್ಷುಕರಿಗೆ ಬಡವರಿಗೆ ತನ್ನಲ್ಲಿದ್ದುದ್ದನ್ನೆಲ್ಲ ಕೊಟ್ಟುಬಿಡುತ್ತಿದ್ದನು. ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬಾರದೆಂಬ ಅವರ ನಿಲುವು ಜೊತೆಗೆ, ತ್ಯಾಗ ವೈರಾಗ್ಯ ಗುಣಗಳು ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತವೆ. ಬಾಲ್ಯದಲ್ಲಿ ತಾಯಿ ನರೇಂದ್ರನ ದೊಡ್ಡವನಾದ ಮೇಲೆ ಏನಾಗುತ್ತೀಯ? ಎಂದು ಕೇಳಿದಾಗ ಕುದುರೆ ಓಡಿಸುವ ಸಾರಥಿ ಆಗುತ್ತೇನೆ ಎಂದು ಹೇಳಿದರು. ಅದಕ್ಕೆ ಭುವನೇಶ್ವರಿ ದೇವಿ ಹೇಳಿದ ಮಾತುಗಳು ಎಲ್ಲಾ ತಾಯಂದಿರು ತನ್ನ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದನ್ನು ಕಲಿಸುತ್ತದೆ. ಮಗು ನೀನು ಶ್ರೀ ಕೃಷ್ಣ ಇಡಿ ಜಗತ್ತನ್ನು ನಡೆಸುವ ಸಾರಥಿ ಆಗಿದ್ದ ಹಾಗೆ ನೀನು ಆಗಿ ಪ್ರಪಂಚದ ಬೆಳಕಾಗು'' ಎಂದು ನೀಡಿದ ಸಾಂದರ್ಭಿಕ ಮಾತುಗಳು ಹಾಗೂ ಆಕೆ ಹೇಳುತ್ತಿದ್ದ ರಾಮಾಯಣದ ಕಥೆಗಳು ನರೇಂದ್ರನ ಮೇಲೆ ಅಪಾರ ಪ್ರಭಾವವನ್ನು ಬೀರಿದ್ದವು. ಬೆಳೆಯ ಸಿರಿ ಮೊಳಕೆಯಲ್ಲಿಯೇ ಎಂಬಂತೆ ವಿವೇಕಾನಂದರ ಕರುಣೆ ಬಾಲ ನರೇಂದ್ರನಲ್ಲಿಯೇ ಕುಡಿಯುಡೆಯುತ್ತಿತ್ತು. ಒಮ್ಮೆ ಗರಡಿಯಲ್ಲಿ ಕಲಿತ ಕಸರತ್ತುಗಳ ಪ್ರದರ್ಶನ ನಡೆಯುತ್ತಿತ್ತು. ಆ ಸಮಯದಲ್ಲಿ ಕಬ್ಬಿಣದ ಸರಳೊಂದು ಅಕಸ್ಮಾತಾಗಿ ನಾವಿಕನ ಮೇಲೆ ಬಿತ್ತು. ಪೊಲೀಸರು ಬಂದು ತಮ್ಮನ್ನು ಹಿಡಿದಾರೆಂಬ ಭಯದಲ್ಲಿ ಅಲ್ಲಿದ್ದವರೆಲ್ಲ ಓಡಿ ಹೋದರು. ನರೇಂದ್ರ ಗೆಳೆಯರ ಸಹಾಯದಿಂದ ವೈದ್ಯರನ್ನು ಕರೆಸಿ, ಚಿಕಿತ್ಸೆ ಮಾಡಿಸಿದನು. ಹೀಗೆ ನೂರಾರು ಕಾರ್ಯಗಳನ್ನು ನಿರ್ಭಯವಾಗಿ ಮಾಡಿದನು. ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ಇದು ನರೇಂದ್ರರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ನರೇಂದ್ರರು ರಾಮಕೃಷ್ಣರನ್ನು `ದೇವರಿದ್ದಾನೆಯೇ?' ಎಂಬ ಪ್ರಶ್ನೆ ಹಾಕಿದರು ಅದಕ್ಕೆ ಪ್ರತ್ಯುತ್ತರವಾಗಿ ರಾಮಕೃಷ್ಣರು ಜನ ಹೆಣ್ಣು, ಹೊನ್ನು, ಮಣ್ಣಿಗಾಗಿ ಚಿಂತಿಸುತ್ತಾರೆ. ದೇವರಿಗಾಗಿ ಯಾರು ಹಂಬಲಿಸುತ್ತಾರೋ, ಚಿಂತಿಸುತ್ತಾರೋ, ಅವನಲ್ಲಿ ನಂಬಿಕೆ ಇಡುತ್ತಾರೋ ಅವನನ್ನು ಕಂಡೇ ಕಾಣುತ್ತಾರೆ'' ಎನ್ನುತ್ತಾ ಅವರು ನರೇಂದ್ರನ ಕುರಿತುನೀನು ತಡವಾಗಿ ಬಂದೆಯಾ? ನೀನು ನಾರಾಯಣನ ಅವತಾರ. ಮಾನವನನ್ನು ಸಂಕಟದಿಂದ ದೂರೀಕರಿಸಲು ಬಂದವನು'' ಎಂದು ಹೇಳುತ್ತಿದ್ದರು.
ರಾಮಕೃಷ್ಣರಗೆ ಅನಾರೋಗ್ಯ ಕಾಡಲು ಆರಂಭಿಸಿದಾಗ ನರೇಂದ್ರನನ್ನು ಬಳಿ ಕರೆದು ಮುಟ್ಟಿ ತಮ್ಮ ಅಧ್ಯಾತ್ಮ ಶಕ್ತಿಯನ್ನೆಲ್ಲ ಅವನಿಗೆ ಧಾರೆ ಎರೆದರು. ``ನೀನೀಗ ಮಹಾನ್ ಶಕ್ತಿಶಾಲಿ ಇವರೆಲ್ಲ ನನ್ನ ಮಕ್ಕಳು ಇವರ ರಕ್ಷಣೆಯ ಭಾರ ನಿನ್ನದು'' ಎಂದು ನುಡಿದರು.
ಗುರುವಿನ ಸಾವಿನ ಸಂಕಟದಲ್ಲಿ ರಾಮಕೃಷ್ಣ ಮಠದ ಸ್ಥಾಪನೆಯನ್ನು ಭಾರಾನಗರದ ಮನೆಯೊಂದರಲ್ಲಿ ಆರಂಭಿಸಿದರು. ಆತ್ಮ ಮೋಕ್ಷ ಮತ್ತು ಲೋಕ ಕಲ್ಯಾಣಗಳ ಸಾಧನೆಯೇ ಅವರ ಧ್ಯೇಯವಾಯಿತು. ಬಟ್ಟೆ ಅಭಾವ ಊಟವಿಲ್ಲದಿದ್ದಾಗಲೂ, ಯಾವುದೇ ಕಾರ್ಯಗಳನ್ನು ನಿಲ್ಲಿಸದೆ ಸನ್ಯಾಸ ಧರ್ಮವನ್ನು ಸ್ವೀಕರಿಸಿ ನರೇಂದ್ರ ವಿವೇಕಾನಂದರಾದುದ್ದು ಭಾರತದ ಪುಣ್ಯ.
೧೮೯೩ ಶಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ಸೆಪ್ಟೆಂಬರ್ ೧೧ರಂದು ಸ್ವಾಮಿ ವಿವೇಕಾನಂದ ಅವರು ಶ್ರೀರಾಮಕೃಷ್ಣರನ್ನು ಮನದಲ್ಲೇ ನೆನೆದು ಮಧುರ ಕಂಠದಿಂದ ಅಮೆರಿಕ ದೇಶದ ಸಹೋದರ ಸಹೋದರಿಯರೇ'' ಎಂಬ ಮಾತುಗಳು ಹೊರ ಬಿದ್ದಾಗ ಸಭಿಕರ ಕೈ ಚಪ್ಪಾಳೆ ಕಿವುಡುಗೊಳಿಸಿ, ಅದು ಎರಡು ಮೂರು ನಿಮಿಷ ನಿಲ್ಲಲಿಲ್ಲ. ಆ ತನಕ ಯಾರೂ ಅಷ್ಟು ಆತ್ಮೀಯತೆಯಿಂದ ಮಾತನಾಡಿರಲಿಲ್ಲ. ಅನೇಕ ಕಡೆ ಹುಟ್ಟಿದ ನದಿಗಳು ಸಮುದ್ರವನ್ನು ಸೇರುವಂತೆ ಬೇರೆ ಬೇರೆ ಧರ್ಮಗಳಲ್ಲಿ ಹುಟ್ಟಿದವರು ಕೊನೆಗೆ ಪರಮಾತ್ಮನನ್ನು ಸೇರುತ್ತಾರೆಂದು ಅವರು ನುಡಿದರು.
ಸ್ವಾಮೀಜಿಯವರ ಸತತ ಪ್ರಯತ್ನದಿಂದಾಗಿ ಭಾರತ ಅಮೆರಿಕೆಯಲ್ಲಿ ಮಾತ್ರವಲ್ಲ, ಮುಂದುವರಿದ ರಾಷ್ಟ್ರಗಳಲ್ಲೆಲ್ಲಾ ಗೌರವಸ್ಥಾನ ಪಡೆಯುವಂತಾಯಿತು. ಸ್ವಾಮೀಜಿಯವರಿಗೆ ಭಾರತದ ಬಡತನ ಕಣ್ಣಿಗೆ ಕಟ್ಟಿದಂತಿರುತ್ತಿತ್ತು. ಮುಂದೆ ಸೋದರಿ ನಿವೇದಿತಾ, ಮಾರ್ಗರೆಟ್ ನೊಬೆಲ್ ಅವರ ಶಿಷ್ಯರಾದರು.
೧೮೯೭ನೇ ಜನವರಿ ೧೫ರಂದು ಭಾರತಕ್ಕೆ ವಾಪಸಾಗಿ ಶ್ರೀ ರಾಮಕೃಷ್ಣ ಮಿಷನ್ ಪ್ರಾರಂಭಿಸಿ, ಪಶ್ಚಿಮ ಬಂಗಾಳದ ಬೇಲೂರಿನಲ್ಲೊಂದು ನಿವೇಶನ ಕೊಂಡು ಕಟ್ಟಡ ನಿರ್ಮಿಸಿ ಮಠವನ್ನು ಅಲ್ಲಿಗೆ ಸ್ಥಳಾಂತರಿಸಿದರು. ಶ್ರೀರಾಮಕೃಷ್ಣರ ಸಂದೇಶದ ತಿರುಳನ್ನು ಬೋಧಿಸುವುದರ ಜೊತೆಗೆ ಬರ ಪರಿಹಾರ, ನೆರೆ ಸಂತ್ರಸ್ತರಿಗೆ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆ, ಬುಡಕಟ್ಟುಗಳ ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೊದಲಾದ ಜನಸೇವೆಯ ಕಾರ್ಯಕ್ರಮಗಳನ್ನು ಕೈಗೊಂಡರು.