ಅಂದು ಏಕಾಂಗಿಯಾಗಿ ನಿಂತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು…
ನಿರಾಶ್ರಿತರಾಗಿರುವ ಸಂಕಷ್ಟಿತ ಜನರ ನೆರವಿಗೆ ಸರ್ಕಾರ ಸ್ಪಂದಿಸುತ್ತಿರುವ ರೀತಿ ಸಮಾಧಾನಕರ ಹಾದಿಯಲ್ಲಿ ಸಾಗುತ್ತಿಲ್ಲ
ಬೆಂಗಳೂರು: ಅಂದು ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೆರೆ ಹಾವಳಿಯಂತಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ನಿಂತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನಿರಂತರ ಸುರಿಯುತ್ತಿರುವ ರಣಮಳೆಯಿಂದ ರಾಜ್ಯದ ಹಲವೆಡೆಗಳಲ್ಲಿ ಗುಡ್ಡಗಳು ಕುಸಿಯುತ್ತಿವೆ, ಕೆರೆ-ಕಟ್ಟೆಗಳು ಒಡೆದು ಸಾವು ನೋವುಗಳು ಸಂಭವಿಸುತ್ತಿವೆ, ಅನೇಕ ಕಡೆಗಳಲ್ಲಿ ಜನ ತಮ್ಮ ಮನೆ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಾಶ್ರಿತರಾಗಿರುವ ಸಂಕಷ್ಟಿತ ಜನರ ನೆರವಿಗೆ ಸರ್ಕಾರ ಸ್ಪಂದಿಸುತ್ತಿರುವ ರೀತಿ ಸಮಾಧಾನಕರ ಹಾದಿಯಲ್ಲಿ ಸಾಗುತ್ತಿಲ್ಲ.
ಈ ಹಿಂದಿನ ಕರ್ನಾಟಕ ಬಿಜೆಪಿ ಸರ್ಕಾರದ (2020ರ) ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಏಕಾಂಗಿಯಾಗಿ ನಿಂತು ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದ ಜನರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪಗಳಿಗೆ ನಿಗದಿಯಾಗಿದ್ದ ಪರಿಹಾರದ ಮೊತ್ತದ ಮಿತಿಯನ್ನು ಬದಿಗೆ ಸರಿಸಿ ಆಶ್ರಯವಿಲ್ಲದೆ ಪರಿತಪಿಸುತ್ತಿದ್ದ ಸಂತ್ರಸ್ಥ ಜನರಿಗೆ ತುರ್ತಾಗಿ ಮನೆ ಪುನರ್ ನಿರ್ಮಿಸಿಕೊಳ್ಳಲು 1 ಲಕ್ಷದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಿ ಜಖಂಗೊಂಡ ಮನೆಗಳಿಗೆ 40 ಸಾವಿರದಿಂದ ಒಂದು ಲಕ್ಷ ರೂಪಾಯಿ ಗಳಿಗೆ ಏರಿಸಿ ಪರಿಹಾರವನ್ನು ವಿತರಿಸಿದ್ದರು, ಹಾಗೆಯೇ ಸಂತ್ರಸ್ತರಿಗೆ ತಕ್ಷಣವೇ ರೂಪಾಯಿ 10,000 ನೀಡಿ, ಸಂತ್ರಸ್ತರು ಹೊಸ ಮನೆ ಕಟ್ಟಿಕೊಳ್ಳುವವರೆಗೆ ಮಾಸಿಕ 5,000 ರೂ. ಬಾಡಿಗೆ ನೀಡಲು ಆದೇಶಿಸಿದ್ದರು. ರಾಜ್ಯ ಸರ್ಕಾರ ಇದೇ ಮಾದರಿಯಲ್ಲಿ ಹೆಚ್ಚಿನ ಪರಿಹಾರವನ್ನು ಸದ್ಯ ಸಂಕಷ್ಟಿತರಿಗೆ ತತ್ ಕ್ಷಣದಲ್ಲಿ ವಿತರಿಸಿ ಸಾವು ನೋವುಗಳ ನಡುವೆ ಅಸಹನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಜನರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.