ಹೆಂಡತಿ ಮಾತು ಕೇಳದ ಗಂಡಿಗೆ ಜಯವಿಲ್ಲ
ಪತಿ-ಪತ್ನಿಯರು ಶಿವ-ಪಾರ್ವತಿಯರಂತೆ ಒಂದೇ ಜೀವವಾಗಿ, ಒಂದೇ ಆತ್ಮವಾಗಿ, ಒಂದೇ ಭಾವವಾಗಿ ಮತ್ತು ಒಂದೇ ಅನುಭೂತಿಯಾಗಿ ಇರುವುದು ಬಹಳ ಅಪರೂಪ. ಪತಿಯ ಮಾತಿನಲ್ಲಿ ಪತ್ನಿಗೆ ನಂಬಿಕೆ ಬರದಿರುವ, ಪತ್ನಿಯ ಮಾತಿನಲ್ಲಿ ಪತಿಗೆ ವಿಶ್ವಾಸವಿರದಿರುವ ಸಂದರ್ಭಗಳೇ ಹೆಚ್ಚಾಗಿವೆ. ಪತ್ನಿಗೆ ದಾಂಪತ್ಯದ ಸುಖ ನೀಡದೆ ಅವಳ ದೇಹ, ಮನಸ್ಸಿನ ಮೇಲೆ ಕಠಿಣ ನಿಯಂತ್ರಣ ಸಾಧಿಸಬಯಸುವ ಪತಿ, ಪತಿಯ ಮನಸ್ಸನ್ನು ಅರಿಯದೆ, ಅವನ ಅಪೇಕ್ಷೆ, ನಿರೀಕ್ಷೆ ಪೂರೈಸದೆ, ಅವನಿಗೆ ದಾಂಪತ್ಯದ ಸುಖವನ್ನೂ ನೀಡದೆ ಅವನ ದೇಹ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಅವನ ಮೇಲೆ ಒತ್ತಡ ತಂದು, ಮಾಲಿಕತ್ವ ಸಾಧಿಸಬಯಸುವ ಪತ್ನಿಯರ ಸಂಖ್ಯೆಯೇ ಅಧಿಕ. ಆದರೆ ಸಂಸಾರದಲ್ಲಿ ಪತಿ-ಪತ್ನಿಯರ ನಡುವೆ ವಿಶ್ವಾಸ ಮತ್ತು ನಂಬಿಕೆ, ಪರಸ್ಪರ ಗೌರವ, ಆತ್ಮಸಮ್ಮಾನ ಇರಬೇಕು. ಜವಾಬ್ದಾರಿಯುತ ಹೆಂಡತಿ ಮನೆಯೊಳಗಿದ್ದರೆ ಒಂದಲ್ಲ ಹತ್ತು ಕೋಟಿ ರೂಪಾಯಿ ಇದ್ದಂತೆ. ಹಾಗೆಯೇ ಹೊಣೆಯರಿತ ಗಂಡ ಮನೆಯೊಳಗಿದ್ದರೆ ಒಂದಲ್ಲ ನೂರು ಕೋಟಿ ರೂಪಾಯಿ ಇದ್ದಂತೆ.
ಈ ಹಿನ್ನೆಲೆಯಲ್ಲಿ ಶೇಕ್ಸ್ಪಿಯರನ ‘ಜೂಲಿಯಸ್ ಸೀಸರ್’ ಸೀಸರ್ ಮತ್ತು ಕಲ್ಪರ್ನಿಯರ ನಡುವೆ ನಡೆದ ಸಂವಾದದ ಕುರಿತು ಇಲ್ಲಿ ಚರ್ಚಿಸಲಾಗಿದೆ.
ಸೀಸರ್ ಹತ್ಯೆಗೀಡಾಗುವ ಹಿಂದಿನ ರಾತ್ರಿ ಬಹಳ ಭೀಕರವಾಗಿರುತ್ತದೆ. ಗದ್ದರಿಸುತ್ತದೆ, ಮಿಂಚುತ್ತದೆ. ಮಲಗಿ ನಿದ್ರಿಸುತ್ತಿದ್ದ ಕಲ್ಪರ್ನಿಯಾ ಕೆಟ್ಟ ಕನಸು ಕಂಡು ಚಿಟ್ಟನೇ ಚೀರಿ ಹಾಸಿಗೆಯಲ್ಲಿ ಎದ್ದು ಅರಚುತ್ತಾಳೆ. ರಾತ್ರಿ ಉಡುಪಿನಲ್ಲಿ ಹೊರಗೆ ಬಂದ ಸೀಸರ್ ಪತ್ನಿ ಕಲ್ಪರ್ನಿಯಾ ಕಂಡ ಕನಸಿನ ಕುರಿತು ಸ್ವಗತದಲ್ಲಿ ಮಾತನಾಡುತ್ತಾನೆ. ಇಂದು ಆಕಾಶವಾಗಲಿ, ಭೂಮಿಯಾಗಲಿ ಶಾಂತಿಯಿಂದಿಲ್ಲ. ಮಲಗಿದಾಗ ಕಲ್ಪರ್ನಿಯಾ ಮೂರು ಸಲ ಅರಚಿ ರೋದಿಸಿದಳು. ‘ಯಾರಾದರೂ ಸಹಾಯ ಮಾಡಿ, ಅವರು ಸೀಸರನನ್ನು ಹತ್ಯೆಗೈಯ್ಯುತ್ತಿದ್ದಾರೆ’ ಎಂದು. ಸೀಸರನಿಗೆ ಬಲಿ ಆಚರಣೆಯಲ್ಲಿ ನಂಬಿಕೆ ಇರುತ್ತದೆ. ಕೆಟ್ಟ ಕನಸು ಕಂಡರೆ ದೇವರನ್ನು ಸಮಾಧಾನಪಡಿಸಲು ಅವನಿಗೆ ಪ್ರಿಯವಾದ ವಸ್ತುವನ್ನು ಬಲಿ ಕೊಡಬೇಕು ಎಂದವನು ನಂಬಿರುತ್ತಾನೆ. ದೇವರಿಗೆ ಬಲಿಕೊಟ್ಟು ದೈವದ ಪ್ರತಿಫಲ ತಂದು ಒಪ್ಪಿಸುವಂತೆ ಪಾದ್ರಿಗೆ ಆದೇಶಿಸುತ್ತಾನೆ. ರಾತ್ರಿ ಕಂಡ ಕನಸು ಕಲ್ಪರ್ನಿಯಾಳ ಮನಸ್ಸಿನ ನೆಮ್ಮದಿ ಕೆಡಿಸುತ್ತದೆ. ಕನಸು ಅವಳ ನೆನಪಿನಲ್ಲಿ ಮೂರ್ತಿವತ್ತಾಗಿ ನಿಂತಿರುತ್ತದೆ, ಕ್ಷಣಕ್ಷಣಕ್ಕೂ ಅವಳಲ್ಲಿ ಭಯ ಹುಟ್ಟಿಸುತ್ತದೆ. ಪತಿಯ ಜೀವಕ್ಕಿರುವ ಅಪಾಯದ ಮುನ್ಸೂಚನೆ ಕಂಡು ಕನಸು ಎಂದವಳು ನಂಬುತ್ತಾಳೆ. ಪತಿ ಅರಮನೆ ಬಿಟ್ಟು ಕದಲದಂತೆ ನೋಡಿಕೊಳ್ಳಲು ಅವನ ಹತ್ತಿರ ಧಾವಿಸಿ ಬಂದು, ಹೊರಗೆ ಹೋಗಲು ಯೋಚಿಸುತ್ತಿದ್ದೀರಾ? ಇಂದು ನೀವು ಮನೆ ಬಿಟ್ಟು ಕದಲುವಂತಿಲ್ಲ' ಎಂದು ಪತಿಯ ಮೇಲೆ ಪ್ರೀತಿಯ ಹಕ್ಕೊತ್ತಾಯ ಮಾಡುತ್ತಾಳೆ. ಕಲ್ಪರ್ನಿಯಾಳ ಮಾತಿನಲ್ಲಿ ಪತಿಯ ಮನಃಪರಿವರ್ತನೆಯ ಉದ್ದೇಶವಿರುತ್ತದೆ, ಹೆಂಗಸಿನ ಮಾತನ್ನು ಉದಾಸೀನ ಮಾಡುವ ಅಧಿಕಾರಸ್ಥ ಗಂಡಿನ ಮನವನ್ನು ಒಲಸಿಕೊಳ್ಳುವ ಹಠವಿರುತ್ತದೆ. ಆದರೆ ಸೀಸರ್‌ನಿಗೆ ತನ್ನ ಪೌರುಷದಲ್ಲಿ ಅಧಿಕಾರದಲ್ಲಿ ನಂಬಿಕೆಯಿರುತ್ತದೆ. ತಾನು ಅಸಾಮಾನ್ಯ; ಹೀಗಾಗಿ ಸಾಮಾನ್ಯ ಹೆಂಗಸಿನ ಮಾತು ಕೇಳಿ ಶಾಸನ ಸಭೆಗೆ ಹೋಗದಿರುವುದು ಹೇಡಿತನ ಎಂದು ಭಾವಿಸುತ್ತಾನೆ.
ಸೀಸರ್ ಹೋಗೇ ತೀರುತ್ತಾನೆ. ಯಾವ ದುಷ್ಟ ಜೀವಿಗಳೂ ಸೀಸರನ ಮುಖಕ್ಕೆ ಮುಖಕೊಟ್ಟು ಹೆದರಿಸಲು ಸಾಧ್ಯವಿಲ್ಲ. ಬೆನ್ನ ಹಿಂದೆ ತಿರುಗಿ ನೋಡಬೇಕಷ್ಟೆ. ಸೀಸರನ ಮುಖ ಕಂಡಕ್ಷಣವೇ ಹೇಳ ಹೆಸರಿಲ್ಲದಂತೆ ಮಟ್ಟ ಮಾಯವಾಗುತ್ತವೆ' ಎಂದು ತನ್ನ ಪೌರುಷ ಮೆರೆಯುತ್ತಾನೆ. ಆದರೆ ಪೌರುಷ ಕೂಡ ಕಾಲಕ್ಕೆ ತಲೆ ಬಾಗಲೇಬೇಕು. ಕಾಲವನ್ನು ಲಘುವಾಗಿ ಕಾಣದಿರುವಂತೆ, ದೈವದ ದೈತ್ಯಶಕ್ತಿಗೆ ತಲೆಬಾಗುವಂತೆ ಕಲ್ಪರ್ನಿಯಾ ಗಂಡನನ್ನು ಕೋರುತ್ತಾಳೆ. ಭೂಮಿ ಆಕಾಶದಲ್ಲಿ ಸಂಭವಿಸಿದ ಅಪಶಕುನಗಳು ದುರಂತವನ್ನು ಸಂಕೇತಿಸುತ್ತವೆ. ಹೀಗಾಗಿ ತಾನು ಭಯಗ್ರಸ್ಥಳಾಗಿದ್ದೇನೆ ಎಂದು ಹೇಳಿದರೂ ಸೀಸರ್ ಪತ್ನಿಯ ಓಲೈಕೆಗೆ ಬಗ್ಗುವುದಿಲ್ಲ. ದೇವರ ಇಚ್ಛೆಯನ್ನು ತಳ್ಳಿಹಾಕಲು ಯಾರಿಗೆ ತಾನೆ ಸಾಧ್ಯ? ಆದರೂ ಸೀಸರ್ ಹೋಗೇ ತೀರುತ್ತಾನೆ. ಈ ಅಪಶಕುನಗಳು ಜಗತ್ತಿಗೆ ಅನ್ವಯಿಸುವಂತೆ ಸೀಸರನಿಗೂ ಅನ್ವಯಿಸುತ್ತವೆ, ಅಷ್ಟೆ' ಎಂದು ಹೇಳುತ್ತಾನೆ.
ಭಿಕ್ಷಕರು ಸತ್ತರೆ ಆಕಾಶದಲ್ಲಿ ಧೂಮಕೇತು ಕಾಣಿಸಿಕೊಳ್ಳುವುದಿಲ್ಲ. ರಾಜಕುಮಾರರ ಸಾವಿಗೆ ಆಕಾಶವೇ ಬೆಂಕಿ ಕಾರುತ್ತದೆ' ಎಂದು ಹೇಳಿ ಪತಿಯ ಪ್ರಾಣಕ್ಕಿರುವ ಮಹತ್ವವನ್ನು ಸೀಸರನಿಗೆ ಮನವರಿಕೆ ಮಾಡಿಕೊಡಲು ಕಲ್ಪರ್ನಿಯಾ ಪ್ರಯತ್ನಿಸುತ್ತಾಳೆ.
ಪತ್ನಿಯ ಮಾತಿನ ಹಿಂದಿರುವ ಕಾಳಜಿ ಸೀಸರ ಅರ್ಥಮಾಡಿಕೊಳ್ಳುವುದಿಲ್ಲ. ಅವಳ ಜೊತೆ ವಾದ ಮಾಡುತ್ತಾನೆ. ಆದರೆ ಜೀವನದ ಸಮಸ್ಯೆಯನ್ನು ವಾದದ ತರ್ಕದಿಂದ ಬಿಡಿಸಲು ಬಂದೀತೆ? ರತಿಸುಖ ನೀಡುವುದಷ್ಟೇ ಪತ್ನಿಯ ಕೆಲಸವಲ್ಲ. ಪತಿಯ ರಕ್ಷಣೆಯೂ ಅವಳಿಗೇ ಸೇರಿದ್ದು. ಆದರೆ ತಾನೇ ಶಕ್ತಿಶಾಲಿ, ತನ್ನ ರಕ್ಷಣೆ ತನಗೆ ಮಾತ್ರ ಸೇರಿದ್ದು, ಪತ್ನಿ ಪತಿಯ ರಕ್ಷಣೆಗೆ ನಿಲ್ಲುವಷ್ಟು ಸದೃಢಳೂ, ಸಬಲಳೂ ಅಲ್ಲ ಎಂದು ಪತಿ ತಿಳಿದರೆ ಸಂಕಷ್ಟ ತಪ್ಪಿದ್ದಲ್ಲ. ಸೀಸರ್ ಇದಕ್ಕೆ ಹೊರತಾಗಿರಲಿಲ್ಲ. ಅದಕ್ಕೆ ಅವನು ತನ್ನ ಪೌರುಷವನ್ನು ಸ್ಥಾಪಿಸುವ, ಮರುಸ್ಥಾಪಿಸುವ ಕೆಲಸ ಮಾಡುತ್ತಾನೆ. ಹೇಡಿಯಾದವನು ಸಾಯುವುದಕ್ಕಿಂತ ಮುನ್ನವೇ ಅನೇಕ ಬಾರಿ ಸತ್ತಿರುತ್ತಾನೆ. ಧೀರನಾದವನು ಸಾವಿನ ರುಚಿ ಒಂದೇ ಸಲ ಅನುಭವಿಸುತ್ತಾನೆ. ಅತ್ಯಂತ ವಿಚಿತ್ರವಾಗಿ ಕಾಣುವ ಸಂಗತಿಯೇನೆಂದರೆ ಸಾವು ಜೀವನಕ್ಕೆ ಅಂತ್ಯ ಹಾಡುತ್ತದೆ. ಬರುವ ಹೊತ್ತಿಗೆ ಅದು ಬಂದೇ ಬರುತ್ತದೆಂದು ಗೊತ್ತಿದ್ದರೂ ಸಾವಿಗೆ ಹೆದರುವ ಮನುಷ್ಯ ನಾನು ಇಲ್ಲಿಯವರೆಗೆ ಕೇಳಿದ ಆಶ್ಚರ್ಯಗಳಲ್ಲಿಯೇ ಹೆಚ್ಚು ಕೌತುಕವಾಗಿ ಕಾಣುತ್ತಾನೆ.'
ಭಯಗ್ರಸ್ಥನಾಗಿ ಸೀಸರ್ ಮನೆಯಲ್ಲಿ ಇರುವುದಾದರೆ, ಅವನು ಹೃದಯರಹಿತ ವ್ಯಗ್ರ ಪ್ರಾಣಿಯೇ ಆಗಿರಬೇಕು. ಇಲ್ಲ, ಸೀಸರ್ ಹೋಗೇ ಹೋಗುತ್ತಾನೆ. ಸೀಸರ್ ತನಗಿಂತ ಹೆಚ್ಚು ಅಪಾಯಕಾರಿಯೆಂದು ಭಯಕ್ಕೆ ಚೆನ್ನಾಗಿ ಗೊತ್ತಿದೆ. ನಾವಿಬ್ಬರೂ ಒಂದೇ ದಿನದಂದು ಕಣ್ಣು ತೆರೆದ ಎರಡು ಸಿಂಹಗಳು, ನಾನು ಹಿರಿಯ, ಹೆಚ್ಚು ಭಯಾನಕ. ಸೀಸರ್ ಹೋಗೇ ತೀರುತ್ತಾನೆ' ಎಂದು ಮತ್ತೆ ತನ್ನ ಪೌರುಷ ಮೆರೆಯುತ್ತಾನೆ. ತನ್ನ ಅಹಂಕಾರದಲ್ಲಿ, ತನ್ನ ದೈಹಿಕ ಶಕ್ತಿ-ಸಾಮರ್ಥ್ಯದಲ್ಲಿ ಇರುವಷ್ಟು ನಂಬಿಕೆ ಪತ್ನಿಯ ಮಾತಿನಲ್ಲಿ ಸೀಸರನಿಗೆ ಇರುವುದಿಲ್ಲ. ಹೊತ್ತು ಕಳೆದಂತೆ ಕಲ್ಪರ್ನಿಯಾಳ ಚಡಪಡಿಕೆ, ಅಸಹಾಯಕತೆ ಹೆಚ್ಚುತ್ತ ಹೋಗುತ್ತದೆ. ಶಾಸನಸಭೆಗೆ ಹೋಗದಂತೆ ಸೀಸರ್‌ನನ್ನು ತಡೆಯಲು ತನಗೆ ತಿಳಿದ ಸರ್ವ ಪ್ರಯತ್ನ ಮಾಡುತ್ತಾಳೆ. ತನ್ನ ವಿನಂತಿ, ಪ್ರಾರ್ಥನೆ ಮನ್ನಿಸದ ಸೀಸರ್‌ನನ್ನು ಚೇಡಿಸುತ್ತಾಳೆ, ಲೇವಡಿ ಮಾಡುತ್ತಾಳೆ.
`ನಿಮ್ಮ ವಿವೇಕ ನಿಮ್ಮ ಅಂಧ ಆತ್ಮವಿಶ್ವಾಸದಲ್ಲಿ ನಷ್ಟವಾಗಿ ಹೋಗಿದೆ. ಇಂದು ನೀವು ಹೊಸ್ತಿಲದಾಚೆಗೆ ಕಾಲಿಡುವಂತಿಲ್ಲ. ಬೇಕಾದರೆ ನನ್ನನ್ನು ಹೇಡಿ ಎಂದೇ ಭಾವಿಸಿ. ಅ್ಯಂಟೋನಿಯನ್ನು ಶಾಸನಸಭೆಗೆ ಕಳಿಸೋಣ. ನಿಮಗೆ ಮೈಯಲ್ಲಿ ಹುಷಾರಿಲ್ಲವೆಂದು ಅವನು ಶಾಸನ ಸಭೆಗೆ ತಿಳಿಸಲಿ. ನನ್ನ ಕೋರಿಕೆ ಮನ್ನಿಸುವಂತೆ ನಿಮ್ಮ ಮುಂದೆ ಮೊಂಡೆಯೂರಿ, ಸೆರಗೊಡ್ಡಿ ಬೇಡುವೆ' ಎಂದು ಕಲ್ಪರ್ನಿಯಾ ಹೇಳಿದರೂ ಸೀಸರ್ ತನ್ನ ಕಠಿಣ ನಿರ್ಧಾರ ಬದಲಿಸುವುದಿಲ್ಲ. ಒಂದು ಹಂತದಲ್ಲಿ ಕಲ್ಪರ್ನಿಯಾಳ ಕೋರಿಕೆಯನ್ನು ಮನ್ನಿಸಿ, ತನ್ನ ಮನಸ್ಸಿನ ವಿರುದ್ಧ, ತನ್ನ ಮೈಯಲ್ಲಿ ಹುಷಾರಿಲ್ಲವೆಂದು ಶಾಸನ ಸಭೆಗೆ ಸುದ್ದಿ ಕಳಿಸಲು ಸೀಸರ್ ಒಪ್ಪುತ್ತಾನೆ. ಆದರೆ ಸಂಚುಕೋರರ ಗುಂಪಿನ ಸದಸ್ಯ ಡೆಶಿಯಸ್ ಸೀಸರನಲ್ಲಿ ಸುಪ್ತವಾಗಿ ಹುದುಗಿದ ಅಹಂಕಾರವನ್ನು ಬಡೆದೆಬ್ಬಿಸುತ್ತಾನೆ. ಕೂಡಲೇ ಸೀಸರ್ ತನ್ನ ನಿರ್ಧಾರ ಬದಲಿಸಿ ಹೆಂಗಸಿನ ಮಾತು ಕೇಳಿ ಸುಳ್ಳು ಸುದ್ದಿ ಕಳಿಸಲು ಸಿದ್ಧನಾಗಿದ್ದಕ್ಕೆ ಪಶ್ಚಾತ್ತಾಪಪಟ್ಟು, ಸಭೆಗೆ ಹೋಗುತ್ತಾನೆ. ಸ್ನೇಹಿತರ, ಹಿತೈಷಿಗಳ ವೇಷ ಧರಿಸಿದ ಹಂತಕರಿಂದ ಹತ್ಯೆಗೀಡಾಗುತ್ತಾನೆ.
ಪತ್ನಿಯ ಮಾತು ಕೇಳಿದರೆ ಸೀಸರ್ ತನ್ನ ಪ್ರಾಣ ಉಳಿಸಿಕೊಳ್ಳಬಹುದಾಗಿತ್ತು. ಹೊಣೆಯರಿತ ಪತ್ನಿ, ಪತಿಯ ಬಗೆಗೆ ನಿಜವಾದ ಪ್ರೀತಿ, ವಿಶ್ವಾಸ ಹೊಂದಿದ ಪತ್ನಿ, ಅವನ ಏಳಿಗೆಯಲ್ಲಿ ಸುಖ-ಸಂತೋಷಪಡುವ ಪತ್ನಿ ನೀಡಿದ ಎಚ್ಚರಿಕೆಯನ್ನು ಸ್ವೀಕರಿಸದ ಪತಿಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹೆಣ್ಣಿನ ಶಕ್ತಿ-ಸಾಮರ್ಥ್ಯ ಅಮಾನ್ಯ ಮಾಡಬಾರದು, ಹೆಣ್ಣು ನೀಡುವ ಸಲಹೆ, ಸೂಚನೆ ನಿರ್ಲಕ್ಷಿಸಬಾರದು. ಹೆಣ್ಣಿನ ಬುದ್ಧಿ ಮೊಳಕಾಲ ಕೆಳಗೆ, ಅವಳಿಗೆ ಜೀವನದ, ಜಗತ್ತಿನ ಅನುಭವವಿಲ್ಲ, ಅವಳು ಭಾವನಾಜೀವಿ, ಅವಳು ಬೌದ್ಧಿಕವಾಗಿ ವಿಚಾರಿಸಲಾರಳು ಎಂಬ ಸರಳ ತೀರ್ಮಾನಕ್ಕೆ ಬಂದರೆ ಸೀಸರನಿಗೆ ಒದಗಿದ ಆಪತ್ತು ನಮಗೂ ಒದಗುತ್ತದೆ. ‘ಜೂಲಿಯಸ್ ಸೀಸರ್’ ನಾಟಕದಲ್ಲಿ ಬರುವ ಬ್ರೂಟಸ್ ಮತ್ತು ಸೀಸರ್ ಇಬ್ಬರೂ ತಮ್ಮ ಪತ್ನಿಯರ ಸಲಹೆ ಸ್ವೀಕರಿಸುವುದಿಲ್ಲ. ಪತ್ನಿಯ ಮಾತು ಕೇಳದ್ದಕ್ಕೆ ಸೀಸರನ ಹತ್ಯೆಯಾದರೆ ಬ್ರೂಟಸ್ ಆತ್ಮಹತ್ಯೆ ಮಾಡಿಕೊಂಡು ದಾರುಣವಾಗಿ ಸಾವನ್ನಪ್ಪುತ್ತಾನೆ. ಪೋರ್ಶಿಯಾ, ಕಲ್ಪರ್ನಿಯಾರಂಥ ಪತ್ನಿಯರು ನೀಡಿದ ಸಲಹೆಗಳನ್ನು ಕಣ್ಣು ಮುಚ್ಚಿ ಸ್ವೀಕರಿಸಬೇಕು. ಏಕೆಂದರೆ ಅವರು ಕಣ್ಣು ತೆರೆಯಿಸುವ ಪತ್ನಿಯರು, ತಮ್ಮ ಪತಿಗಳ ಪ್ರಾಣ ರಕ್ಷಣೆಗೆ ಎಂಥ ಸಾಹಸ, ತ್ಯಾಗಕ್ಕೂ ಸಿದ್ಧರಿರುವ ಪತ್ನಿಯರು. ಒಳ್ಳೆಯ ಪತಿಯನ್ನು ಪಡೆಯುವುದು ಪತ್ನಿಯ ಸೌಭಾಗ್ಯವಾದರೆ ಒಳ್ಳೆಯ ಪತ್ನಿಯನ್ನು ಪಡೆಯುವುದು ಪತಿಯ ಸೌಭಾಗ್ಯವೂ ಅಗಿದೆ. ಎಲ್ಲದಕ್ಕೂ ಬೇಡಿ ಬರಬೇಕು, ಸಿಕ್ಕಿದ್ದನ್ನು ಜೋಪಾನ ಮಾಡಿಕೊಂಡು ಹೋಗಬೇಕು.