ವಾತ, ಪಿತ್ತ, ಕಫ ಎಂಬ ತ್ರಿದೋಷದ ಸುತ್ತ
ಮಾನವನ ದೇಹಕ್ಕೆ ಆರೋಗ್ಯವನ್ನು ಕೆಡಿಸಲು ಹಲವಾರು ವಿಧದ ಕಾಯಿಲೆಗಳು ಸಾಲಾಗಿ ಬರುವುದನ್ನು ನಾವುಗಳು ಪ್ರಸ್ತುತ ವಿದ್ಯಮಾನದಲ್ಲಿ ಕಾಣುತ್ತಿದ್ದೇವೆ. ಅವುಗಳಲ್ಲಿ ವಾತ, ಪಿತ್ತ ಮತ್ತು ಕಫ ಎನ್ನುವ ಮೂರು ಪದಗಳ ದೋಷವೂ ಒಂದು. ಇದು ನಿಮ್ಮ ದೇಹವು ಏನನ್ನು ಯೋಚಿಸುತ್ತದೆ ಮತ್ತು ಆರೋಗ್ಯ ಸ್ಥಿತಿ ಏನು ಎಂಬುದನ್ನು ಕಂಡುಹಿಡಿಯುವ ಕೀಲಿಯಾಗಿದೆ.
ಸಾಮಾನ್ಯವಾಗಿ ಆಹಾರ ಸೇವನೆಯಲ್ಲಿ ವ್ಯತ್ಯಾಸವಾದಾಗ ಪಿತ್ತ ಕಾಡುತ್ತದೆ. ವಾತ ಎಂದರೆ ದೇಹದಲ್ಲಾಗುವ ಚಲನೆ ಎನ್ನಬಹುದು. ದೇಹ ಮತ್ತು ಮನಸ್ಸಿನೊಳಗಿನ ಚಲನೆಯ ಪ್ರಮುಖ ಶಕ್ತಿಯನ್ನು ವಾತ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಉಸಿರಾಟ, ರಕ್ತ ಪರಿಚಲನೆ, ಮಾನಸಿಕ ಚಟುವಟಿಕೆಗಳು, ಜೀರ್ಣಾಂಗಗಳ ಜಂಟಿ ಚಲನೆಗಳು ಸೇರಿವೆ. ವಾತವು ದೇಹದ ಎಲ್ಲಾ ಜೀವಕೋಶಗಳಲ್ಲಿ ಇರುತ್ತದೆ. ದೊಡ್ಡ ಕರುಳು, ಮೊಣಕಾಲುಗಳು, ಚರ್ಮ, ಕಿವಿ ಮತ್ತು ಸೊಂಟ ಭಾಗಗಳು ಈ ದೋಷದ ಪ್ರಮುಖ ಸ್ಥಳಗಳಾಗಿವೆ. ಇದರಿಂದ ಚರ್ಮ ಮತ್ತು ಕೂದಲಿನ ಒರಟುತನ, ಕಿವಿಗಳು, ತುಟಿಗಳು ಅಥವಾ ಕೀಲುಗಳ ಶುಷ್ಕತೆ. ಜೀರ್ಣಕ್ರಿಯೆಯಲ್ಲಿ ತೊಂದರೆ, ಹೊರಹೋಗಲು ಕಷ್ಟಕರವಾದ ಗಟ್ಟಿಯಾದ ಮಲ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ತೂಕ ಇಳಿಕೆ, ದೇಹ-ನೋವು, ದಣಿವು, ನಾಲಗೆಗೆ ರುಚಿ ಸಿಗದೇ ಇರುವಿಕೆ, ದೇಹದಲ್ಲಿ ಶಕ್ತಿ ನಷ್ಟ, ನಿದ್ರೆ ಕೊರತೆಯಂತಹ ಸಮಸ್ಯೆಗಳಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅನಾರೋಗ್ಯದಿಂದ ಮನುಷ್ಯ ಬಳಲುತ್ತಾನೆ. ಇನ್ನು ಕಫ ದೋಷ ದೇಹದ ಶ್ವಾಸನಾಳದ ಲೋಳೆಯ ಪೊರೆಗಳಿಂದ ಉತ್ಪತ್ತಿಯಾಗುವ ದಪ್ಪ, ಜಿಗುಟಾದ ವಸ್ತುವಾಗಿದೆ. ಇವುಗಳನ್ನು ಬಿಳಿ, ಕೆಂಪು, ಕಪ್ಪು, ಹಳದಿ ಕಫಗಳೆಂದು ವರ್ಗೀಕರಿಸಿದ್ದು ಕಫವು ದೇಹಕ್ಕೆ ಬರುವ ನ್ಯೂಮೋನೀಯ, ಆಸ್ತಮಾ, ಸೈನಸ್, ಅಲರ್ಜಿ, ಶ್ವಾಸಕೋಶ ಕಾಯಿಲೆಗಳ ಬರುವಿಕೆಯನ್ನು ಮೊದಲೇ ತಿಳಿಸುವ ಮಾಪನವಾಗಿದೆ. ಕಫವು ಶ್ವಾಸಕೋಶದಲ್ಲಿ ಕೂರದಂತೆ ಎಚ್ಚರ ವಹಿಸಬೇಕು. ಇದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್, ಪಿತ್ತ ದೋಷಗಳು ಎಲ್ಲವೂ ಹೆಚ್ಚಾಗುತ್ತದೆ.
ಪರಿಣಾಮವಾಗಿ ಹೊಟ್ಟೆ ಭಾರ, ಎದೆಉರಿ, ಹಸಿವೇ ಇಲ್ಲದಿರುವುದು, ಪದೇ ಪದೇ ತೇಗು ಬರುವಿಕೆಗಳು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಪಿತ್ತ ಹೆಚ್ಚಾದಾಗ ವಿಪರೀತ ತಲೆನೋವು, ವಾಕರಿಕೆ ಅಥವಾ ವಾಂತಿ, ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ.
ವಿವಿಧ ರೀತಿಯ ಆಹಾರ ಸೇವನೆ, ಹೆಚ್ಚು ಕಾಫಿ, ಟೀಗಳನ್ನು ಕುಡಿಯುವುದರಿಂದ ದೇಹದಲ್ಲಿ ಪಿತ್ತ ಉಂಟಾಗುತ್ತದೆ. ಮಸಾಲಾ ಪದಾರ್ಥಗಳನ್ನು ಒಳಗೊಂಡ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಮತ್ತು ಅತಿಯಾಗಿ ನಿದ್ದೆಗೆಡುವುದರಿಂದಲೂ ಪಿತ್ತ ಉಂಟಾಗುತ್ತದೆ. ಹುಳಿತೇಗು, ಹೊಟ್ಟೆಯುರಿ ಪಿತ್ತವಾದಾಗ ಕಾಣಿಸಿಕೊಳ್ಳುವ ಮೊದಲ ಲಕ್ಷಣವಾಗಿದೆ. ಆಗಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದುಕೊಂಡರೆ ಸಮಸ್ಯೆ ಬಗೆಹರಿಯುತ್ತದೆ. ಇಲ್ಲವಾದರೆ ವಾಂತಿ, ಎದೆನೋವು, ಸ್ನಾಯುಗಳ ನೋವಿನಂತಹ ಗಂಭೀರ ಸಮಸ್ಯೆಗಳು ಆರಂಭವಾಗುತ್ತವೆ. ಹಾಗಾಗಿ ಮಲಗುವ ಮೊದಲು ಬಿಸಿ ನೀರು ಕುಡಿಯುವುದು ಈ ಕಾಯಿಲೆ ನಿವಾರಣೆಗೆ ಒಳ್ಳೆಯದು.
ಸಾಮಾನ್ಯವಾಗಿ ದೇಹದಲ್ಲಿ ಅಧಿಕ ಉಷ್ಣತೆಯಿಂದಲೂ ಈ ರೀತಿಯ ಪಿತ್ತ ಉಂಟಾಗುತ್ತದೆ. ಹಾಗಾಗಿ ಕಣಿಲೆ, ನಾಟಿ ಕೋಳಿ, ಅಣಬೆಗಳಂತಹ ಅತೀ ಉಷ್ಣತೆಯಿಂದ ಕೂಡಿದ ಆಹಾರವನ್ನು ರಾತ್ರಿ ಹೊತ್ತು ಬಳಸುವುದನ್ನು ನಿಯಂತ್ರಿಸಿದಲ್ಲಿ ಉತ್ತಮ. ಧಾನ್ಯಗಳಾದ ಓಟ್ಸ್, ಅಕ್ಕಿ, ಗೋಧಿ ಸೇವಿಸುವುದು ಉತ್ತಮ. ಇನ್ನು ಎಲ್ಲಾ ರೀತಿಯ ತರಕಾರಿಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದು. ಹಸುವಿನ ಹಾಲು, ಮೊಸರು, ತುಪ್ಪವನ್ನು ನಿಯಮಿತವಾಗಿ ಸೇವಿಸಬೇಕು.
ಕಫ ದೋಷ ಇರುವವರು ಧೂಮಪಾನ, ಶೀತ ವಸ್ತುಗಳಿಂದ ದೂರವಿರಬೇಕು. ಪಿತ್ತ ಇರುವವರು ಕಾಫಿ, ಚಾಕಲೇಟ್, ಟೊಮೆಟೊ, ಪುದೀನ, ಸಿಟ್ರಸ್, ಸೋಡಾ ಮತ್ತು ಕೊಬ್ಬಿನ ಪದಾರ್ಥಗಳನ್ನು ತ್ಯಜಿಸಿದಲ್ಲಿ ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ ಊಟವಾದ ಬಳಿಕ ಸ್ವಲ್ಪ ದೂರ ನಡೆಯುವ ಅಭ್ಯಾಸ ಆಹಾರವನ್ನು ಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಪ್ರತಿನಿತ್ಯ ಮುಂಜಾನೆ ವೇಗ ನಡಿಗೆ ಮತ್ತು ವ್ಯಾಯಾಮ ಸಹ ಈ ತ್ರಿದೋಷಗಳನ್ನು ಹೋಗಲಾಡಿಸಲು ತುಂಬಾನೇ ಒಳ್ಳೆಯದು.
ನಿವಾರಣೆಗೆ ಹೀಗೆ ಮಾಡಿ…
ಏಲಕ್ಕಿ ಪುಡಿ, ಜೀರಿಗೆ ಪುಡಿಯೊಂದಿಗೆ ಸ್ವಲ್ಪ ಕರಿಮೆಣಸು ಬೆರೆಸಿ ನೆಲ್ಲಿಕಾಯಿ ಗಾತ್ರದಲ್ಲಿ ಗುಳಿಗೆ ತಯಾರಿಸಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸೇವಿಸಿ ಹಾಗೂ ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಕುಡಿಯುವುದರಿಂದ ಪಿತ್ತ ನಿವಾರಣೆಯಾಗುತ್ತದೆ. ಏಲಕ್ಕಿ, ಕಾಳುಮೆಣಸು ಇವುಗಳ ಕಷಾಯ ಮಾಡಿ ಕುಡಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ. ಹುಳಿ ಮಜ್ಜಿಗೆಯಲ್ಲಿ ಜೀರಿಗೆ ಪುಡಿ ಉಪ್ಪು ಸೇರಿಸಿ ಕುಡಿಯುವಿಕೆ, ಒಂದು ಟೀ ಚಮಚ ಹುಣಸೆ ಗೊಜ್ಜಿನಲ್ಲಿ ಅರ್ಧ ಟೀ ಚಮಚದಷ್ಟು ಜೀರಿಗೆ ಪುಡಿಯನ್ನು ಬೆರೆಸಿ. ಇದನ್ನು ಜೇನುತುಪ್ಪದೊಂದಿಗೆ ನಾಲ್ಕೈದು ದಿನಗಳವರೆಗೆ ಮಿತವಾಗಿ ಸೇವಿಸುತ್ತಿದ್ದರೆ ಪಿತ್ತಶಮನ ಆಗುವುದು. ಊಟದ ನಂತರ ಒಂದು ಚೂರು ಶುಂಠಿ ಅಗಿದು ತಿನ್ನುವುದು, ಸಿಪ್ಪೆ ಸಹಿತ ಸೇಬುಹಣ್ಣು, ಮಾವಿನ ಹಣ್ಣು, ಪರಂಗಿ ಹಣ್ಣುಗಳನ್ನು ಮಿತ-ಹಿತವಾಗಿ ತಿನ್ನುವುದರಿಂದ ಪಿತ್ತದೋಷಕ್ಕೆ ಅವಕಾಶ ಇರದು.