ಸಾಧನೆಯ ಒಳಗಿರುವ ತಪಸ್ಸು
ಡಾ.ಎಸ್.ಕೆ. ವಿಜೇಂದ್ರ ಕುಮಾರ್
ನನ್ನಲ್ಲಿಗೆ ಬರುವ ತುಂಬಾ ವಿದ್ಯಾರ್ಥಿಗಳು ಕನಸು ಕಾಣುವವರು. ಹದಿನೆಂಟರ ಆಸುಪಾಸಿನವರು. ಹಾಗೆಂದು ನಾನೇನು ಕನಸು ಕಾಣುವುದರ ವಿರೋಧಿಯಲ್ಲ. ದೊಡ್ಡ ದೊಡ್ಡ ಕನಸು ಕಾಣು ಎಂದು ಹಿರಿಯರೇ ಹೇಳಿದ್ದಾರೆ. ಆ ವಯಸ್ಸಿನಲ್ಲಿ ಅದು ಇರಬೇಕಾದುದೇ. ಐಎಎಸ್, ಐಪಿಎಸ್ ಆಗಬೇಕು, ಡಾಕ್ಟರ್ ಆಗಬೇಕು, ಎಲಾನ್ ಮಸ್ಕ್ ತರಹ ದೊಡ್ಡ ಉದ್ಯಮಿ ಆಗಬೇಕು ಅಂತೆಲ್ಲ ಕನಸು ಕಾಣುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಟ-ಓಟಗಳು, ಕ್ರಿಕೆಟ್, ಫುಟ್ಬಾಲ್ ಕೂಡ ಇದರಲ್ಲಿ ಸೇರಿವೆ! ಇದೆಲ್ಲದರ ಜೊತೆಗೆ ಸಂಗೀತ ಸ್ಪರ್ಧೆಗಳು, ರೀಲ್ಸ್ಗಳು, ಯೂಟ್ಯೂಬ್ ಚಾನಲ್‌ಗಳಲ್ಲಿ, ಟ್ವಿಟ್ಟರ್ ಗಳಲ್ಲಿ ಟ್ರೆಂಡ್ ಆಗಬೇಕು ಅಂತಲೂ ಕೆಲವರು ಅಂದುಕೊಳ್ಳುತ್ತಾರೆ.
ಈ ಎಲ್ಲ ಕನಸುಗಳ ಭಾರ ಬೀಳುವುದು ಮನಸ್ಸಿನ ಮೇಲೆ. ಕೆಲವು ಮನಸ್ಸುಗಳು ಗಟ್ಟಿಯಾಗಿದ್ದು, ತಾಳಿಕೊಳ್ಳುತ್ತವೆ, ಇನ್ನು ಕೆಲವರು ಭಾರ ತಾಳಿಕೊಳ್ಳದೆ, ತಾಳಲಾಗದೆ, ಖಿನ್ನತೆಗೊಳಗಾಗಿ, ಆತ್ಮಹತ್ಯೆಗೋ, ಕನಸುಗಳನ್ನೆಲ್ಲ ಮರೆಯಲು ಯಾವುದೋ ಚಟಕ್ಕೆ ಬಿದ್ದು ಬದುಕನ್ನು ದುರಂತವನ್ನಾಗಿಸುತ್ತಾರೆ. ಅದಕ್ಕಂತಲೇ 'ತಾಳಿದವನು ಬಾಳಿಯಾನು' ಎಂದು ಹಿರಿಯರು ಹೇಳಿರುವುದೇನೋ.
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಎಲ್ಲರಿಗೂ ಆಗುವುದಿಲ್ಲ. ಹಾಗೆಂದು ನಮ್ಮ ಮನುಷ್ಯ ಪ್ರಯತ್ನಕ್ಕೆ ಬೆಲೆಯಿಲ್ಲವೇ ಎಂದು ನೀವು ಕೇಳಿದರೆ ನಾನು ಖಂಡಿತವಾಗಿ ಪ್ರಯತ್ನ ಮಾಡಿ ಅಂತಲೇ ಹೇಳುತ್ತೇನೆ. ಮಾನವ ಪ್ರಯತ್ನಕ್ಕೆ ವಿರುದ್ಧವಾಗಿ ವಿಧಿ ನಿಂತರೂ ಆ ವಿಧಿಗೇ ಸೋಲು ಎಂದು ನಮ್ಮ ಪುರಾಣಗಳಲ್ಲಿ ಬರುವ ಅನೇಕ ಪ್ರಸಂಗಗಳು ಸಾಕ್ಷಿಯಾಗಿವೆ.
ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತರ ಮನೆಗೆ ಹೋಗಿದ್ದೆ. ಅವರ ಮಗಳು ಬೆಂಗಳೂರಿನ ಪ್ರತಿಷ್ಠಿತ ಬ್ರ್ಯಾಂಡ್‌ನ ಮೈಸೂರ್ ಪಾಕ್ ತಂದುಕೊಟ್ಟಳು. ಏನಕ್ಕೆ ಈ ಸಿಹಿ ಎಂದು ಕೇಳಿದೆ. ಅವಳು ಬಿ.ಕಾಮ್‌ನಲ್ಲಿ ೬೨% ಅಂಕ ಬಂದಿದೆ, ಅದಕ್ಕಾಗಿ ಎಂದಳು. ತುಂಬಾ ಸಂತೋಷ ಅಂತ ಹೇಳಿ ಮುಂದೆ ಏನ್ಮಾಡ್ತೀಯಾ ಎಂದೆ. ಅದಕ್ಕವಳು ಸಿ.ಎ. ಮಾಡುತ್ತೇನೆ ಎಂದಳು. ಸಿ.ಎ. ಓದಲು ತರಬೇತಿಯ ಅಗತ್ಯ ಇರುತ್ತದೆ, ನಿಮ್ಮ ಅಪ್ಪ ಅದಕ್ಕೆ ಹಣ ಹೊಂದಿಸುತ್ತಾರಾ ಅಂತ ಕೇಳಿದೆ. ಅಪ್ಪನ ಹತ್ತಿರ ಮಾತಾಡಿದ್ದೇನೆ, ಅವರು ಒಪ್ಪಿಕೊಂಡಿದ್ದಾರೆ ಎಂದಳು.
ಅವರ ಮನೆಯ ಪರಿಸ್ಥಿತಿ ನನಗೆ ಗೊತ್ತಿಲ್ಲದಿರುವುದೇನೂ ಅಲ್ಲ. ಸಣ್ಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಅವರಿಗೆ ಇವಳನ್ನು ಇಲ್ಲಿಯವರೆಗೆ ಓದಿಸಲಿಕ್ಕೆ ಹಣ ಹೊಂದಿಸಿರುವುದೇ ಒಂದು ದೊಡ್ಡ ಸಾಧನೆ ಅಂತ ಹೇಳಬಹುದು.
ಆಗತಾನೆ ಬಂದ ಅವಳ ತಂದೆಯವರಿಗೆ ಒಂದು ಸವಾಲನ್ನು ಇಟ್ಟೆ. ನಿಮ್ಮ ಮಗಳು ಸಿ.ಎ. ಮಾಡಲಿಕ್ಕೆ ತರಬೇತಿ ತೆಗೆದುಕೊಳ್ಳುತ್ತಾಳಂತೆ. ಅವಳ ತರಬೇತಿಗೆ ಮೂರು ತಿಂಗಳ ನಂತರ ಹಣ ಕೊಡುತ್ತೇನೆ ಅಂತ ಹೇಳಿ. ಈ ಮೂರೂ ತಿಂಗಳಲ್ಲಿ ಅವಳಿಗೆ ಒಂದು ಸವಾಲನ್ನು ಇಡಿ. ಅದೇನೆಂದರೆ ಈ ಮೂರೂ ತಿಂಗಳು ಅವಳು ದಿನಕ್ಕೆ ಎಂಟರಿಂದ ಹತ್ತು ತಾಸು ಬಿ. ಕಾಮ್ ಪಠ್ಯವನ್ನೇ ಇನ್ನೊಮ್ಮೆ ಬೆಳಗ್ಗೆ ಆರು ಘಂಟೆಗೆ ಎದ್ದು ಓದಲಿ. ಹುಟ್ಟುಹಬ್ಬದ ಪಾರ್ಟಿ, ನಾಮಕರಣ, ಸತ್ಯನಾರಾಯಣ ಪೂಜೆ, ಮದುವೆ-ಮುಂಜಿಗೆ ಹೋಗದೆ ಓದಿಕೊಳ್ಳಲಿ. ಕೇವಲ ೯೦ ದಿನ ಆಕೆಗೆ ಇದನ್ನೆಲ್ಲಾ ಮಾಡಲು ಆದರೆ ಅವಳ ತರಬೇತಿಗೆ ದುಡ್ಡು ಕೊಡಿ ಎಂದೆ. ಅವರು ಹಾಗೇ ಮಾಡುತ್ತೇನೆ ಎಂದು ನನಗೆ ಹೇಳಿದರೂ ಮಗಳ ಹಠಕ್ಕೆ ಮಣಿದು ತರಬೇತಿಗೆ ದುಡ್ಡು ಕೊಟ್ಟರು. ಆಕೆ ತರಬೇತಿಗೆ ಆರು ತಿಂಗಳು ಹೋಗಿ, ನಂತರದ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲಿ ಅನುತ್ತೀರ್ಣಳಾಗಿ, ಸಿಎ ಮಾಡುವ ಆಸಕ್ತಿ, ತರಬೇತಿ ಎಲ್ಲವನ್ನು ಬಿಟ್ಟಳು. ಒಂದು ಸಣ್ಣಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡು, ಮುಂದೆ ಒಬ್ಬ ಹುಡುಗನನ್ನು ಪ್ರೀತಿಸಿ, ಎಲ್ಲರ ಒಪ್ಪಿಗೆಯ ಮೇಲೆ ಮದುವೆಯಾಗಿ, ಈಗ ಒಂದು ಮಗುವಿನ ತಾಯಿಯಾಗಿದ್ದಾಳೆ..!
ಸ್ವಲ್ಪ ವಿಸ್ತರಿಸಿ ಹೇಳುವುದಾದರೆ ಬೆಳಗ್ಗೆ ಆರು ಗಂಟೆಗೆ ಏಳುವುದಕ್ಕೂ, ಹೆಚ್ಚಿನ ಅಂಕ ಗಳಿಸುವುದಕ್ಕೂ ಇರುವ ಸಂಬಂಧ ವೈಜ್ಞಾನಿಕವಾಗಿ ಸಾಬೀತಾಗಿಲ್ಲ, ಹಾಗೆಯೇ ಎಂಟು-ಹತ್ತು ತಾಸುಗಳ ಓದು ಕೂಡ. ಹಾಗೆಯೇ ಹುಟ್ಟುಹಬ್ಬದ ಪಾರ್ಟಿ, ಸತ್ಯನಾರಾಯಣ ಪೂಜೆ, ಮದುವೆ-ಮುಂಜಿಗಳು ಕೂಡ ಯಾವುದೇ ಸಂಬಂಧವಿರದ ಜೀವನದ ಸಣ್ಣ-ದೊಡ್ಡ ಘಟನೆಯ ಅಂಶಗಳು. ಆದರೆ, ಈ ಎಲ್ಲ ಆಗು-ಹೋಗುಗಳನ್ನು ಬದಿಗಿರಿಸಿ, ನೀವು ಹಾಕಿಕೊಂಡ ಸವಾಲಿಗೆ ಕೇವಲ ಮೂರು ತಿಂಗಳ ಕಾಲ, ಪ್ರಾಯಶಃ ಅದು ನಿಮ್ಮ ಸಾಧನೆಯ ತಲುಪಲು ಬೇಕಾಗುವ ಒಟ್ಟು ಸಮಯದ ಹತ್ತರಿಂದ ಹದಿನೈದು ಅಂಶಗಳಷ್ಟನ್ನು, ಯಾವುದೇ ಇತರ ವಿಷಯಗಳ ಕಡೆಗೆ ಗಮನಹರಿಸದೆ, ನಿರಂತರವಾಗಿ, ಏಕತಾನತೆಗೆ ಒಗ್ಗಿಕೊಂಡು, ಪ್ರಯತ್ನ ಪಡುತ್ತೀರಲ್ಲ, ಅದು ನಿಮ್ಮ ತಪಸ್ಸಾಗಿರುತ್ತದೆ. ಈ ತಪಸ್ಸು ನಿಮ್ಮ ಸಾಧನೆಗೆ ಊರುಗೋಲಾಗಿ, ಕನಸಿನ ಭಾರದಿಂದ ನೀವು ಬೀಳದಂತೆ ತಡೆಯುತ್ತದೆ ಎನ್ನುವುದು ಮನೋವಿಜ್ಞಾನಿಗಳ ಅಭಿಪ್ರಾಯ.
ಆದರೆ, ಬೆಳಿಗ್ಗೆ ಬೇಗ ಎದ್ದು ಅಭ್ಯಾಸವಿಲ್ಲದ ಜನರಿಗೆ, ಆರು ಘಂಟೆಗೆ ಅಲಾರ್ಮ್ ಹೊಡೆಯುವ ಸದ್ದು ಕೇಳಿಸಿಕೊಂಡು, ಗಾಢನಿದ್ದೆಯಲ್ಲಿ ಸುಖವಾಗಿ ಮಲಗಿರುವ ಸಮಯದಲ್ಲಿ, ಆ ಸುಖವನ್ನು ಪಕ್ಕಕ್ಕಿಟ್ಟು, ಎದ್ದು, ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಂಡು ಓದಲು ಕೂಡುವ ಮನಸ್ಸು ಶ್ರದ್ಧೆಯನ್ನು, ಆತ್ಮವಿಶ್ವಾಸವನ್ನು, ನಿಮ್ಮ ಮೇಲಿರುವ ನಂಬಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಕೊನೆಯಲ್ಲಿ ನಿಮ್ಮ ಸಾಧನೆಗೆ ಬೇಕಾಗಿರುವುದು ನಿರಂತರ ಶ್ರದ್ಧೆ, ಆತ್ಮವಿಶ್ವಾಸ, ಸೋತರೂ ಧೈರ್ಯಗೆಡದ ಮನೋಭಾವ ಮತ್ತು ನಿಮ್ಮ ಸಾಧನೆಗೆ ಸಂಬಂಧವಿರದ ಆಸೆ-ಆಕಾಂಕ್ಷೆಗಳನ್ನು ಬದಿಗಿರಿಸಿ ನಿಮ್ಮ ಗುರಿಯೆಡೆಗೆ ದೃಷ್ಟಿಯಿರಿಸುವ ತಪಸ್ಸು ಮುಖ್ಯವಾಗುತ್ತದೆ.
ಹಾಗಂತ ಈ ಆಸೆ-ಆಕಾಂಕ್ಷೆಗಳನ್ನೆಲ್ಲಾ ಬಿಟ್ಟು ಸನ್ಯಾಸಿಯಾಗಿ ನಡೆಸುವ ಬದುಕೂ ನಮ್ಮ ಜೀವನೋತ್ಸಾಹವನ್ನು ಕಮರಿಸುತ್ತದೆ. ಈ ಬೇಕು-ಬೇಡಗಳ ಹೊಂದಾಣಿಕೆಯನ್ನು ಕೇವಲ ಆಪ್ತ-ಸಮಾಲೋಚನೆಯಲ್ಲಲ್ಲದೆ, ಲೇಖನ, ಸ್ವಸಹಾಯ ಪುಸ್ತಕಗಳು, ಯೂಟ್ಯೂಬ್ ಚಾನಲ್‌ಗಳ ಮೂಲಕ ಹೇಳಲು ಆಗುವುದಿಲ್ಲ. ಅದು ಸಂವಾದ ಕೇಂದ್ರಿತ, ಪ್ರಶ್ನೆ-ದ್ವಂದ್ವ, ಸಮಸ್ಯೆಗಳ ಗುರು, ಪರಿಣತರ ಮುಂದಿರಿಸುವ ಮೂಲಕ. ಅದಕ್ಕಾಗಿಯೇ ಉಪನಿಷತ್ತುಗಳು ಭಾರತದಲ್ಲಿ ಉಗಮಿಸಿದ್ದವು ಎನ್ನುವುದು ಭಾರತೀಯ ಪರಂಪರೆಯ/ಸಂಸ್ಕೃತಿಯ ವಿಶೇಷ. ಇಲ್ಲಿಯ ಎಲ್ಲ ಸಾಧಕರ ಸಾಧನೆಯಲ್ಲಿರುವುದೂ ತಪಸ್ಸೇ!