ಅಂದು, ಇಂದು, ಎಂದೆಂದಿಗೂ ಅಭಿವೃದ್ಧಿಯ ಮಾದರಿ ಕ್ಷೇತ್ರ
ಬೆಂಗಳೂರು: ಶಿಕಾರಿಪುರ ಅಂದು, ಇಂದು, ಎಂದೆಂದಿಗೂ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವಾಗಿಯೇ ಕೊಂಡೊಯ್ಯುವುದು ನನ್ನ ಕರ್ತವ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಶಿಕಾರಿಪುರದ ಮಹಾಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ಇಂದಿಗೆ ಒಂದು ವರ್ಷ. ಬಿ. ಎಸ್. ಯಡಿಯೂರಪ್ಪ ಅವರಂತೆ ನನ್ನ ಮೇಲೂ ಅಗಾಧ ವಿಶ್ವಾಸವಿರಿಸಿ ಆಶೀರ್ವಾದ ಮಾಡಿದ್ದರ ಪ್ರತಿಫಲವೋ ಅಥವಾ ಪೂರ್ವಜನ್ಮದ ಸುಕೃತವೋ ಎಂಬಂತೆ ಜನರ ನಿರೀಕ್ಷೆಯಂತೆ ಸಾಗುವ ಹಾದಿಯಲ್ಲಿ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನ ನೀಡಿ ಮಹತ್ವದ ಜವಾಬ್ದಾರಿ ಹೆಗಲಿಗೇರಿಸಿದರು.
ಗುರುತರ ಜವಾಬ್ದಾರಿ ಹೆಗಲಿಗೇರಿದ ಬೆನ್ನಲ್ಲೇ ರಾಜ್ಯದ ಪಕ್ಷದ ಕಾರ್ಯಕರ್ತ ಬಂಧುಗಳು ಹೇಗೆ ಸಹಕಾರ ಕೊಟ್ಟರೋ, ಅದಕ್ಕೂ ಮಿಗಿಲಾಗಿ ಶಿಕಾರಿಪುರದ ಮತದಾರ ಬಂಧುಗಳು ಅಷ್ಟೇ ಪ್ರೀತಿ, ವಿಶ್ವಾಸವಿಟ್ಟು ಬೆಂಬಲಪೂರ್ವಕವಾಗಿ ಜತೆ ನಿಂತಿದ್ದಾರೆ.
ಜನಪ್ರತಿನಿಧಿಗಳಾಗಿ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವುದು ನಮ್ಮ ಕರ್ತವ್ಯ, ಅನಿರೀಕ್ಷಿತವಾಗಿ ಎದುರಾದ ಬರ ರೈತರನ್ನು, ಶ್ರಮಿಕ ವರ್ಗದ ಜನರನ್ನು ಕೊಂಚ ಬಾಧಿಸಿದೆ, ಲೋಕಸಮರ ಮುಗಿದ ಬೆನ್ನಲ್ಲೇ ಎಲ್ಲೆಡೆ ವರ್ಷಧಾರೆಯ ಸಿಂಚನ ಭೂತಾಯ ಒಡಲನ್ನು ತಂಪೆರೆಯುವ ಮೂಲಕ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಇನ್ನು ಮುಂದೆ ಉತ್ತಮ ಕಾಲದ ಆರಂಭವಾಗಲಿದೆ ಎಂಬ ಭರವಸೆಯೊಂದಿಗೆ ಸಾಗೋಣ, ನನ್ನ ಹೆಗಲ ಮೇಲೆ ಎಷ್ಟೇ ಎತ್ತರದ ಜವಾಬ್ದಾರಿ ಇದ್ದರೂ ನನ್ನ ಕುಟುಂಬವೇ ಆಗಿರುವ ಶಿಕಾರಿಪುರದ ಸಹೃದಯ ಬಂಧುಗಳ ಧ್ವನಿಯಾಗಿ ನಿಲ್ಲುವೆ, ಅಭಿವೃದ್ಧಿ ಕಾರ್ಯಗಳು ಸಾಗುತ್ತಲೇ ಇರುವಂತೆ ಕಣ್ಗಾವಲಾಗಿರುವೆ. ಶಿಕಾರಿಪುರ ಅಂದು, ಇಂದು, ಎಂದೆಂದಿಗೂ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವಾಗಿಯೇ ಕೊಂಡೊಯ್ಯುವುದು ನನ್ನ ಕರ್ತವ್ಯ ಹಾಗೂ ಮಹಾ ಸಂಕಲ್ಪ.
ನಿಮ್ಮ ಹೃನ್ಮನಸ್ಸಿನ ಆಶೀರ್ವಾದವೇ ನನಗೆ ಶ್ರೀರಕ್ಷೆ🙏 ಎಂದಿದ್ದಾರೆ.