ಅಂತರಂಗದ ಬಾಹ್ಯರೂಪ ವ್ಯಕ್ತಿತ್ವ
ಸ್ವಭಾವ' ಮಾನವನ ಆಂತರಿಕ ಗುಣಲಕ್ಷಣಗಳ ಛಾಯಾರೂಪವಾದರೆ
ವ್ಯಕ್ತಿತ್ವ' ಅದರ ಬಾಹ್ಯರೂಪ. ಬಹುತೇಕರಿಗೆ ಈ ಎರಡೂ ಪದಗಳು ಸಮಾನಾರ್ಥಕವಾಗಿ ಕಂಡುಬರಬಹುದು; ಆದರೆ ವಿಶ್ಲೇಷಣೆಯು ಅವುಗಳ ನಡುವಿನ ವ್ಯತ್ಯಾಸದ ಛಾಯೆಗಳನ್ನು ತೋರಿಸುತ್ತದೆ. ವ್ಯಕ್ತಿತ್ವ ಪದದ ವ್ಯಾಖ್ಯಾನ ಹೀಗಿದೆ: “ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಆತನ ವೈಯಕ್ತಿಕ ಗುಣನಡತೆಗಳು, ನಡವಳಿಕೆಗಳು, ಅಭ್ಯಾಸಗಳು, ನೋಟ ಮತ್ತು ಇತರ ಗಮನಿಸಬಹುದಾದ ವೈಯಕ್ತಿಕ ವಿಶಿಷ್ಟತೆಗಳನ್ನು ಒಳಗೊಂಡಿರುತ್ತದೆ.” ಈ ವಿಚಾರಗಳ ಬಗ್ಗೆ ವ್ಯಕ್ತಿಗೆ ಅರಿವಿರಲಿ ಇಲ್ಲದಿರಲಿ; ಪ್ರಕೃತಿಯು ಪ್ರತಿಯೊಬ್ಬರಿಗೂ ವ್ಯಕ್ತಿತ್ವದ ಮುಖವಾಡವನ್ನು ತೊಡಿಸಿದ್ದು ಆ ಮೂಲಕ ಬಾಹ್ಯಪ್ರಪಂಚ ಆತನ ಸ್ವಭಾವವನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡಿದೆ. ಆಂತರಿಕ ಸ್ವಭಾವ ಮತ್ತು ಬಾಹ್ಯ ವ್ಯಕ್ತಿತ್ವ ಎರಡರಲ್ಲೂ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನ ಪಥವನ್ನು ಸುತ್ತುತ್ತಾನೆ ಮತ್ತು ತನ್ನ ಪಾಲಿನ ಪಾತ್ರವನ್ನು ನಿಭಾಯಿಸುತ್ತಾನೆ.
ನಾವಿಕ ಅಥವಾ ಸೈನಿಕ; ರೈತ ಅಥವಾ ವಿದ್ವಾಂಸ ಅಥವಾ ಕಾರ್ಮಿಕ-ಇವರುಗಳ ಹಿನ್ನೆಲೆಯ ಬಗ್ಗೆ ಒಮ್ಮೆ ನೀವು ನೋಟ ಹರಿಸಿದರೆ ಅವರುಗಳ ಪ್ರಜ್ಞಾಹೀನ ಮನಸ್ಸು ವಿಷಯದ ಮೇಲೆ ಪ್ರಭಾವಿತವಾಗಿರುವುದನ್ನು ಕಾಣಬಹುದು ಮತ್ತು ಅವರ ಸಾಮಾಜಿಕ ಸ್ಥಾನಮಾನವನ್ನು (ನಾವಿಕ, ಸೈನಿಕ, ರೈತ ಇತ್ಯಾದಿ) ಗುರುತಿಸಬಹುದು. ಮನಸ್ಸು ರಹಿತವಾದ ವ್ಯಕ್ತಿಯ; ಸ್ವಾಭಿಮಾನರಹಿತವಾದ ವ್ಯಕ್ತಿಯ; ಜೀವನದಲ್ಲಿ ಸೋತವನ ಅಥವಾ ಕಳ್ಳನ ಅಥವಾ ಜಿಪುಣನ ಮುಖವನ್ನೊಮ್ಮೆ ವೀಕ್ಷಿಸಿ. ಒಬ್ಬ ಪರೋಪಕಾರಿ, ಭಿಕ್ಷಕ, ವಿದ್ವಾಂಸ, ಪೊಲೀಸ್, ವಕೀಲ, ವಿದ್ಯಾರ್ಥಿ, ಕಲಾವಿದ-ಹೀಗೆ ವಿವಿಧ ಸ್ಥಾನಮಾನ ಹೊಂದಿರುವ ಈ ಎಲ್ಲರ ಮುಖಗಳನ್ನು ಹೋಲಿಸಿ ನೋಡಿ ಮತ್ತು ಈ ಎರಡು ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿ. ಮೊದಲನೆಯದಾಗಿ; ಈ ವಿಭಿನ್ನ ಅಭಿವ್ಯಕ್ತಿಗಳು ಮೂಲಭೂತವಾಗಿ ದೈಹಿಕವೇ ಅಥವಾ ಮಾನಸಿಕವೇ? ಎರಡನೆಯದಾಗಿ; ಈ ಮಾನಸಿಕ ಕಾರಣಗಳು ಮುಖದ ಮತ್ತು ಇತರ ಸ್ನಾಯುಗಳ ಮೇಲೆ ಪ್ರಜ್ಞೆಯಲ್ಲಿ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರಭಾವಿಸುವ ಕಾರಣವೇ? ಈ ಎರಡೂ ಪ್ರಶ್ನೆಗಳಿಗೆ ಲಭ್ಯವಿರಬಹುದಾದ ಉತ್ತರ ನಮಗೆ ಈ ಒಂದು ಸತ್ಯದರ್ಶನ ಮಾಡಿಸುತ್ತವೆ. ಅದೇನೆಂದರೆ; ನಮ್ಮಲ್ಲಿ ಪ್ರತಿಯೊಬ್ಬರೊಳಗೂ ಇರುವ ಸುಪ್ತಮನಸ್ಸು ನಮ್ಮ ದೇಹದ ಮೇಲೆ ಪರಿಣಾಮ ಬೀರುವ ಮತ್ತು ಮಾನಸಿಕ ಸ್ಥಿತ್ಯಂತರಗಳನ್ನು ಭೌತಿಕ ದೇಹದ ಮೂಲಕ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ. ಇನ್ನೊಬ್ಬ ವ್ಯಕ್ತಿಯ ಮಾನಸಿಕ ಕ್ಷೇತ್ರದೊಳಗೆ ಇಣುಕಿ ನೋಡುವುದು ಮತ್ತು ಆತನ ಆಂತರಿಕ ಸ್ವಭಾವವನ್ನು ತಿಳಿಯುವುದು ಅಥವಾ ಅಲ್ಲಿ ರೂಪುಗೊಂಡ ಸ್ವಭಾವದ ಸಂಯೋಜನೆಯನ್ನು ನಮ್ಮ ಇಂದ್ರಿಯಗಳ ಮೂಲಕ ಅರ್ಥೈಸುವುದು ಅಸಾಧ್ಯ. ವ್ಯಕ್ತಿಯ ವ್ಯಕ್ತಿತ್ವದ ಬಾಹ್ಯಲಕ್ಷಣಗಳನ್ನು ಅರ್ಥೈಸಲು, ಕಲಿಯಲು ಸಾಧ್ಯವಾದರೆ ಆ ವ್ಯಕ್ತಿಯ ಆಂತರಿಕ ಸ್ವಭಾವವನ್ನು ತಿಳಿಯುವಲ್ಲಿ ಸುಲಭವಾಗಬಹುದು. ಕಾಣುವ ಹೊರಭಾಗದಿಂದ ಕಾಣದ ಒಳಭಾಗವನ್ನು ಊಹಿಸಬಹುದು.
ವ್ಯಕ್ತಿಯ ಮುಖದ ಬಾಹ್ಯ ಅಭಿವ್ಯಕ್ತಿಯು ನಮಗೆ ಆತನ ಆಂತರಿಕ ಮನಃಸ್ಥಿತಿಯನ್ನು ವಿವರಿಸುತ್ತದೆ. ಮುಖಸಾಮುದ್ರಿಕ ಶಾಸ್ತ್ರವು (ಫಿಸಿಅನಾಮಿ) ವ್ಯಕ್ತಿಯ ಮುಖಲಕ್ಷಣಗಳನ್ನು ಸಮಗ್ರವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಮತ್ತು ವಿಶ್ಲೇಷಣೆ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ಮುಖಸಾಮುದ್ರಿಕ ಶಾಸ್ತ್ರವು ಮುಖದ ಲಕ್ಷಣಗಳಿಂದ ಮನಸ್ಸಿನ ಉದ್ವೇಗ ಮತ್ತಿತರ ವಿಶಿಷ್ಟ ಗುಣಲಕ್ಷಣಗಳನ್ನು ಕಂಡುಹಿಡಿಯುವ ಅಥವಾ ಓದುವ ಕಲೆ ಮತ್ತು ವಿಜ್ಞಾನವಾಗಿದೆ. “ಮಾನಸಿಕ ಸ್ಥಿತಿಗಳು ಬಾಹ್ಯರೂಪದಲ್ಲಿ ಪ್ರಕಟವಾಗುತ್ತವೆ” ಎಂಬುದು ಇದರ ಮೂಲ ಸಿದ್ಧಾಂತ. ಬಹುತೇಕ ಪ್ರತಿಯೊಬ್ಬರೂ ಮೊದಲ ಬಾರಿಗೆ ಭೇಟಿಯಾಗುವ ವ್ಯಕ್ತಿಯ ಗುಣ, ಲಕ್ಷಣ, ವೈಶಿಷ್ಟ್ಯಗಳನ್ನು ಆತನ ಮುಖವನ್ನು ಕಣ್ಣಿಂದಲೇ ಸ್ಕ್ಯಾನ್ ಮಾಡುವ ಮೂಲಕ ಆತನ ವ್ಯಕ್ತಿತ್ವದ ಬಗ್ಗೆ ಒಂದು ಪ್ರಾಥಮಿಕ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ. ಸಣ್ಣ ಮಕ್ಕಳು ಮತ್ತು ಸಾಕುಪ್ರಾಣಿಗಳು ವ್ಯಕ್ತಿಯ ಮನೋಭಾವವನ್ನು ನಿಖರವಾಗಿ ಗುರುತಿಸುವಲ್ಲಿ ಪ್ರಕೃತಿಸಹಜವಾದ ಜ್ಞಾನ ಮತ್ತು ಸಾಮರ್ಥ್ಯ ಹೊಂದಿವೆ.
ಎಲ್ಲಾ ಮನುಷ್ಯರು ಕಣ್ಣು, ಬಾಯಿ, ಮೂಗು, ಗಲ್ಲ ಇತ್ಯಾದಿ ಸಾಮಾನ್ಯ ರೂಪ ಮತ್ತು ಲಕ್ಷಣಗಳನ್ನು ಹೊಂದಿದ್ದರೂ ಪ್ರತಿಯೊಬ್ಬನೂ ವಿಭಿನ್ನ ಮುಖ ಮತ್ತು ನೋಟವನ್ನು ಹೊಂದಿರುತ್ತಾನೆ. ಮಾತ್ರವಲ್ಲ, ಒಂದೇ ವ್ಯಕ್ತಿ ವಿವಿಧ ಸನ್ನಿವೇಶಗಳಲ್ಲಿ ವಿವಿಧ ಮುಖಭಾವಗಳನ್ನು ಪ್ರದರ್ಶಿಸುತ್ತಾನೆ. ವ್ಯಕ್ತಿಯ ತಲೆಯಿಂದ ಪಾದದವರೆಗಿನ ರೂಪ, ಗಾತ್ರ, ಕ್ರಿಯೆ ಸ್ವಲ್ಪಮಟ್ಟಿಗೆ ವ್ಯಕ್ತಿಯ ಸ್ವಭಾವ ಅಥವಾ ಮನಃಸ್ಥಿತಿಯನ್ನು ಮತ್ತು ಆ ಸಂದರ್ಭದಲ್ಲಿ ಆತ ಪಾಲ್ಗೊಂಡಿರುವ ಕ್ರಿಯೆಯನ್ನು ಸೂಚಿಸುತ್ತದೆ. ಕಮಾನುಗೊಂಡ ಹುಬ್ಬುಗಳು, ಪೂರ್ಣ ಅಥವಾ ಭಾಗಶಃ ತೆರೆದ ಕಣ್ಣುಗಳು, ತುಟಿಗಳ ಅದುರುವಿಕೆ, ದೃಢವಾದ ದವಡೆ, ಎತ್ತರಿಸಿದ ತಲೆ, ಎತ್ತರಿಸಲ್ಪಟ್ಟ ಭುಜಗಳು, ದೃಢವಾದ ಮುಖಭಾವ, ಗಾಂಭೀರ್ಯಭರಿತ ನಡಿಗೆ ಅಥವಾ ಇದಕ್ಕೆ ವ್ಯತಿರಿಕ್ತವಾದ ಭಯಪೂರಿತ ಹೆಜ್ಜೆಗಳು-ಇವೆಲ್ಲವುಗಳು ವ್ಯಕ್ತಿಯನ್ನು ವೀಕ್ಷಿಸುವವನಿಗೆ ಆತನೊಳಗೆ ಬದಲಾಗುತ್ತಿರುವ ಚಿತ್ತಸ್ಥಿತಿಗಳನ್ನು ಪ್ರಕಟಪಡಿಸುತ್ತವೆ. ಪ್ರತಿಯೊಂದು ಮಾನಸಿಕ ಅಂಗಗಳು ಅದರದ್ದೇ ಆದ ಸಹಜ ಭಾಷೆಯನ್ನು ಹೊಂದಿದ್ದು, ಇದು ತಲೆ, ಕೈ ಮತ್ತು ದೇಹದ ಸನ್ನೆಗಳು ಮತ್ತು ಆಂಗಿಕಚಲನೆಗಳಿಂದ ಪ್ರದರ್ಶಿಸಲ್ಪಡುತ್ತದೆ. ಮಕ್ಕಳು ಮತ್ತು ಪ್ರಾಣಿಗಳು ತಮ್ಮ ಪೋಷಕರು ಅಥವಾ ಯಜಮಾನರ ಭಾವನೆಗಳನ್ನು ಅವರ ಚಲನೆ ಮತ್ತು ವರ್ತನೆಗಳಿಂದ ಓದುತ್ತವೆ ಮತ್ತು ಅವುಗಳು ಪದಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ.
ಮೆದುಳು ಪ್ರೇರಣೆ ಮತ್ತು ಮಾನಸಿಕ ಶಕ್ತಿಯ ಮೂಲ ಕೇಂದ್ರವಾಗಿದೆ. ಪ್ರತಿಯೊಂದು ಕ್ರಿಯೆಯು ಮೆದುಳು ಮತ್ತು ಅದರ ಸಂಪರ್ಕಜಾಲದಲ್ಲಿ ಅದರ ಮೂಲ ಮತ್ತು ಪ್ರಚೋದನೆಯ ಸ್ಥಾನವನ್ನು ಹೊಂದಿದೆ. ಬಾಹ್ಯ ಚಲನೆಗಳು ಆಂತರಿಕ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಮನಸ್ಸಿನ ಅಭ್ಯಾಸದ ಸ್ಥಿತಿಗಳು ಮುಖದಲ್ಲಿ ಮತ್ತು ದೇಹದಲ್ಲಿ ಅಭಿವ್ಯಕ್ತಿಗಳನ್ನು ಉಂಟುಮಾಡುತ್ತವೆ. ದೀರ್ಘಕಾಲದಿಂದ ನೋವಿನಿಂದ ಬಳಲುತ್ತಿರುವ ವ್ಯಕ್ತಿಯ ಮುಖದಲ್ಲಿ ಆಂತರಿಕ ಸ್ಥಿತಿಯ ಅಭಿವ್ಯಕ್ತಿಯಾದ ವೇದನೆಯ ಗೆರೆಗಳನ್ನು ಕಾಣಬಹುದು. ಮುಖವು ಸುಂದರವಾಗಿಲ್ಲದಿದ್ದರೂ ಸದಾ ಸಂತೋಷದಿಂದಿರುವ ವ್ಯಕ್ತಿ ತನ್ನ ಮುಖದಲ್ಲಿ ಬೆಳಕನ್ನು ಧರಿಸಿರುತ್ತಾನೆ. ಕಾಳಜಿ ಮತ್ತು ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿ ಅದನ್ನು ತನ್ನ ನಡಿಗೆ ಮತ್ತು ಧ್ವನಿಯಲ್ಲಿ ಪ್ರತಿಫಲಿಸುತ್ತಾನೆ. ಇನ್ನೊಬ್ಬರ ಅಧೀನಕ್ಕೊಳಗಾದ ವ್ಯಕ್ತಿಯ ಚಲನವಲನ ಮತ್ತು ಮುಖಭಾವದಲ್ಲಿ ಅವಮಾನ, ಅಸಂತೋಷ, ಜಿಗುಪ್ಸೆಗಳು ಪ್ರಕಟವಾಗುತ್ತವೆ. ಈ ಎಲ್ಲಾ ಅನುಭವಗಳ ಆಧಾರದಲ್ಲಿ ಮುಖಸಾಮುದ್ರಿಕ ಶಾಸ್ತ್ರಜ್ಞರು ಮನುಷ್ಯರ ಮುಖಗಳನ್ನು ಪ್ರಮುಖವಾಗಿ ಮೂರು ವರ್ಗಗಳಲ್ಲಿ ಗುರುತಿಸುತ್ತಾರೆ: ದುಂಡಗಿನ ಮುಖ; ಉದ್ದನೆಯ ಮುಖ ಮತ್ತು ಪೇರುಹಣ್ಣಿನಾಕೃತಿಯ (ಪಿಯರ್) ಮುಖ. ಇಷ್ಟೇ ಅಲ್ಲದೆ, ಇನ್ನು ಹಲವು ಬಗೆಯ ಆಕೃತಿಗಳನ್ನು ಹೊಂದಿರುವ ಮುಖಗಳನ್ನು ಹಾಗೂ ಅವುಗಳ ಮುಖ ಲಕ್ಷಣಗಳ ಆಧಾರದಲ್ಲಿ ಆಯಾ ವ್ಯಕ್ತಿಗಳ ಆಂತರಿಕ ಗುಣಲಕ್ಷಣಗಳನ್ನು ಸವಿಸ್ತಾರವಾಗಿ ನಮೂದಿಸಿದ್ದಾರೆ.
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ
ಬತ್ತವದನು ವಿಚಾರಯುಕ್ತಿಗಳು ಕುಟ್ಟೆ
ತತ್ತ್ವ ತಂಡುಲ ದೊರೆಗುಮದು ವಿವೇಚಿತತತ್ತ್ವ
ನಿತ್ಯ ಭೋಜನ ನಮಗೆ-ಮಂಕುತಿಮ್ಮ
ನಮ್ಮ ಮನಸ್ಸಿನನುಭವಗಳು ಭಾವನೆಗಳು ಮತ್ತು ಆಲೋಚನೆಗಳೆಲ್ಲವೂ ಭತ್ತದ ಹಾಗೆ. ಇವನ್ನು ವಿಮರ್ಶೆ ಮತ್ತು ವಿವೇಕಗಳೆಂಬ ಒನಕೆಗಳಿಂದ ಕುಟ್ಟಿದಾಗ, ಸಿದ್ಧಾಂತವೆಂಬ ಅಕ್ಕಿ ನಮಗೆ ಸಿಗುತ್ತದೆ. ಈ ಸಾರಾಸಾರ ವಿಚಾರ ಮಾಡಿ ದೊರಕಿದ ಸಿದ್ಧಾಂತವೇ ನಮಗೆ ಪ್ರತಿದಿನದ ಊಟ.